ಬೆಳೆ ಸಾಲಮನ್ನಾ ಯೋಜನೆ ಯಶಸ್ವಿಗೆ ಡಿಸಿ ಕೂರ್ಮಾರಾವ್ ಕರೆ
ಯಾದಗಿರಿಃ ಸರ್ಕಾರವು ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲಮನ್ನಾ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಯಾದಗಿರಿ ನಗರದ ಎಸ್‍ಬಿಐ (ಎಡಿಬಿ), ಪಿಕೆಜಿಬಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಿಗೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಕರ್ನಾಟಕ ಸರಕಾರವು ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಒಂದು ತಂತ್ರಾಂಶವನ್ನು ತಂದಿದ್ದು, ಅದಕ್ಕಾಗಿ ಯಾದಗಿರಿ ಜಿಲ್ಲೆಯಲ್ಲಿ ಜಾರಿ ಮಾಡಲು ಕೆಲ ನಿರ್ದೇಶನಗಳನ್ನು ನೀಡಿದೆ. ಅದಕ್ಕಾಗಿ ಜಿಲ್ಲೆಯ ಎಲ್ಲಾ ರೈತ ಬಾಂಧವರು ನೀಡಿರುವ ಸೂಚನೆಗಳನ್ನು ಪಾಲಿಸಿ, ಸದರಿ ಬೆಳೆ ಸಾಲ ಮನ್ನಾ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.
ಪ್ರತಿಯೊಬ್ಬ ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ತಾವು ಸಾಲ ಪಡೆದ ಸರ್ವೆ ನಂಬರ್‍ನ ಮಾಹಿತಿ ತಪ್ಪದೇ ಸಲ್ಲಿಸಬೇಕು. ಪಹಣಿ ಪತ್ರಿಕೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು,
ತದನಂತರದ ರೈತರಿಗೆ ಕ್ರಮ ಬದ್ಧವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ, ಟೋಕನ್‍ಗಳನ್ನು ನೀಡಲಾಗುವುದು. ಟೋಕನ್‍ನಲ್ಲಿ ನೀಡಿದ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ರೈತರ ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಮತ್ತು ಭೂಮಿಯ ಸರ್ವೆ ನಂಬರ್ ವಿವರಗಳನ್ನು ಒದಗಿಸಬೇಕು ಎಂದು ಅವರು ತಿಳಿಸಿದರು.
ಅರ್ಹರಿರುವ ಎಲ್ಲಾ ರೈತರಿಗೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೋಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಲಾಗಿದೆ. ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ತಮ್ಮ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ, ಇದರ ಲಾಭವನ್ನು ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್‍ನ್ನು ಕೂಡ ನೀಡಲಾಗಿದೆ. ರೈತರಿಗೆ ಯಾವುದಾದರೂ ಗೊಂದಲ, ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ 08473-253703 ಸಂಖ್ಯೆಯನ್ನು ಸಂಪರ್ಕಿಸಿ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಗೋಪಾಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.