ಕನ್ನಡ ಬದುಕಿನ ಭಾಷೆಯಾಗಲಿ-ಪ್ರಭಾಕರ ಜೋಷಿ
ಬರಿ ಅಭಿಮಾನ ಬೇಡ ಕನ್ನಡ ಅನುಷ್ಠಾನವಾಗಲಿ-ಜೋಷಿ
ಯಾದಗಿರಿಃ ಗಡಿ ಭಾಗದಲ್ಲಿ ಕನ್ನಡ ಭಾಷೆಗೆ ಬರಿ ಅಭಿಮಾನ ತೋರಿದರೆ ಸಾಲದು ಮೊದಲು ಕನ್ನಡ ಭಾಷೆ ಅನುಷ್ಠಾನವಾಗಲಿ. ಬಾಯಿ ಮಾತಿನಿಂದ ಕನ್ನಡ ಪ್ರೀತಿ ಮಮತೆ ತೋರಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕು ಎಂದು ಸೇಡಂನ ಸಾಹಿತಿ ಪ್ರಭಾಕರ ಜೋಷಿ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಮಂಗಳವಾರ ನಡೆದ ಹೈದ್ರಾಬಾದ್ ಕರ್ನಾಟಕ ಮತ್ತು ಕನ್ನಡದ ಬೆಳವಣಿಗೆ ಗೋಷ್ಠಿ-2 ರ ಭಾಗದಲ್ಲಿ ಗಡಿಭಾಗದಲ್ಲಿ ಕನ್ನಡದ ಸ್ಥಿತಿ ಗತಿ ಕುರಿತು ಮಾತನಾಡಿದರು.
ಸಾವಿರಾರು ವರ್ಷಗಳಿಂದ ಭಾಷೆಗಳನ್ನು ಕೇಳುತ್ತಾ ಬಂದಿದ್ದೇವೆ. ಉಪನ್ಯಾಸ, ಪುರಾಣ ಪುಣ್ಯಕಥೆಗಳನ್ನು ಕೇಳುತ್ತಾ ಬಂದಿದ್ದೇವೆ. ಆದಾಗ್ಯ ಇದುವರೆಗೂ ನಮ್ಮ ಕನ್ನಡ ಭಾಷೆ ಉನ್ನತಿಕರಣಕ್ಕೆ ತಲುಪುತ್ತಿಲ್ಲವೇಕೆ ಎಂಬುದನ್ನು ಚಿಂತನೆ ಮಾಡಬೇಕಿದೆ.
ಕನ್ನಡಿಗರು ಭಾವಜೀವಿಗಳು ನಿಜ. ಆದರೆ ವಾಸ್ತವಿಕ ಪ್ರಜ್ಞೆ ಅರಿತು ನಡೆದುಕೊಳ್ಳಬೇಕಾಗುತ್ತದೆ. ಕನ್ನಡದ ಪ್ರಸ್ತುತ ಸ್ಥಿತಿ ಗತಿ ಏನಿದೆ. ಗಡಿ ಭಾಗದಲ್ಲಿ ಕನ್ನಡಿಗರಿಗಾಗುವ ತೊಂದರೆಗಳೇನು. ಗಡಿ ಭಾಗದಲ್ಲಿ ವಾಸಿಸುವ ಕನ್ನಡಗರಿಗೆ ಯಾವ ಸೌಲಭ್ಯ ಕಲ್ಪಿಸಬೇಕು. ಕನ್ನಡ ಬೆಳೆಯಬೇಕಾದರೆ ಸರ್ಕಾರ ಗಡಿ ಭಾಗಕ್ಕೆ ಒತ್ತು ನೀಡುವ ಅಗತ್ಯವಿದೆ.
ಮೂಲ ಸೌಲಭ್ಯ ಕಲ್ಪಿಸುವ ಜೊತೆಗೆ ಕನ್ನಡದ ಕಂಪನ್ನು ಹರಿಸಬೇಕಿದೆ. ಬರಿ ಅಭಿಮಾನವಾಗಿ ಅಲ್ಲ ಅದನ್ನು ಅಕ್ಷರಸಹ ಕಾರ್ಯರೂಪಕ್ಕೆ ತರಬೇಕು. ವಾಸತವಿಕ ನೆಲೆಗಟ್ಟಿನಲ್ಲಿ ಇಲ್ಲಿನ ಜನರ ಬದುಕ ಜೀವನ ಕುರಿತು ಅಧ್ಯಯನ ನಡೆಸುವ ಮೂಲಕ ಕನ್ನಡದ ಜನ ಬೆಳೆಯಲು ಬೇಕಾಗು ಸೌಲಭ್ಯ ಸಹಕಾರ ನೀಡಬೇಕಿದೆ. ಇಲ್ಲಿನ ನೆಲ, ಭಾಷೆ, ಜಲ, ಸಂಸ್ಕøತಿ ಉಳಿವಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು.
ಕನ್ನಡಿಗರು ಪರಸ್ಪರರು ಸೌಹಾರ್ಧಯುತವಾಗಿ ಬದುಕು ನಡೆಸಬೇಕು. ಯಾವುದೇ ಜಾತಿ ಧರ್ಮ ಎನ್ನದೆ ಕನ್ನಡಿಗರೆಲ್ಲ ಒಂದಾಗಬೇಕು ಎಂದರು. ಡಾ.ಸ್ವಾಮಿರಾವ್ ಕುಲಕರ್ಣಿ ಕನ್ನಡ ಕಟ್ಟಿದವರ ಬಗ್ಗೆ ಕುರಿತು ಸವಿಸ್ತಾರವಾಗಿ ರಾಜ್ಯದ ಮೂಲೆ ಮೂಳೆಯಲ್ಲಿ ನಡೆದ ಸಂಘ, ಸಂಸ್ಥೆ ಮತ್ತು ಕನ್ನಡದ ಕಟ್ಟಾಳು ಸಾಹಿತ್ಯ ಸಂಘಗಳನ್ನು ಮೊದಲಾಗಿ ಸ್ಮರಿಸಿದರು.
ಗೋಷ್ಠಿ ಅಧ್ಯಕ್ಷತೆವಹಿಸಿದ್ದ ಡಾ.ಬಸವರಾಜ ಸಬರದ ಮಾತನಾಡಿ, ಸಮ್ಮೇಳನದಲ್ಲಿ ಆಪ್ತ ಸಂವಾದ. ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕುರಿತು ಚಿಂತನೆ ನಡೆಯುವಂತ ಗೋಷ್ಠಿಗಳು ನಡೆಯಬೇಕು. ಈ ಭಾಗದ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವರಲ್ಲಿ ಆ ಚಿಂತನಾ ಶಕ್ತಿಯೂ ಇಲ್ಲ. ಅವರ ಕೆಲಸವೇ ಬೇರೆ. ಗೆದ್ದು ಬಂದ ಮೇಲೆ ಅವರು ಸಾಮಾಜಿಕ ಸೇವೆ ಬಿಟ್ಟು ತಮ್ಮ ಸೇವ್ ಮಾಡಿಕೊಳ್ಳುತ್ತಾ ಹಣದ ಗಳಿಕೆಗೆ ಬೀಳುವದು ಸಾಮಾನ್ಯವಾಗಿದೆ.
ಕನ್ನಡಿಯಲ್ಲಿ ನೀರಾವರಿ ತೋರಿಸಿದ್ದಾರೆ. ಈ ಭಾಗದಲ್ಲಿ ಸಮರ್ಪಕ ನೀರಾವರಿ ಕೆಲಸವಾಗಿಲ್ಲ. ನಗರದ ಪಕ್ಕದಲ್ಲಿ ನದಿಗಳನ್ನು ಇಟ್ಟುಕೊಂಡು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಮೈಸೂರ ಬೆಂಗಳೂರ ಭಾಗದಲ್ಲಿ ಸಾಕಷ್ಟು ಪ್ರಗತಿ ಕಂಡಿವೆ. ಹೈಕ ಭಾಗ ಅಂದರೆ ಎಲ್ಲರಿಗೂ ಇರಿಸು ಮುರಿಸು.
ಅಲ್ಲದೆ ಕನ್ನಡ ಸಾಹಿತ್ಯ ಚರಿತ್ರೆ ಪುಸ್ತಕಗಳನ್ನು ಬರೆದ ಮೈಸೂರ ಭಾಗದ ಜನರು ಹೈಕ ಭಾಗದ ಕೊಡುಗೆ ಮರೆತಿದ್ದಾರೆ. ಬರಿ ಕಾಲ್ಪನಿಕ ಸುಳ್ಳು ಕಥೆಗಳನ್ನು ಚರಿತ್ರೆಯಲ್ಲಿ ಇಳಿಸಿದ್ದಾರೆ ಇದು ವಿಷಾಧ ಸಂಗತಿ ಎಂದರು. ವೇದಿಕೆ ಮೇಲೇ ಸರ್ವಾಧ್ಯಕ್ಷ ಸಿದ್ಧರಾಮ ಹೊನ್ಕಲ್, ಬಸವರಾಜ ಚಂಡ್ರಿಕಿ, ಶಾಂತಪ್ಪ ಬೂದಿಹಾಳ, ಗವಿಸಿದ್ಧ ಕಕ್ಕೇರಾ ಉಪಸ್ಥಿತರಿದ್ದರು.
ನಟ ಯಶ್ ಕಾರ್ಯ ಶ್ಲಾಘನೀಯ-ಸಬರದ
ಚಿತ್ರ ನಟ ಯಶ್ ಕೊಪ್ಪಳದಲ್ಲಿ ಕೆರೆಯ ಹೂಳು ತೆಗೆಯುವ ಕೆಲಸ ಮಾಡಿರುವುದು ಶ್ಲಾಘನೀಯ. ರೈತರಿಗೆ ನೀರು ಒದಗಿಸುವ ಮೂಲಕ ನಾಡಿನ ಅನ್ನದಾತರಿಗೆ ಕೈಲಾದ ಸಹಾಯ ನೀಡಿದ್ದಾರೆ ಎಂದು ಸಾಹಿತಿ ಡಾ.ಬಸವರಾಜ ಸಬರದ ತಿಳಿಸಿದರು.
ಆದರೆ ಕನ್ನಡ ಚಲನ ಚಿತ್ರರಂಗದಲ್ಲಿ ಕಲಾವಿದರ ಸ್ಮಾರಕಕ್ಕೆ ನೂರಾರು ಎಕರೆ ಭೂಮಿ ನೀಡುವ ರಾಜ್ಯ ಸರ್ಕಾರ, ರೈತರ ಹಿತಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಬದುಕಿಗೆ ಎರಡು ಎಕರೆ ಭೂಮಿ ನೀಡದಿರುವುದು ಅವಲೋಕನ ಮಾಡುವಂತ ವಿಷಯ.
ಈ ಭಾಗದ ರೈತರು ಗುಳೇ ಹೊರಟಿದ್ದಾರೆ ಎಂದರೆ ನಮಗೆಲ್ಲ ಅವಮಾನ ಆ ಕಾರಣಕ್ಕಾಗಿ ಕೆರೆ ಹೂಳೆತ್ತೆಲು ಮೈಸೂರ ಭಾಗದಿಂದ ಯಶ್ ಬರಬೇಕೆ.? ಇಲ್ಲಿನವರಿಗೆ ಸೇವಾ ಮನೋಭಾವವಿಲ್ಲವೇ.? ನಾಲ್ಕಾರು ಜನ ಸೇರಿಕೊಂಡ ಆ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ಅಂತಹ ಕೆಲಸ ನಡೆಯಬೇಕಿದೆ.
ಅರಸೊತ್ತಿಗೆಯಲ್ಲಿದ್ದ ಹಿಂದಿನ ಈ ಭಾಗದ ಅರಸರು ಶಾಶ್ವತ ನೀರು ಕೊಡುವ ಕೆಲಸ ಮಾಡಲಿಲ್ಲ. ಮೈಸೂರ ಭಾಗದ ಅಂದಿನ ಅರಸು ತಮ್ಮಲ್ಲಿದ್ದ ಸಂಪತ್ತು, ಚಿನ್ನ ಒಡವೆ ಒತ್ತೆ ಇಟ್ಟು ಕನ್ನಂಬಾಡಿ ಡ್ಯಾಂ ಕಟ್ಟಿದರು. ಇಂದಿಗೂ ಆ ಭಾಗಕ್ಕೆ ಅದು ಸಂಜೀವಿನಿಯಾಗಿದೆ. ಅಲ್ಲಿನ ಜನರ ಬೆಳವಣಿಗೆಗೆ ಸತತ ಸಹಕಾರಿಯಾಗಿ ನಿಂತಿದೆ.
ಹೈಕ ಭಾಗದಲ್ಲಿ ನಾವು, ಜನಪ್ರತಿನಿಧಿಗಳು, ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಸೇರಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದಿದ್ದರೆ ಮುಂದೆ ಘೋರ ಪರಿಣಾಮ ಎದರುಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ನಿಟ್ಟಿನಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ಚಿಂತನೆಗಳು ನಡೆಯಬೇಕು ಎಂದು ಸಬರದ ಆಶಿಸಿದರು.