ಜೋಳದ ಹಾಲ್ದೆನೆ ಮೈತುಂಬಿರುವ ಕಾಲ
ತಿನ್ನಿ ಜೋಳದ ಸೀ-ತೆನೆ
ಜೋಳದ ಸೀತನಿ ಸುಗ್ಗಿಯ ಸಂಭ್ರಮ
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ, ಶಹಾಪುರ: ಬಿಳಿ ಜೋಳ ಕಾಳು ಕಟ್ಟುವ ಮುನ್ನ ಬೆಳೆಯಲ್ಲಿ ಕಂಡು ಬರುವ ಹಾಲ್ದೆನೆಗೆ ಸೀತನಿ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸೀತನಿ ದೊರೆಯುವ ಸಮಯ. ರೈತಾಪಿ ಜನರು ಈ ಹಿಂದೆ ಸೀತನಿ ತಿನ್ನಲೆಂದೇ ಹೊಲಕ್ಕೆ ಹೋಗುತ್ತಿದ್ದರು.
ಜೋಳದ ಹಾಲ್ತೆನೆಗಳನ್ನು ಬೆಂಕಿಯ ಕೆಂಡದಲ್ಲಿ ಸುಟ್ಟು ನಂತರ ಅವುಗಳನ್ನು ಬಡಿದು ರಸ ಭರಿತ ಹಸಿರು ಕಾಳುಗಳನ್ನು ಬೇರ್ಪಡಿಸಿ ಸವಿದರೆ, ಅದರ ರುಚಿ ಸವಿದವನೇ ಬಲ್ಲ. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರು ಒತ್ತಡದಲ್ಲಿರುವಾಗ ಇಂತದರ ಪರಿವು ಎಲ್ಲಿಂದ ಬರಲು ಸಾಧ್ಯ ಹೇಳಿ.
ಹಾಲು ತುಂಬಿದ ಜೋಳದ ಕಾಳುಗಳು ಸೇವಿಸಿದರೆ ಆರೋಗ್ಯಕರವಾಗಿರುತ್ತದೆ. ಅದು ಶಕ್ತಿ ಭರಿತವಾದ ಆಹಾರ. ಅದರ ರುಚಿಯೇ ವಿಭಿನ್ನ. ಹಿಂದೆ ಪ್ರಸ್ತುತ ಕಾಲವನ್ನು ಸೀತನಿ ಸುಗ್ಗಿ ಎಂದು ಕರೆಯುತ್ತಿದ್ದರು.
ಮನೆಯ ಕುಟುಂಬವೆಲ್ಲ ಬಂಡಿ ಕಟ್ಟಿಕೊಂಡು ಜೋಳದ ಹೊಲಕ್ಕೆ ಹೋಗಿ ಸೀತನಿ ತಿಂದು ಆನಂದ ಅನುಭವಿಸಿ ಬರುತ್ತಿದ್ದರು. ಹೀಗಾಗಿ ಸೀತನಿ ತಿನ್ನುವುದು ಎಂದರೆ ಅದೊಂದು ಸಂತಸ ಸಂಭ್ರಮ ಪಡುವ ಸಂಗತಿಯಾಗಿತ್ತು.
ಪ್ರಸ್ತುತ ರೈತಾಪಿ ವರ್ಗ ಲಾಭಕ್ಕಾಗಿ ಹತ್ತಿ, ಮೆಣಸಿನಕಾಯಿ, ತೊಗರಿ ಎಂದು ವಾಣಿಜ್ಯ ಬೆಳೆÉಗಳ ಹಿಂದೆ ಬಿದ್ದು, ಜೋಳ ಬಿತ್ತಣಿಕೆ ಕಡಿಮೆ ಮಾಡಿದ್ದಾರೆ.
ಜೋಳದ ಸೀತನಿ ಸಮಯದಲ್ಲಿ ಅದರ ಕಬ್ಬು ಸಹ ಸಿಹಿಯಾಗಿರುತ್ತದೆ. ಅದು ಸಹ ಹಿಂದೆ ಸೇವನೆ ಮಾಡುತ್ತಿದ್ದರು. ಸೀತನಿ ಕಬ್ಬೆಂದರೆ ಮಕ್ಕಳಲ್ಲಿ ಎಲ್ಲಿಲ್ಲದ ಸಂತಸ ಮೂಡುತಿತ್ತು.
ಅಲ್ಲದೆ ಸೀತನಿ ಕಬ್ಬು ಜಾನುವಾರುಗಳಿಗೂ ಸಹ ಪ್ರಿಯವಾದ ಆಹಾರ. ಮತ್ತು ಅವುಗಳಿಗೆ ಅದ್ಭುತವಾದ ಶಕ್ತಿ ನೀಡುವ ಔಷಧಿಯಾಗಿತ್ತು. ಇಂದು ಸೀತನಿ ಕಬ್ಬು ಮರೆಯಾಗಿದೆ. ರೈತನಿಗೆ ಉಸಿರಾಗಿ ನಿಂತಿರುವ ಎತ್ತುಗಳಿಗೆ ಹಸಿರು ಕಬ್ಬಿನ ದಂಟು, ಕೆಲವು ತೆನೆಗಳು ಸಿಗುವುದು ಜೋಳ ಕಾಳು ಕಟ್ಟುವ ಸಮಯದಲ್ಲಿ ಮಾತ್ರ.
ಹಿಂದೆ ರೈತ ಸೀತನಿ ಸವಿಯುತ್ತ ಎತ್ತುಗಳು ಹಸಿರು (ಬಾಟಿ) ಮೇಯುತ್ತ ಛಳಿಗಾಲದಲ್ಲಿ ಆನಂದದ ದಿನಗಳನ್ನು ಕಳೆಯುವ ಸಂದರ್ಭ ಈಗ ಕಂಡು ಬರುವುದಿಲ್ಲ. ರೈತಾಪಿ ವರ್ಗ ಇಂದು ಸೀತನಿ ಬಡಿಯುವುದು ಬಹುತೇಕ ಕಡಿಮೆ ಮಾಡಿದ್ದಾರೆ. ಕಾಳು ಕಟ್ಟಿದ ಹಾಲ್ದೆನೆಯಲ್ಲಿನ ಶಕ್ತಿ ಸಾಮಥ್ರ್ಯದ ಅರಿವು ಎಲ್ಲರಿಗೂ ತಿಳಿಯಬೇಕಾದದು ಬಹುಮುಖ್ಯವಾಗಿದೆ.
—-
ಹಿಂದೆ ಹೊಲದಿಂದ ಪಾಲಕರು ಬರುವುದೇ ತಡ ಮಕ್ಕಳು ಕಬ್ಬು ಸೀತನಿಗೆ ಮುಗಿ ಬೀಳುತ್ತಿದ್ದರು. ಸೀತನಿ ಸುಟ್ಟು ಬಡಿಯುವುದು ಒಂದು ಕಲೆ. ಎಲ್ಲರಿಗೂ ಅದು ಸುಗಮವಾಗಿ ಬರುವುದಿಲ್ಲ. ಸುಡುವುದರಲ್ಲಿ ಅದರ ರುಚಿ ಅಡಗಿರುತ್ತದೆ.
-ಮೈಲಾರಪ್ಪ ಸಗರ. ಹಿರಿಯ ರೈತ.