ಕಿಸಾನ್ ಸಮ್ಮಾನ್ಃ ಸಮರ್ಪಕ ಜಾರಿಗೆ ಡಿಸಿ ತಾಕೀತು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಪ್ರಗತಿ ಪರಿಶೀಲನೆ
ವಾರದಲ್ಲಿ ಯೋಜನೆ ಸಂಪೂರ್ಣ ಪ್ರಕ್ರಿಯೆ ಮುಗಿಸಲು ತಾಕೀತು
ರೈತರ ನೋಂದಣಿಗೆ ಮತ್ತೆ ಒಂದು ವಾರ ಗಡುವು – ಡಿಸಿ ಕೂರ್ಮಾರಾವ್
ಯಾದಗಿರಿ, ಶಹಾಪುರಃ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಸಮರ್ಪಕವಾಗಿ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಸಿಬ್ಬಂದಿ ತೆರಳಿ ಇನ್ನುಳಿದ ರೈತರ ಮನೆ ಮನೆ ತಲುಪಿ ಸಮರ್ಪಕ ಕಾಗದ ಪತ್ರಗಳನ್ನು ಪಡೆದುಕೊಂಡು ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಣಿ ಮಾಡಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.
ಇಲ್ಲಿನ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹಿಂದೆ ನೀಡಿದ ಗಡುವು ಇನ್ನೊಂದು ವಾರ ವಿಸ್ತರಣೆ ಮಾಡುತ್ತಲಿದ್ದು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮಾಭಿವೃದ್ಧಿ ಅಧಿಕಾರಿಗಳು ರೈತರ ಮನೆ ಮನೆಗೆ ತೆರಳಿ ಸಮರ್ಪಕ ದಾಖಲೆ ಪಡೆದುಕೊಂಡು ಕಿಸಾನ್ ಸಮ್ಮಾನ್ ಯೋಜನೆ ನೋಂದಣಿ ಮಾಡಿ.
ಪ್ರತಿ ಕುಟುಂಬಕ್ಕೊಂದು ಸಮ್ಮಾನ ಯೋಜನೆ ನೋಂದಣಿಗೊಳಿಸಬೇಕು. ಪ್ರತಿ ದಿನ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ತಮ್ಮ ಕರ್ತವ್ಯದ ಸ್ಥಳದಲ್ಲಿ ಹಾಜರಿದ್ದು, ಇನ್ನುಳಿದ ರೈತರ ನೋಂದಣಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಸಮಗ್ರ ಗುರಿ ಸಾಧನೆಗೆ ಇನ್ನೂ ಒಂದು ವಾರ ಕಾಲ ಗಡವು ವಿಸ್ತರಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಗುರಿ ತಲುಪಬೇಕು.
ಕೆಲವಡೆ ಹೊರಗುಳಿದ ರೈತರ ಸಂಪರ್ಕಕ್ಕೆ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ. ಅಂತವರ ಸಂಪರ್ಕ ಪಡೆದುಕೊಂಡು ಅವರಿಂದ ದಾಖಲಾತಿಗಳನ್ನು ತರಿಸಿಕೊಂಡು ನೋಂದಣಿ ಮಾಡಿಕೊಳ್ಳಬೇಕು.
ಕೇವಲ ಕಾಟಚಾರಕ್ಕಾಗಿ ಯೋಜನೆಯನ್ನು ನಿರ್ಲಕ್ಷ ಮಾಡಬೇಡಿ ಎಂದು ಅಧಿಕಾರಿಗಳಿಗೆ ತಾಖೀತು ಮಾಡಿದ ಜಿಲ್ಲಾಧಿಕಾರಿಗಳು, ರೋಬೋಗಳಾಗಿ ಬೇಜವಬ್ದಾರಿ ವಹಿಸಿದಲ್ಲಿ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿ ಗ್ರಾಮದಲ್ಲಿ ಮನೆ ಮನೆಗೆ ಹೋಗಿ ರೈತರನ್ನು ಭೇಟಿಯಾಗಿ ಕೆಲಸ ಮಾಡಬೇಕು. ಡಂಗುರ ಹೊಡಿಸುವ ಮೂಲಕ ಜಾಗೃತಿ ಮೂಡಿಸಬೇಕು. ರೈತರಿಂದ ಸಮರ್ಪಕ ದಾಖಲೆ ಪಡೆದು ನೋಂದಣಿ ಮಾಡಬೇಕೆಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮಾತನಾಡಿ, ಕುಟುಂಬದ ಭೂ ಮಾಲೀಕರ ಪರಿಪೂರ್ಣ ಮಾಹಿತಿ ಪಡೆದುಕೊಂಡು ಗ್ರಾಮದ ಪಡಿತರ ಅಂಗಡಿ, ವ್ಯವಸಹಾಯ ಸೇವಾ ಸಹಕಾರ ಸಂಘಗಳಲ್ಲಿ ಹೆಚ್ಚು ರೈತರ ಸಂಪರ್ಕವಿದ್ದು, ಅಧಿಕಾರಿಗಳು ಈ ಸ್ಥಳಗಳಿಗೆ ಭೇಟಿ ನೀಡಿ ಅವರನ್ನು ಸಂದರ್ಶಿಸಬೇಕು. ಕಿಸಾನ್ ಸಮ್ಮಾನ ಕುರಿತು ಮನವರಿಕೆ ಮಾಡಬೇಕು ಎಂದು ವಿವರಿಸಿದರು.
ಹಲವಾರು ಗ್ರಾಮಗಳಲ್ಲಿ ಇನ್ನೂ ಗುರಿ ತಲುಪಲು ಆಗಿಲ್ಲ. ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಒಂದು ವಾರದಲ್ಲಿ ಸಂಪೂರ್ಣ ಪ್ರಕ್ರಿಯೆ ಮುಗಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಿಶೀಲ್ದಾರ ಸಂಗಮೇಶ ಜಿಡಗೆ, ಮತ್ತು ವಡಗೇರಾ ತಹಶೀಲ್ದಾರ ಸಂತೋಷ ರಾಣಿ ಮತ್ತು ತಾಪಂ ಕಾರ್ಯನಿರ್ವಾಹಣಾಧಿಕಾರಿ ಚನ್ನಪ್ಪ ಕಂದಕೂರ ಸೇರಿದಂತೆ 41 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು ಸೇರಿದಂತೆ ಇತರರು ಭಾಗವಹಿಸಿದ್ದರು.