ಆಹಾರ ಇಲಾಖೆ ಜಂಟಿ ನಿರ್ದೇಶಕ ಎಸಿಬಿ ಬಲೆಗೆ
ಆಹಾರ ಇಲಾಖೆ ಜಂಟಿ ನಿರ್ದೇಶಕ ಎಸಿಬಿ ಬಲೆಗೆ
ಕಲಬುರ್ಗಿ: ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುವಾಗ ಜಪ್ತಿ ಮಾಡಲಾಗಿದ್ದ ಲಾರಿ ಬಿಡುಗಡೆ ಮಾಡಲು 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ. ಶ್ರೀಧರ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಆಳಂದ ಬಳಿ ಪಡಿತರ ಅಕ್ಕಿ ಸಾಗಿಸುವ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿತ್ತು ಎನ್ನಲಾಗಿದೆ.
ಅಂದಿನಿಂದಲೂ ಲಾರಿ ಮಾಲೀಕ ಮೈನುದ್ದೀನ್ ಅವರು ಲಾರಿ ಬಿಡುಗಡೆ ಮಾಡಿಸಿಕೊಳ್ಳಲು ಪ್ರಯತ್ನ ಮುಂದುವರಿಸಿದ್ದರು ಎನ್ನಲಾಗಿದೆ.
ಲಾರಿಯು ಪೊಲೀಸರ ವಶದಲ್ಲಿದ್ದರೂ ಅದಕ್ಕೆ ಆಹಾರ ಇಲಾಖೆ ಅಧಿಕಾರಿಗಳ ಅನುಮತಿ ಬೇಕಿತ್ತು. ಈ ಸಂಬಂಧ ಮೈನುದ್ದೀನ್ ಆಹಾರ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಎಂಬುವವರ ಮೂಲಕ ಬಿಡುಗಡೆಗೆ ಪ್ರಯತ್ನಿಸುತ್ತಿದ್ದರು.
ಆಗ ಒಟ್ಟು ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ ಅಂತಿಮವಾಗಿ ₹ 15 ಸಾವಿರ ನೀಡಿದರೆ ಲಾರಿ ಬಿಡುಗಡೆಗೆ ಅನುಮತಿ ನೀಡುವುದಾಗಿ ಶ್ರೀಧರ್ ಎಸ್ಡಿಎ ಸಂತೋಷ್ ಮೂಲಕ ತಿಳಿಸಿದ್ದರು.
ಈ ಬಗ್ಗೆ ಮೈನುದ್ದೀನ್ ಅವರು ಮುಂಚೆಯೇ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಮೈನುದ್ದೀನ್ ಅವರಿಂದ ಲಂಚದ ಹಣ ಪಡೆದ ಸಂತೋಷ್ ಬಳಿಕ ಶ್ರೀಧರ್ ಅವರಿಗೆ ಕರೆ ಮಾಡಿ ಹಣ ತಲುಪಿದ್ದಾಗಿ ತಿಳಿಸಿದರು.
ಆ ಹಣವನ್ನು ಘಾಟಗೆ ಲೇಔಟ್ನಲ್ಲಿರುವ ತಮ್ಮ ಮನೆಗೆ ತರುವಂತೆ ಸೂಚನೆ ನೀಡಿದ್ದಾರೆ. ಸಂತೋಷ್ ಮನೆಗೆ ತೆರಳುತ್ತಿದ್ದಂತೆಯೇ ಅವರನ್ನು ಹಿಂಬಾಲಿಸಿದ ಎಸಿಬಿ ಎಸ್ಪಿ ವಿ.ಎಂ. ಜ್ಯೋತಿ ನೇತೃತ್ವದ ಅಧಿಕಾರಿಗಳ ತಂಡ, ಹಣ ಪಡೆಯುವ ಸಂದರ್ಭದಲ್ಲಿ ದಾಳಿ ನಡೆಸಿ ಶ್ರೀಧರ್ ಹಾಗೂ ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.