ಕಾವ್ಯ
“ಬಿಸಿಲ ಝಳಕ” ತಂಪೆರದ ರವಿ ಹಿರೇಮಠ’ರ ಕವನ
“ಬಿಸಿಲ ಝಳಕ”
ಕಾದ ಹಂಚಿನಾಂಗ ಮೈ ಸುಡುತಿತ್ತು
ಬಿಸಿಲ ಝಳಕ ಜಳಕಾ ಮಾಡಿ ತಂಪೆರದಿತ್ತು.
ಧೂಳ, ಹುಡಿಗಾಳಿ ಸುಳಿಯಲ್ಲಿ….
ಬಿಸಿಲ ನೆತ್ತಿಗೇರಿದ ಮನಕೆ
ಬಸವಳಿದ ಆ ಕ್ಷಣ ಹೊತ್ತು
ಗುಡ್ಡ ಗುಡ್ಡದ ಹಾಗೆ ಮೋಡ ಹೊತ್ತು.
ಕಾದ ಇಳೆಗೆ ಮಳೆ ಸುರದಿತ್ತು.
ಭವಿಯ ಭುವಿಯ ಬೀಜ….
ಮೊಳಕೆ ನೋಡುತ್ತ.
ಮಳೆಯ ತಂಪು ಬೆವರಿಗೆ
ಭುವಿ ಒಡಲ ಬೀಜ ಮೊಳಕೆಯಾಗಿತ್ತು.
ಖುಷಿಯ ಭಾವದ ಕಣ್ಣ ನೋಟ.
ಕನಸಾಗಿ ತೇಲತಿತ್ತ…..
ಕಾದ ಹಂಚಿನಾಂಗ ಮೈ ಸುಡತಿತ್ತು.
ಬಿಸಿಲ ಝಳಕ ಜಳಕಾ ಮಾಡಿ ತಂಪೆರದಿತ್ತು
ಗುಡುಗು, ಸಿಡಿಲು ಕೂಡಿಕೊಂಡು
ಕೋಲ್ ಮಿಂಚು ಹೊಡೆದಿತ್ತು.
ಅಬ್ಬರದ ಮಳೆ ಇಳೆಗೆ ಇಳಿದಿತ್ತು.
ಪುಂಡಿನಾರಿನ ಎಳೆಯ ಹಾಗೆ ಏಕಾಗಿತ್ತು.
ಖುಷಿಯ ಬೀಜಕ್ಕೆ ಕಾವು ನೀಡಿತ್ತು.
ದಿನ ಬೆಳಗು ನೋಡುವಾಗ….
ಮೊಳಕೆ ಒಡೆದ ಬೀಜ ಸಾಲು ಸಾಲು.
ಕಂಡ ಕನಸಿಗೆ ನನಸಾಗಿಸುವ ಕಾಲ
ಕಾದ ಹಂಚಿನಾಂಗ ಮೈ ಸುಡುತಿತ್ತು
ಬಿಸಿಲ ಝಳಕ ಜಳಕಾಮಾಡಿ ತಂಪೆರದಿತ್ತು.
ರಚನೆ : ರವಿ ಹಿರೇಮಠ. ಶಹಾಪುರ.