ಅಂಕಣಬಸವಭಕ್ತಿ

ಯೋಗದೊಂದಿಗೆ ‘ಶರಣ ಯೋಗ’; ಕಲಬುರಗಿಗೆ ಬಂದಿದ್ದಾರೆ ಸಂಚಾರಿ ಸಂತ!

ಯೋಗದೊಂದಿಗೆ ‘ಶರಣ ಯೋಗ’; ಕಲಬುರಗಿಗೆ ಬಂದಿದ್ದಾರೆ ಸಂಚಾರಿ ಸಂತ!

ಶಿವಕುಮಾರ್ ಉಪ್ಪಿನ

ಕಲಬುರಗಿ: ಇಲ್ಲಿನ ರಾಮ ಮಂದಿರ ಆವರಣದಲ್ಲಿ ನಡೆಯುತ್ತಿರುವ ಸಹಜ ಯೋಗ ಶಿಬಿರ ಮತ್ತು ಆಧ್ಯಾತ್ಮಿಕ ಪ್ರವಚನ ವಿಶೇಷ ಎನ್ನಿಸಿದೆ.
ಕಳೆದ ವಾರದಿಂದ ಶುರುವಾಗಿರುವ ಯೋಗ ಶಿಬಿರ ನಿತ್ಯ ಹಲವರನ್ನು ಆಕರ್ಷಿಸುತ್ತಿದೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ ನಿರಂಜನ ಸ್ವಾಮೀಜಿ ಬೆಳಗ್ಗೆ ಯೋಗ ಮತ್ತು ಸಂಜೆ ಜೀವನ ಕಲೆಗಾಗಿ ಶರಣ ತತ್ತ್ವ ದ ವಿಚಾರಗಳೊಂದಿಗೆ ಪ್ರವಚನ ಹೇಳಿಕೊಡುತ್ತಿದ್ದಾರೆ. ರಾಮ ಮಂದಿರದ ಹಿಂದಿನ ಬಯಲು ಜಾಗದಲ್ಲಿ ಇದು ನಡೆದಿದ್ದು ಯಾವ ಪ್ರಚಾರವಿಲ್ಲದೇ ದಿನದಿಂದ ದಿನಕ್ಕೆ ಬರುವ ಜನರು ಹೆಚ್ಚಿ, ಪ್ರಶಂಸೆಗೆ ಪಾತ್ರವಾಗುತ್ತಿದೆ.

ಹಿಮಾಲಯನ್ ಯೋಗ

ನಿರಂಜನ ಶ್ರೀಗಳು ಹೇಳಿಕೊಡುತ್ತಿರುವುದು ಹಿಮಾಲಯನ್ ಧ್ಯಾನ ಯೋಗ. ಬೆಳಗ್ಗೆ 5.30 ರಿಂದ ಒಂದು ಗಂಟೆ ಸಹಜ ರೀತಿಯಲ್ಲಿ ವಿವರಿಸುತ್ತ ಎಲ್ಲ ವಯೋಮಾನದವರಿಗೆ ಹೊಂದುವ ಆಸನಗಳನ್ನು ಮತ್ತು ಧ್ಯಾನವನ್ನು ಕಲಿಸಿ ಕೊಡುತ್ತಿದ್ದಾರೆ. ಯೋಗ ಮುಗಿದ ಮೇಲೆ 8.30ಕ್ಕೆ ಪ್ರತಿ ದಿನ ಒಬ್ಬರ ಮನೆಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಸಿ, ಶಾಸ್ತ್ರೀಯವಾಗಿ ಲಿಂಗ ಪೂಜೆ ಜತೆಗೆ ಶಿವಯೋಗ ಹೇಳಿಕೊಡುತ್ತಿದ್ದಾರೆ.

ಸಂಜೆ ಜೀವನ ದರ್ಶನ

ಸಂಜೆ 6.30ರಿಂದ ಒಂದು ಗಂಟೆ ಬಸವಾದಿ ಶರಣರ ವಚನಗಳ ಸಂದೇಶಗಳನ್ನು ಒಳಗೊಂಡ ಜೀವನ ಕಲೆಯ ಪ್ರವಚನ ಹೇಳುತ್ತಾರೆ. ಒಟ್ಟಾರೆ ಮನುಷ್ಯನ ದೇಹ, ಮನಸ್ಸು, ಆತ್ಮಸಾಕ್ಷಾತ್ಕಾರಕ್ಕೆ ಈ ಶ್ರೀಗಳ ಯೋಗ-ಶಿವಯೋಗ-ಪ್ರವಚನ ಪದ್ಧತಿ ಅಮೂಲ್ಯವಾದದ್ದು. ಇದು ದೇಹ ಮತ್ತು ಮನಸ್ಸಿಗೆ ಸಹಕಾರಿ, ನಮಗೆಲ್ಲ ಹೊಸ ಬಗೆಯ ಅನುಭವ ನೀಡುತ್ತಿದೆ ಎಂದು ಭಾಗವಹಿಸಿದವರು ಹೇಳುತ್ತಿದ್ದಾರೆ. ಮಾ.15ರ ವರೆಗೆ ಶಿಬಿರ ನಡೆಯಲಿದೆ. ಪ್ರವಚನ ಸೇವಾ ಸಮಿತಿ ಇದನ್ನು ಸಂಘಟಿಸಿದ್ದು, ಪತಂಜಲಿ ಯೋಗ ಸಮಿತಿ ಸದಸ್ಯರು ಸಹಕಾರ ನೀಡುತ್ತಿದ್ದಾರೆ.

ಈ ‘ಸಂಚಾರಿ ಸ್ವಾಮೀಜಿ’ ಒಂದು ಪೈಸೆ ಮುಟ್ಟಲ್ಲ..

ಗದುಗಿನ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಗರಡಿಯಲ್ಲಿ ಬೆಳೆದ ಈ ನಿರಂಜನ ಶ್ರೀಗಳು ಮಠಕ್ಕೆ ಸ್ವಾಮೀಜಿ ಆಗಲು ನಿರಾಕರಿಸಿ, ಹಿಮಾಲಯಕ್ಕೆ ಹೋಗಿ ಆರು ವರ್ಷ ಯೋಗಾಭ್ಯಾಸ ಮಾಡಿದ್ದಾರೆ. ‘ನಾನು ಊರೂರು ಸುತ್ತಾಡಿ ಸಮಾಜವನ್ನೇ ಕಟ್ಟುತ್ತೇನೆ’ ಎಂದು ತೋಂಟದಾರ್ಯರಿಗೆ ಹೇಳಿ, ಅವರು ಹೇಳಿದಂತೆ ಭಾಲ್ಕಿ ಶ್ರೀಗಳ ಮಠಕ್ಕೆ ಬಂದು ಕಳೆದ ಒಂದೂವರೆ ವರ್ಷದ ಹಿಂದೆ ಬೀದರ್ ಜಿಲ್ಲೆಯಿಂದ ‘ಯೋಗ ಪಯಣ’ ಆರಂಭಿಸಿದ್ದಾರೆ. ಇವರೇ ಮೈಕ್, ಜನ ಕೂಡಲು ತಾಡಪಾಲು, ಲೈಟ್ ವ್ಯವಸ್ಥೆ ಎಲ್ಲ ತೆಗೆದುಕೊಂಡು ಪ್ರತಿ ತಾಲೂಕು, ಹೋಬಳಿಗೆ ಹೋಗುತ್ತಾರೆ. ಬಯಲೇ ಮಠವಾಗಿಸಿಕೊಂಡು ಯೋಗದ ಜತೆಗೆ ಬಸವ ತತ್ತ್ವವನ್ನು ಪಸರಿಸುತ್ತ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಇವರು ಪ್ರಸಾದ ಬಿಟ್ಟರೆ, ಒಂದು ಪೈಸೆ ಕೂಡ ಯಾರಿಂದಲೂ ಮುಟ್ಟಲ್ಲ! ಪ್ರತಿ ವರ್ಷ ಒಂದೊಂದು ಜಿಲ್ಲೆ ಆಯ್ಕೆ ಮಾಡುವ ಇವರು, ಈಗ ಕಲಬುರಗಿಯಲ್ಲಿದ್ದಾರೆ. ಮಾ16ರಿಂದ ಅಫಜಲಪುರದಲ್ಲಿ ಶುರುವಾಗಲಿದೆ ಶಿಬಿರ.

ಲೇಖಕರು- ಶಿವಕುಮಾರ ಉಪ್ಪಿನ್.

 

Related Articles

Leave a Reply

Your email address will not be published. Required fields are marked *

Back to top button