ವಿವಿಧ ಬೇಡಿಕೆ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳ ಸಮಿತಿ ಪ್ರತಿಭಟನೆ
21 ಸಾವಿರ ರೂ. ವೇತನ ನಿಗದಿಗಾಗಿ ಕಾರ್ಮಿಕ ಸಂಘಟನೆಗಳ ಆಗ್ರಹ
yadgiri,ಶಹಾಪುರಃ ದೇಶದ ಸಾರ್ವಜನಿಕ ಆಸ್ತಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯುವ ಕೇಂದ್ರ ಸರ್ಕಾರ ಕಾರ್ಮಿಕರ ಗೋಳು ಕೇಳುತ್ತಿಲ್ಲ ಎಂದು ಸಿಆಯ್ಟಿಯು ಜಿಲ್ಲಾ ಸಂಚಾಲಕ ಜೈಲಾಲ್ ತೋಟದಮನಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಅಖಿಲಭಾರತ ಜಂಟಿ ಕಾರ್ಮಿಕ ಸಂಘಟನೆಗಳ ಸಮಿತಿ (ಜೆ.ಸಿ.ಟಿ.ಯು), ಅಖಿಲಭಾರತ ರೈತ ಕೃಷಿಕೂಲಿಕಾರ ಸಂಘರ್ಷ ಸಮಿತಿವತಿಯಿಂದ ಸೋಮವಾರ ನಡೆದ ದೇಶವ್ಯಾಪ್ತಿ ಪ್ರತಿಭಟನೆ ಅಂಗವಾಗಿ ನಗರದಲ್ಲೂ ನಡೆದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಲಿಂದ ಆರ್ಥಿಕವಾಗಿ ದಿವಾಳಿಯಾಗಿದ್ದ ನಮ್ಮ ದೇಶಕ್ಕೆ ಗರ ಬಡಿದಂತಾಗಿದೆ. ಕೋವಿಡ್-19 ವೈರಾಣು ಗಂಭೀರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ವೈರಾಣುವಿನ ನಿಗ್ರಹಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡದ ಸರ್ಕಾರಗಳು ಸಮಸ್ಯೆಗಳ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ, ಆದರೆ ಕೊರೋನಾ ವೈರಸ್ ಗುಮ್ಮ ತೋರಿಸಿ ಶಾಸನ ಸಭೆಗಳಲ್ಲಿ ಚರ್ಚೆ ಮಾಡದೇ ಹಲವಾರು ಮಾರಕ ಯೋಜನೆಗಳನ್ನು ಸುಗ್ರಿವಾಜ್ಞೆ ಹೊರಡಿಸುವ ಮೂಲಕ ಜಾರಿಗೊಳಿಸುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡಿದರು.
ಸಿ.ಆಯ್.ಟಿ.ಯು ನ ತಾಲ್ಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ಕೋಟ್ಯಂತರ ರೂಪಾಯಿಗಳ ಕಾರ್ಪೊರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ರೈತರ ಸಾಲವನ್ನು ಮನ್ನಾ ಮಾಡಲಿಲ್ಲ. ಸಂಪೂರ್ಣ ಲಾಭದಾಯಕ ಬೆಲೆ ರೈತನ ಹಕ್ಕಾಗಿದ್ದು, ಬೆಂಬಲ ಬೆಲೆ ಸೇರಿದಂತೆ ಕೃಷಿ ಅಭಿವೃದ್ಧಿಗೆ ಪೂರಕ ಅನುಕೂಲ ಕಲ್ಪಿಸಬೇಕಾಗಿದೆ. ದೇಶದ ಕೃಷಿ ಸಂಸ್ಕøತಿಯನ್ನು ನಾಶ ಮಾಡಿ ಕಂಪನಿಗಳ ಬೇಳೆ ಬೇಯಿಸಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ಅನ್ನದಾತರನ್ನು ಗುಲಾಮರನ್ನಾಗಿ ಮಾಡಲು ಹೊರಟಿದೆ ಎಂದು ದೂರಿದರು.
ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಪಿ.ಸಿ.ಪಿ ವಾಚರ್ಗಳಿಗೆ ಖಾಯಂ ಮಾಡುವುದು ಸೇರಿದಂತೆ ಕನಿಷ್ಟ 21 ಸಾವಿರ ರೂಪಾಯಿ ವೇತನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕ.ರಾ.ಅಂ.ನೌ.ಸಂ.ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಸುನಂದಾ ಹಿರೇಮಠ, ಈರಮ್ಮ ಹೈಯ್ಯಾಳಕರ, ಮಲ್ಲಣ್ಣ ಬಿರೆದಾರ, ಅಧ್ಯಕ್ಷೆ ರಂಗಮ್ಮ ಕಟ್ಟಿಮನಿ, ನಿಂಗಣ್ಣ ನಾಟೇಕಾರ, ಬಸವರಾಜ ಭಜಂತ್ರಿ, ಮರಲಿಂಗಪ್ಪ ಮಕಾಶಿ, ಆಶಾ ಕಾರ್ಯಕರ್ತೆ ಸುನೀತಾ, ಮರ್ದಾನೆಪ್ಪ ಇಂಗಳಗಿ, ಬಾಬುರಾವ ಪೂಜಾರಿ, ಭೀಮರಾಯ, ಸಿದ್ದಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.