ಅಂಕಣಸಂಸ್ಕೃತಿ

ಬಹು ಸಂಸ್ಕೃತಿ, ಬಹುಮುಖಿ ಸಮಾಜ ಕಾಪಾಡಿ- ಹಾರಣಗೇರಾ ಬರಹ

ಬಹು ಸಂಸ್ಕೃತಿ, ಬಹುಮುಖಿ ಸಮಾಜವನ್ನು ಕಾಪಾಡೋಣ..

ರಾಘವೇಂದ್ರ ಹಾರಣಗೇರಾ

ಭಾರತದ ಸ್ವಾತಂತ್ರ ದಿನಾಚರಣೆಯ ಈ ಸುಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಸಮಸ್ತ ನೇತಾರರನ್ನು ಸ್ಮರಿಸಿಕೊಳ್ಳುತ್ತಾ, ಸ್ವಾತಂತ್ರ ದೇಶದ ಮಾನವೀಯ ಆಶಯಗಳನ್ನು, ರಾಷ್ಟ್ರಪೀತ ಮಹಾತ್ಮ ಗಾಂಧಿಜಿಯವರ ಅಹಿಂಸಾತ್ಮಕ ವಿಚಾರಗಳು, ಸಂವಿಧಾನ ಶಿಲ್ಪಿ ಡಾ‌. ಬಿ. ಆರ್. ಅಂಬೇಡ್ಕರ್ ಅವರ ಸಮಾನತಾ ತತ್ವಗಳು ನಮ್ಮ ರಾಷ್ಟ್ರದ ಮತ್ತು ರಾಷ್ಟ್ರ ರಾಜಕೀಯದ ‘ಶೀಲಾದರ್ಶ’ ವಾಗಿವೆ.

ನಮ್ಮ ಸಂವಿಧಾನದ ಉಸಿರಾಗಿರುವ ಇಂತಹ ಚಿಂತನೆಗಳು ಪ್ರತಿಯೊಬ್ಬ ಭಾರತೀಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ವಿಷಯವೊಂದು ಹೇಳಲ್ಪಟ್ಟಿದೆ ಎಂದಾಗಲೀ, ಕೇವಲ ಸಂಪ್ರದಾಯ ಅಥವಾ ಸ್ವಕಲ್ಪಿತ ಎಂದಾಗಲೀ ಆ ವಿಷಯವನ್ನು ನಂಬಬೇಡ.

ಗುರುವು ಆದರಣೀಯ ಎಂದ ಕಾರಣದಿಂದ ಆತನ ಹೇಳಿಕೆಯನ್ನು ನಂಬಬೇಡ, ಯಾವುದೇ ವಿಚಾರವನ್ನು ಸ್ವತಃ ಪರೀಕ್ಷಿಸಿ, ಪ್ರಮಾಣಿಸಿ, ವಿಶ್ಲೇಷಿಸಿದ ನಂತರ ಯಾವುದು ಸರ್ವಜನರ ಏಳಿಗೆಗೆ, ಒಳತಿಗೆ, ಶ್ರೇಯಸ್ಸಿಗೆ ಕಾರಣವಾಗುವುದೋ ಆ ತತ್ವದಲ್ಲಿ ನಂಬಿಕೆ ಇಡು. ಅದು ನಿನಗೆ ಅನುಸರಣೀಯ ಮಾರ್ಗದರ್ಶಿ.

ತಪ್ತ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಾನವತಾವಾದಿ ಬುದ್ದನ ಈ ನುಡಿಗಳು ಇಂದು ಸಮಾಜದಲ್ಲಿ ಧರ್ಮ, ಜಾತಿ, ಪಂಥ, ಜನಾಂಗಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳಿಗೆ, ಇವುಗಳಿಂದ ಉಂಟಾಗುತ್ತಿರುವ ಹಲವಾರು ಗಂಭೀರ ಸಮಸ್ಯಗಳಿಗೆ ಪರಿಹಾರ ನೀಡುತ್ತವೆ.

ಯಾರೋ ಒಬ್ಬ ವ್ಯಕ್ತಿ ಜಾತಿ, ಧರ್ಮ, ಜನಾಂಗ ಮುಂತಾದವುಗಳ ಕುರಿತು ತಪ್ಪು ಮಾತಾಡಿದ್ದಾನೆ ಎಂಬ ಕಾರಣಕ್ಕಾಗಿ ಪರಸ್ಪರರ ನಡುವೆ ದ್ವೇಷ ಹುಟ್ಟಿ, ಸಂಘರ್ಷಗಳಿಗೆ, ಪ್ರತಿಭಟನೆಗಳಿಗೆ, ರಕ್ತಪಾತಗಳಿಗೆ ನಾಂದಿಯಾಡುತ್ತಿರುವುದು ವಿಷಾದಕರ ಸಂಗತಿ.

ನಮ್ಮ ದೇಶದ ಏಕತೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ಇಡೀ ವಿಶ್ವದಲ್ಲಿಯೇ ತನ್ನದೆಯಾದ ಖ್ಯಾತಿಯನ್ನು ಪಡೆದಿದೆ. ವಿವಿಧ ಜಾತಿ, ಧರ್ಮ, ಜನಾಂಗ, ವಿವಿಧ ನಂಬಿಕೆ, ಭಾಷೆ, ಸಂಸ್ಕೃತಿ ಮುಂತಾದವುಗಳು ಒಳಗೊಂಡು ಅನೇಕ ಸಹಸ್ರಾರು ವರ್ಷಗಳಿಂದ ಭಾರತದ ಜನಸಮುದಾಯ ಐಕ್ಯತೆ ಹಾಗೂ ಅಖಂಡತೆಯ ಸೂತ್ರದಲ್ಲಿ ಜೀವಿಸುತ್ತ ಬಂದಿದೆ.

ಧಾರ್ಮಿಕ ಸಹಿಷ್ಣುತೆ, ಕೋಮು ಸೌಹಾರ್ದತೆ, ಸಾಮಾಜಿಕ ಒಗ್ಗಟ್ಟು ನಮ್ಮ ಏಕತೆಯ ಮೂಲಾಧಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಏಕತೆಗೆ ಭಂಗ ತರುವ ಅನೇಕ ಅಹಿತಕರ ಘಟನೆಗಳು ದೇಶದ ಸಮಗ್ರತೆಗೆ, ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿತ್ತಿವೆ. ತಪ್ಪು ಗ್ರಹಿಕೆ, ಊಹೆ, ನೈತಿಕ ಅಧಪತನ, ದುರ್ಭೊಧನೆ, ಮತಾಂಧತೆ ಮುಂತಾದವು ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿವೆ. ಇಂತವುಗಳಿಂದ ಸಾಮಾಜಿಕ ಉದ್ವಿಗ್ನತೆ ಹೆಚ್ಚುತ್ತದೆ ಎಂದು ಹೇಳಬಹುದು.

ಇಂತಹ ಸಂದರ್ಭದಲ್ಲಿ ನಮ್ಮ ಪಾರಂಪರಿಕ ಸಹನಾಶೀಲ ಗುಣವನ್ನು ಕಾಪಾಡಲು ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ಅದು ನಮ್ಮ ಬಹು ಸಂಸ್ಕೃತಿ ಪರಂಪರೆಯ ಮೌಲ್ಯ ಮತ್ತು ನಾಗರಿಕತೆಯ ಆತ್ಮ. ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಆದ್ದರಿಂದ ಬಹುಸಂಖ್ಯಾತ ಜನ ಸಮುದಾಯದಲ್ಲಿರುವ ಸಹನಾಶೀಲ ಗುಣವನ್ನು ಉತ್ತೇಜಿಸಬೇಕು. ಬಹುಮುಖಿ ಸಮಾಜಕ್ಕೆ ಮಾನ್ಯತೆ ನೀಡಬೇಕು.

ಸೌಹಾರ್ದತೆ ಮೆರೆಯುವ ಕಾರ್ಯಗಳು ಹೆಚ್ಚಾಗಬೇಕು. ಸಹನೆ, ಸಹಿಷ್ಣುತೆ , ಸಹಬಾಳ್ವೆಯ ಮೂಲಕ ಭಾರತದ ಸಮಗ್ರತೆ ಹಾಗೂ ಸಾರ್ವಭೌಮತೆಯ ಸಂರಕ್ಷಣೆ ಸಾಧ್ಯವಾಗುತ್ತದೆ. ಇದರಿಂದ ಪರಂಪರಾಗತ ಮೌಲ್ಯಗಳನ್ನು ಅರಿತುಕೊಳ್ಳಲು ನೆರವಾಗುತ್ತದೆ.

ರಾಷ್ಟ್ರ ಕಲ್ಯಾಣಕ್ಕಾಗಿ, ರಾಷ್ಟ್ರದ ಅಭಿವೃದ್ಧಿಗಾಗಿ ನಾವು ನಮ್ಮ ಬೇದ ಭಾವನೆಗಳನ್ನು ಮರೆತು ರಾಷ್ಟ್ರೀಯ ಏಕತೆಯ ಸೂತ್ರವನ್ನು ಬಲಪಡಿಸೋಣ. ರಾಷ್ಟ್ರದ ಐಕ್ಯತೆ ಹಾಗೂ ಅಖಂಡತೆ ಕಾಪಾಡೋಣ. ಸರ್ವರಿಗೂ ಸ್ವತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

-ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಶಹಾಪುರ.

Related Articles

Leave a Reply

Your email address will not be published. Required fields are marked *

Back to top button