ಬೇಡವಾದವುಗಳ ತೆಕ್ಕೆಯಿಂದ ಬಿಡಿಸಿಕೊಳ್ಳೋಣ..!
ಬೇಡವಾದವುಗಳ ತೆಕ್ಕೆಯಿಂದ ಬಿಡಿಸಿಕೊಳ್ಳೋಣ..!
ಜಯಶ್ರೀ. ಜೆ. ಅಬ್ಬಿಗೇರಿ.
ಅದೆಷ್ಟು ಹೊತ್ತು ಧ್ಯಾನದಲ್ಲಿ ಕೂತಿದ್ದರೂ ಮೆದುಳಿನ ಬಳ್ಳಿಯಲ್ಲಿ ಬರಬೇಕಾದ ವಿಚಾರಗಳ ಸರಣಿ ನಿಲ್ಲುವುದೇ ಇಲ್ಲ. ಅದೆಲ್ಲಿ ಬೇಡವೆನ್ನುತ್ತೇವೋ ಅದೇ ಜಾಗಕ್ಕೆ ಅದೇ ಘಟನೆಗೆ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ.
ಹತ್ತಿರವಿರುವ ನಯನ ಮನೋಹರ ದೃಶ್ಯಗಳು ಕಣ್ಣಿಗೆ ಬಿದ್ದರೂ ತನ್ನದೇ ಗುಂಗಲ್ಲಿ ಮುಳಗಿರುತ್ತದೆ. ಪ್ರಯಾಣ ಕಾಲದಲ್ಲಂತೂ ಅದರ ಸ್ಥಿತಿ ಹೇಳತೀರದು.
ಹಳ್ಳ ಕೊಳ್ಳ ಹಸಿರು ಗಿಡ ಮರಗಳು ಗಿಡದಲ್ಲಿನ ಹೂ ಹಣ್ಣು ಕಾಯಿಗಳು ಜನ ಜೀವನ ವಿಚಿತ್ರ ಸನ್ನಿವೇಶಗಳು ತನ್ನೆಡೆ ಸೆಳೆಯುತ್ತಿರುತ್ತವೆ. ಹೀಗಿದ್ದಾಗ್ಯೂ ಕೂತಲ್ಲಿಂದಲೇ ಗೆಳೆಯರಿರುವ ಪ್ರಿಯಕರನಿರುವ ಪ್ರಿಯತಮೆಯಿರುವ ಜಾಗಕ್ಕೆ ಹೋಗಿ ನೆಲೆ ನಿಲ್ಲುತ್ತದೆ.
ನಮಗೆ ತುಂಬಾ ಅಗತ್ಯವಾಗಿರುವ ವಸ್ತುಗಳ ಮತ್ತು ವಿಷಯದ ಮೇಲೆ ಗಮನ ಕೇಂದ್ರೀಕರಿಸದೇ, ಎದೆಯ ದಡಕ್ಕೆ ಬೇಡವಾದ ಯೋಚನೆಗಳ ಅಲೆಗಳು ಮುತ್ತಿಡುತ್ತಿರುತ್ತವೆ.
ಆಲೋಚನೆಗಳ ನಾಗಾಲೋಟ ಅಚ್ಚರಿಯನ್ನು ಉಂಟು ಮಾಡುತ್ತದೆ. ಮಾಡಲೇಬೇಕಾದ ಕೆಲಸಗಳ ಮೇಲೆ ಮನಸ್ಸು ನೆಲೆ ನಿಂತಾಗ ಅದರ ಫಲಿತಾಂಶ ನಮ್ಮ ಹೃದಯದ ಕಣ ಕಣವನ್ನೂ ಪುಳಕಗೊಳಿಸುತ್ತದೆ.
ಗುರಿ ತಲುಪಿದ ಕ್ಷಣಗಳನ್ನು ನೆನೆದಾಗ ಮೈಯಲ್ಲಿರುವ ರೋಮ ರೋಮಗಳು ರೋಮಾಂಚನಗೊಳ್ಳುತ್ತವೆ. ಗಗನದ ಬೆಳ್ಳಕ್ಕಿ ಸಾಲಿನಂತೆ ಹೊಳೆಯುತ್ತದೆ.
ಕೆಲವೊಮ್ಮೆ ಇದ್ದಕ್ಕಿದ್ದಂತೆ ಯಾರೂ ಬರೆಯಲಾಗದ ಯಾರೂ ಹೇಳಲಾಗದ ಭಾವಗಳನ್ನು ಹೊರ ಚೆಲ್ಲುವ ಮನಸ್ಸು ಸಂಭ್ರಮಗೊಳ್ಳುತ್ತದೆ. ಜೀವನವು ಎಷ್ಟೇ ಬಿಜಿಯಾಗಿರಲಿ ಒಂದು ಪೂರ್ಣ ಪ್ರಮಾಣದ ಚೆಂದದ ಬದುಕನ್ನು ನಮ್ಮದಾಗಿಸಲು ಆಶಿಸುತ್ತೇವೆ.
ಬೇಡವಾದವುಗಳ ತೆಕ್ಕೆಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತೇವೆ. ಬೇಡವಾದುವುಗಳು ಕೊಡುವ ನೋವು ತಡೆಯದೇ ಕಣ್ಣು ನೀರು ಹರಿಸುವುದನ್ನು ಹಲವು ಸಲ ಕಂಡಿರುತ್ತೇವೆ.
ಆದರೂ ಇಲ್ಲ ಸಲ್ಲದ ಭಾವನೆಗಳ ಪ್ರವಾಹವನ್ನು ಹಿಡಿತದೊಳಗೆ ಇಟ್ಟುಕೊಳ್ಳಲು ಸಾಧ್ಯವಾಗದೇ ನರಳುತ್ತೇವೆ. ಉದುರಿಹೋದ ಹೂಗಳು ಸುವಾಸನೆ ಚೆಲ್ಲಿ ಹೋಗುತ್ತವೆ. ಹಾಗೆಯೇ ಬದುಕಿನ ಪ್ರತಿ ಬೇಕಾದ ಬೇಡವಾದ ಸನ್ನಿವೇಶಗಳು ತನ್ನ ಪಾಲಿನ ಪಾಠವನ್ನು ನಮ್ಮ ಪಾಲಿಗೆ ಕಲಿಯಲು ಬಿಟ್ಟು ಹೋಗಿರುತ್ತವೆ.
ಹೆಚ್ಚು ಬುದ್ಧಿವಂತಿಕೆಯಿಂದ ಬೇಕಾಗಿರುವುದನ್ನು ಪುನಃ ಪ್ರಾರಂಭಿಸಲು ಅನುಭವ ಒಂದು ಸುವರ್ಣ ಅವಕಾಶ. ಅನುಭವವೆಂಬ ಗುರು ಕಲಿಸದ ಪಾಠ ಯಾವುದೂ ಇಲ್ಲ. ‘ಅನುಭವವು ವಿವೇಕದ ತಂದೆ.’ ಎಂಬ ನುಡಿಯೊಂದು ಎದೆಯೊಳಗೆ ಬೆಸೆದಿದ್ದರೂ ಮನಸ್ಸು ಬೇಡವೆಂಬ ಬಂಗಾರದ ಜಿಂಕೆಯ ಹಿಂದೆಯೇ ಓಡುತ್ತಿರುತ್ತದೆ.
ಗೆಲುವಿಗಿಂತ ಹೆಚ್ಚು ಸೋಲು ಕಲಿಸುತ್ತದೆ. ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುವುದನ್ನು ಮುಂದೆ ನಿಂತು ಕಲಿಸುತ್ತದೆ. ಹೋರೇಸ್ ನುಡಿದಂತೆ ‘ತಪ್ಪುಗಳಿಲ್ಲದೇ ಯಾರೂ ಬದುಕಲಾರರು. ಅತಿ ಕಡಿಮೆ ತಪ್ಪು ಮಾಡುವವನೇ ಉತ್ತಮ.’ಕೈಯಲ್ಲಿ ತೆಕ್ಕೆಯಷ್ಟು ಸಮಯ ಇದೆಯೆಂದು ತಪ್ಪಾಗಿ ತಿಳಿದು ಬೇಡವಾದವುಗಳ ತೆಕ್ಕೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ಅದರ ಜಾಲದಿಂದ ಹೊರ ಬರಲಾಗದೇ ವಿಲಿ ವಿಲಿ ಒದ್ದಾಡುತ್ತೇವೆ.
ಬೇಡದ ಕಾಡುವ ವಿಷಯಗಳಲ್ಲಿ ನಿರತರಾಗಿ ಕನಸುಗಳ ಸಾಧನೆಯನ್ನು ತಡೆ ಹಿಡಿಯುತ್ತೇವೆ. ಚಿಕ್ಕ ಪುಟ್ಟವುಗಳ ಸಂತಸವು ನಮ್ಮನ್ನು ಪ್ರೇರೇಪಿಸುವ ಅಂಶಗಳು. ಬೇಕು ಬೇಡಗಳನ್ನು ಪ್ರತ್ಯೇಕಿಸುವುದೆಂದರೆ ಯಾವುದಕ್ಕೆ ಎಷ್ಟು ಮಹತ್ವ ಕೊಡುತ್ತೇವೆ.
ಸಮಯಕ್ಕೆ ಪರಸ್ಪರ ಸಂಬಂಧಗಳಿಗೆ ಅದೆಷ್ಟು ಬೆಲೆ ಕೊಡುತ್ತೇವೆ ಎನ್ನುವದರ ಮೇಲೆ ನಿರ್ಧರಿತವಾಗಿರುತ್ತದೆ. ಬೇಡವಾದುದನ್ನು ಬೇಕಾದುದರ ಮಡಿಲಲ್ಲಿ ಕುಳಿತುಕೊಳ್ಳುವುದರಿಂದ ಗೆಲ್ಲಬಹುದು.
ಬೇಡವಾದವುಗಳಿಗೆ ನಾವು ಸವಾಲೆಸೆದಾಗ ಅವುಗಳನ್ನು ಮಣಿಸಬಹುದು. ಬೇಡವಾದುದನ್ನು ಅದರ ಪಾಡಿಗೆ ಅದನ್ನು ಬಿಟ್ಟು ಬಿಡಬೇಕು. ಬೇಕಾದುದನ್ನು ನಿರೀಕ್ಷಿಸಿದರೆ ಅದನ್ನು ನಮ್ಮ ತೋಳ ತೆಕ್ಕೆಯಲ್ಲಿ ಪಡೆಯುವುದು ಶತಸಿದ್ಧ. ಬೇಕೇ ಬೇಕೆಂಬ ಭಾವಕೆ ಬೆನ್ನು ಬಿದ್ದರೆ ನಿಲುಕದ ಮಂದಹಾಸವೂ ನಗೆ ಚೆಲ್ಲುವುದು. ಬೇಡವಾದವುಗಳ ಕಲ್ಪನೆಗೆ ಗರಿ ಮೂಡಿಸುವುದನ್ನು ನಿಲ್ಲಿಸಲು..
–ಜಯಶ್ರೀ. ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು.
ಬೆಳಗಾವಿ 944923412.