ಉತ್ತರ ಕರ್ನಾಟಕದ ಲಿಂಗಾಯತ ಖಾನಾವಳಿಗಳೆಂದರೆ ‘ಇನ್ನೊಂಜರ ತಗೋರಿ..’ ಅನ್ನೋ ‘ಪ್ರಸಾದ ನಿಲಯ’ಗಳವು..
ಬಿಸಿ ರೊಟ್ಟಿ ತರ ತರಹದ ಪಲ್ಯಗಳ, ಖಾರದ ಚಟ್ನಿ, ‘ಮೊಸರು ಹಿಂಡಿ’ ಮಮತೆಯ ದೇಸಿ ಪ್ರೀತಿಯದು. ಲಿಂಗಾಯತ ಸಂಸ್ಕೃತಿಯನ್ನೇ ಹೊದ್ದಿರುವ ಇವು, ಬಹುತೇಕ ಮಮತಾಮಯಿ ಜನರವು. ಇವನಾರವ ಎನ್ನದೇ ಇವ ನಮ್ಮವ ಎನ್ನುವ ಗುಣದವು.
..
ನಿಮಗೆ ನಮ್ಮ ಉತ್ತರ ಭಾಗದಲ್ಲಿ ಎಲ್ಲೇ ಹೋದರೂ ಸಿಗುವ ಸಾವಿರಾರು ಖಾನಾವಳಿಗಳಲ್ಲಿ ಹುಬ್ಬಳ್ಳಿಯ ಈ ಸಿದ್ಧಾರೂಢ ಖಾನಾವಳಿಯೂ ಒಂದು. ‘ಖಾನಾವಳಿ’ ಇದು ಮರಾಠಿ ಪದ. ಸಿದ್ಧಾರೂಢ ಖಾನಾವಳಿ ರೈಲು ನಿಲ್ದಾಣದ ಮುಂದೆ ಮತ್ತು ಚನ್ನಮ್ಮ ಸರ್ಕಲ್ ನಲ್ಲಿ ಎರಡು ಕಡೆ ಕಳೆದ ಇಪ್ಪತ್ತೆರಡು ವರ್ಷಗಳಿಂದ ರೊಟ್ಟಿ ಉಣ್ಣಿಸುತ್ತಿವೆ. ಬಂಕಾಪುರ ಮನೆತನದ ಹಿರಿಯ ಬಸವಾರಾಜ ಬಂಕಾಪುರ, ವಿಠ್ಠಲ ಬಂಕಾಪುರ (7899229660) ಮತ್ತು ಮಯೂರ ( 9972666554) ಅವರುಗಳು ಆಸ್ಥೆಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಧಾರವಾಡದಲ್ಲಿನ ಬಸಪ್ಪನ ಖಾನಾವಳಿ ಕೂಡ ಪ್ರಸಿದ್ಧ.
ದಿನವೂ ಹಲವು ಇಂತಹ ನಮ್ಮಲ್ಲಿನ ಖಾನಾವಳಿಗಳಲ್ಲಿ ಹೋಳಿಗೆ ಸಿಗುತ್ತೆ. ಬೇರೆ ರುಚಿಯೂ ಇರುತ್ತೆ. ಉಪ್ಪಿನ ಕಾಯಿ, ಅಗಸಿ ಹಿಂಡಿ, ಕೆಂಪು ಚಟ್ನಿ ಮಾಮೂಲು.
ಜತೀಗಿ ಬಾಡಿಸಿಕೊಳ್ಳಲು ಉಳಾಗಡ್ಡಿ, ಮೆಂತೆಪಲ್ಯ, ಸೌತಿಕಾಯಿ, ಗಜ್ರಿ ಕಾಮನ್ನು! ಮ್ಯಾಲ ಬೇಕಂದ್ರ ನಿಮಗ ಮಜ್ಜಿಗಿ. ದಕ್ಷಿಣದ ಮಂದಿ ಇಷ್ಟು ತರಹದ ಪಲ್ಯಗಳನ್ನು ನೋಡಿಯೇ ಗಾಬರಿಯಾಗುತ್ತಾರೆ, ಹೊಟ್ಟೆ ತುಂಬ ಉಣ್ಣುತ್ತಾರೆ. ಬೆಂಗಳೂರು ಕಡೆ ಕಡಿಮೆ ಪಲ್ಯ, ಹೆಚ್ಚೆಂದರೆ ಚಪಾತಿ. ಇಲ್ಲಿ ಮನಸೋ ಇಚ್ಛೆ! ಕೆಲವರು ಪಲ್ಯ ತಿಂದೇ ಅರ್ಧ ಹೊಟ್ಟಿ ತುಂಬಿಸಿಕೊಳ್ತಾರೆ.
ಇದು ಎಲ್ಲ ‘ಉಣ್ಣಲಿ’ ಎನ್ನುವ ನೆಲದ ಮಹಿಮೆ. ಯಾರೇನು ಪುಕ್ಕಟೆ ಕೊಡೋಲ್ಲವಾದರೂ ಮೋತಿ ಸಿಂಡರಿಸದೇ ‘ಉಣ್ಣಲಿ ಯಪ್ಪಾ’ ಅನ್ನೋ ಭಾವದ ಬಂಧವಿದೆ. ದಾಸೋಹದ ನೆರಳಿದೆ. ಕೈ ತೊಳೆದು, ಅಲ್ಲೇ ಇಟ್ಟಿರುವ ವಿಭೂತಿ ಹಚ್ಚಿಕೊಂಡು ಯಾರೇ ಆಗಲಿ ಉಣ್ಣಲು ಕೂಡಬಹುದು. ಇದು ಲಿಂಗಾಯತ ಖಾನಾವಳಿಗಳ ಮಹಿಮೆ; ಶರಣರ ಕಲ್ಯಾಣ ನಾಡಿನ ಹಿರಿಮೆ. ಅಲ್ಲವೇ..? ಬರ್ರಿ ನೀವೂ ಮತ್ತ ಉಣ್ಣಾಕ.
ಆಗಷ್ಟೇ ನಾನು ಮತ್ತು ಗೆಳಯ ಚಿದಂಬರ ನಿಂಬರಗಿಯವರು ನೆಮ್ಮದಿಯಿಂದ ಉಂಡೆವು.
-ಶಿವಕುಮಾರ್ ಉಪ್ಪಿನ, ಪತ್ರಕರ್ತ- ಬರಹಗಾರ (88809 59555).