ಮುಡಬೂಳದಲ್ಲಿ ರಂಗಲಿಂಗೇಶ್ವರ ಸಂಭ್ರಮದ ರಥೋತ್ಸವ
ಸಮಾಜದ ಮೌಢ್ಯ, ಕಂದಾಚಾರ ತೊಲಗಿಸಿ ವೈಚಾರಿಕ ಅಳವಡಿಸಿ-ಸತ್ಯಂಪೇಟೆ
ಮುಡಬೂಳದಲ್ಲಿ ರಂಗಲಿಂಗೇಶ್ವರ ಸಂಭ್ರಮದ ರಥೋತ್ಸವ
ಸಮಾಜದ ಮೌಢ್ಯ, ಕಂದಾಚಾರ ತೊಲಗಿಸಿ ವೈಚಾರಿಕ ಅಳವಡಿಸಿ-ಸತ್ಯಂಪೇಟೆ
yadgiri, ಶಹಾಪುರಃ ತಾಲೂಕಿನ ಮುಡಬೂಳ ಗ್ರಾಮದಲ್ಲಿ ಶುಕ್ರವಾರ ಸಂಜೆ ಶ್ರೀಶರಣ ರಂಗಲಿಂಗೇಶ್ವರರ ಭವ್ಯ ರಥೋತ್ಸವ ಸಾವಿರಾರು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.
ನೆರೆದ ಭಕ್ತಾಧಿಗಳು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೆದು ಶ್ರದ್ಧಾ ಭಕ್ತಿಯಿಂದ ಕೈಮುಗಿದು ಕೃತಾರ್ಥರಾದರು. ಮುಂಚಿತವಾಗಿ ನಡೆದ ಧರ್ಮಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ, ಮಠಗಳು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳ ಕಡೆ ಧಾವಿಸುವ ಅಗತ್ಯವಿದೆ.
ಸಮಾಜದಲ್ಲಿ ಮನೆ ಮಾಡಿದ ಜಡ್ಡು ಸಂಪ್ರದಾಯವನ್ನು ಮೌಢ್ಯ, ಕಂದಾಚಾರಗಳನ್ನು ತೊಲಗಿಸಬೇಕಿದೆ. ವೈಚಾರಿಕ ವಾತಾವರಣ ನಿರ್ಮಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಶ್ರೀಶರಣ ರಂಗಲಿಂಗೇಶ್ವರರ ಕೊಡುಗೆ ಅಪಾರವಿದೆ ಎಂದರು.
ಹಿರಿಯ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ, ಪ್ರಸ್ತುತ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಅನುಸಂಧಾನದ ಅಗತ್ಯತೆ ಇದೆ. ಈ ಎರಡು ಕ್ಷೇತ್ರಗಳು ಸಮಾಜದ ವಿಕಾಸಕ್ಕಾಗಿ ತೆರೆದುಕೊಳ್ಳುಬೇಕಿದೆ. ಆ ಹಿನ್ನೆಲೆಯಲ್ಲಿ ಎಲ್ಲರೂ ಶರಣ ಸುಮಾರ್ಗ ಅನುಸರಿಸಬೇಕು ಎಂದರು.
ಯಾದಗಿರಿ ವಿಭಾಗದ ವಿಕ ಉಪ ಸಂಪಾದಕ ಪ್ರಕಾಶ ದೊರೆ ಮಾತನಾಡಿ, ಶ್ರೀರಂಗಲಿಂಗೇಶ್ವರರಿಗೆ ಅಪಾರ ಭಕ್ತರಿದ್ದು, ಸಮಾಜದ ಒಳಿತಿಗಾಗಿ ಅವರ ಸೇವೆ ಅನನ್ಯ. ಅವರು ತತ್ವಪದಗಳನ್ನು ರಚಿಸಿದ್ದು, ಅದರಲ್ಲಿ 169 ಲಭ್ಯವಿವೆ. ಇನ್ನುಳಿದವಗಳನ್ನು ಶೋಧಿಸಬೇಕಿದೆ. ರಂಗಲಿಂಗೇಶ್ವರರು ಈ ಭಾಗದಲ್ಲಿ ಬಹು ದೊಡ್ಡ ಸಂತ, ಶರಣ, ಸತ್ಪುರುಷರಾಗಿ ಮೆರೆದವರು, ಅವರ ಜೀವ ಭಕ್ತ ಜನರ ಸೇವೆಗೆ ಮುಡಿಪಾಗಿಟ್ಟು, ಸೇವೆಯಲ್ಲಿಯೇ ಅವರು ತೃಪ್ತ ಭಾವನೆ ಹೊಂದಿದ್ದರು. ಮಹಾನ್ ಶರಣ ಕುರಿತು ಇನ್ನಷ್ಟು ಚರಿತ್ರೆ ಕಲೆ ಹಾಕಬೇಕಿದೆ ಎಂದರು.
ಪತ್ರಕರ್ತ ಮಲ್ಲಣ್ಣ ಹೊಸಮನಿ ಪ್ರಾಸ್ತಾವಿಕವಾಗ ಮಾತನಾಡಿದರು. ಹೋತಪೇಠ ಕೈಲಾಸಾಶ್ರಮದ ಶ್ರೀಶಿವಲಿಂಗ ಶರಣರು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಠದ ಮುಖ್ಯಸ್ಥ ಶಿವಯೋಗಿ ಶರಣರುವಹಿಸಿದ್ದರು. ಯಂಕೋಬಾ, ಹೊಳ್ಳೆಪ್ಪ ಪೂಜಾರಿ, ರಕ್ಷಿತಾ, ಈರಣ್ಣ ದೇಸಾಯಿ, ಪಂಪಣ್ಣಗೌಡ ಇತರರು ಉಪಸ್ಥಿತರಿದ್ದರು. ಹಣಮಂತ್ರಾಯ ಗುರಿಕಾರ ಸ್ವಾಗತಿಸಿದರೆ, ಡಾ.ನಾಗರಾಜ ದೊರೆ ವಂದಿಸಿದರು.