Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಕುಂಬಳಕಾಯಿ ಬೀಜ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ!

ಕುಂಬಳಕಾಯಿ ಬೀಜ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ನಮಗೆ ಉಪಕಾರಿ. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ.

ವಿಟಮಿನ್‌ ಇ ಮತ್ತು ಜಿಂಕ್‌ ಸತ್ವಗಳಿಂದ ಸಮೃದ್ಧವಾಗಿರುವ ಈ ಬೀಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಸೋಂಕುಗಳ ವಿರುದ್ಧ ಹೋರಾಡುವಂಥ ಸಾಮರ್ಥ್ಯ ವಿಟಮಿನ್‌ ಇ ಗಿದೆ. ದೇಹದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಕಟ್ಟಿಹಾಕುವ ಸಾಧ್ಯತೆಯೂ ಇ ಜೀವಸತ್ವಕ್ಕಿದೆ. ಪ್ರತಿರೋಧಕ ಶಕ್ತಿಯನ್ನು ಜಾಗೃತಗೊಳಿಸುವ ಬಗ್ಗೆ ಸತುವಿನ ಕಾರ್ಯಸಾಮರ್ಥ್ಯ ಕಡಿಮೆಯೇನಿಲ್ಲ. ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್‌ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್‌ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್‌ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ. ಹಾಗಾಗಿ ನಿದ್ರಾಹೀನತೆಯನ್ನು ದೂರ ಮಾಡಿ, ಕಣ್ತುಂಬಾ ನಿದ್ದೆ ತರಿಸಿ, ದೇಹ-ಮನಸ್ಸುಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ.

ಇದರಲ್ಲಿ ವಿಟಮಿನ್‌ ಇ ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ಕೆರೊಟಿನಾಯ್ಡ್‌ಗಳೂ ಇವೆ. ಇವೆಲ್ಲ ದೇಹವನ್ನು ಉರಿಯೂತದಿಂದ ಕಾಪಾಡುವ ಗುಣವನ್ನು ಹೊಂದಿವೆ. ದೇಹದ ಕೋಶಗಳನ್ನು ಮುಕ್ತಕಣಗಳಿಂದ ಕಾಪಾಡಿ, ಅವುಗಳ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಇದರಿಂದ ದಾಂಗುಡಿಯಿಡುವ ಮಾರಕ ರೋಗಗಳನ್ನು ದೂರ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದರಲ್ಲಿರುವ ನಾರಿನಂಶದಿಂದಾಗಿ ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಿ, ಪಚನಕ್ರಿಯೆಯನ್ನು ಚುರುಕಾಗಿಸುತ್ತದೆ. ನಾರುಯುಕ್ತ ಆಹಾರಗಳು ಜೀರ್ಣಾಂಗಗಳ ಆರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಕೆಗೂ ಸೂಕ್ತವಾದವು. ಇಂಥ ಆಹಾರಗಳು ಬೇಗನೇ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ಬೇಗ ಹಸಿವಾಗದಂತೆ ತಡೆಯುತ್ತವೆ. ದೇಹದ ಹಲವು ಕೆಲಸಗಳನ್ನು ನಿರ್ವಹಿಸುವುದಕ್ಕೆ ನಮಗೆ ಮೆಗ್ನೀಶಿಯಂ ಅಗತ್ಯವಾದ ಖನಿಜ. ರಕ್ತದೊತ್ತಡ ಸಮತೋಲನದಲ್ಲಿ ಇರಿಸುವುದು, ಸ್ನಾಯು ಮತ್ತು ನರಗಳ ಆರೋಗ್ಯ ರಕ್ಷಣೆ, ಮೂಳೆಗಳನ್ನು ಭದ್ರಗೊಳಿಸುವುದು ಮತ್ತು ದೇಹಕ್ಕೆ ಬೇಕಾದ ಶಕ್ತಿ ಒದಗಿಸುವಂಥ ಹಲವು ಕೆಲಸಗಳು ಈ ಖನಿಜದ ಪಾಲಿಗಿದೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಬದುಕಿನ ಸ್ವಾಸ್ಥ್ಯ ಹೆಚ್ಚಿಸುವುದಕ್ಕೆ ಮೆಗ್ನೀಶಿಯಂ ಬೇಕು. ಈ ಖನಿಜ ಕುಂಬಳ ಬೀಜದಲ್ಲಿ ಹೇರಳವಾಗಿದೆ. ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಯುತ ಕೊಬ್ಬು ಮತ್ತು ಪ್ರೊಟೀನ್‌ಗಳು ತುಂಬಿವೆ. ಆರೋಗ್ಯಕರ ಕೊಬ್ಬಿನ ಸೇವನೆಯಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬು ಜಮೆಯಾಗುವುದನ್ನು ತಡೆಯಬಹುದು. ಇದರಿಂದ ಹೃದಯದ ತೊಂದರೆಗಳನ್ನೂ ದೂರ ಇರಿಸಬಹುದು.

Related Articles

Leave a Reply

Your email address will not be published. Required fields are marked *

Back to top button