ಸರಣಿ

ಕೆಂಪು ದೀಪದ ಕಬಂದ ಬಾಹುವಿನಲ್ಲಿ ಅಪ್ರಾಪ್ತ ಬಾಲಕಿಯರ ಪಾಲು ಎಷ್ಟು ಗೊತ್ತಾ..?

ವೇಶ್ಯಾವೃತ್ತಿ: ಹೆಣ್ಣನ್ನು ನೋಡುವ ಸಮಾಜದ ದೃಷ್ಟಿ ಬದಲಾಗಲಿ..!

ಯಾದಗಿರಿ ಜಿಲ್ಲೆಯಲ್ಲಿ ಅತಿ ಕಡಿಮೆ ಮೂವರು ಯುವತಿಯರು 17 ಮಹಿಳೆಯರು ಕಾಣೆಯಾದವರಲ್ಲಿ ಒಬ್ಬ ಯುವತಿ ಹಾಗೂ ಐವರು ಮಹಿಳೆಯರು ಪತ್ತೆಯಾಗಿದ್ದು, ಮತ್ತು ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 281 ಯುವತಿಯರು ಹಾಗೂ 1419 ಮಹಿಳೆಯರನ್ನು ಪತ್ತೆ ಮಾಡಿರುವುದು ಆಘಾತಕಾರ ಸಂಗತಿಯಾಗಿದೆ.

ನಮ್ಮ ದೇಶವು ಬಹು ಹಿಂದಿನಿಂದಲೂ ಎದುರಿಸುತ್ತಿರುವ ಅನೇಕ ಸಮಾಜಿಕ ಸಮಸ್ಯೆಗಳಲ್ಲಿ ವೇಶ್ಯಾವೃತ್ತಿಯೂ ಒಂದಾಗಿದೆ. ಪುರಾತನ ಕಾಲದಿಂದಲೂ ನಡೆದು ಬಂದ ಅತ್ಯಂತ ಹೀನವೆಂದು ಬಣ್ಣಿಸ ಬಹುದಾದ ಈ ವೇಶ್ಯಾವೃತ್ತಿ ನಾಗರಿಕ ಸಮಾಜಕ್ಕಂತೂ ಕಳಂಕಪ್ರಾಯವಾಗಿದೆ. ಪುರುಷ ಪ್ರದಾನ ಸಮಾಜ ಉಳಿಸಿ ಬೆಳೆಸಿಕೊಂಡು ಬಂದ ಕೆಟ್ಟ ಪದ್ದತಿ ಇಂದು ಅನಾರೋಗ್ಯಕರ ದಂದೆಯಾಗಿ ಪರಿವರ್ತನೆಯಾಗಿದೆ.

ಪಿತೃ ಪ್ರಧಾನ ಸಮಾಜದ ಒಂದು ಅನಿವಾರ್ಯವಾದ ಮೌಲ್ಯವಾಗಿಯು ವೇಶ್ಯಯರು ಅಥವಾ ಲೈಂಗಿಕ ಕಾರ್ಯಕರ್ತಯರು ಸೃಷ್ಟಿಯಾಗಿದ್ದಾರೆ. ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯ, ಸಂತಾನೋತ್ಪತ್ತಿ ಹಾಗೂ ಶ್ರಮ ಎಲ್ಲದರ ಮೇಲೂ ಅಸಾದ್ಯ ಹಿಡಿತವನ್ನು ಹೊಂದಿರುವ ಪುರುಷ ಸಮಾಜದ ಪಾಳೇಗಾರಿಕೆ ಮೌಲ್ಯಗಳಿಂದಾಗಿ ಹೆಣ್ಣನ್ನು ವ್ಯಕ್ತಿಯಾಗಿ, ಮನುಷ್ಯ ಜೀವಿಯಾಗಿ ಪರಿಭಾವಿಸಿಯೇ ಇಲ್ಲ.

ವೇಶ್ಯಯರು ಮೊದಲು ಕೇವಲ ಆಸ್ತಿವಂತರ, ಭೂ ಮಾಲೀಕರ, ಸೈನಿಕರ ಮುಂತಾದವರ ಕಾಮ ಪೂರೈಕೆಯ ವಸ್ತುಗಳಾಗಿದ್ದರು. ಆದರೆ ಕೈಗಾರೀಕರಣ, ಪಾಶ್ಚಾತೀಕರಣ, ನಗರೀಕರಣ ಸಮಾಜದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹೆಣ್ಣಿನ ಲೈಂಗಿಕ ಸಮಸ್ಯೆ ಹಲವಾರು ಹೊಸ ಆಯಾಮಗಳನ್ನು ಪಡೆದುಕೊಂಡಿತ್ತು. ಬಡತನ, ಪುರುಷ್ಯರ ವಲಸೆ, ಮುಗ್ಧತೆ, ಅನಕ್ಷರತೆ, ಮೌಢ್ಯತೆ, ಸಂಪ್ರದಾಯ, ದೇವದಾಸಿ ಪದ್ದತಿ, ಮುತ್ತು ಕಟ್ಟುವಿಕೆ, ಕೌಟುಂಬಿಕ ವಿಘಟನೆ, ವಿದುವಾ ಪದ್ಧತಿ ಮುಂತಾದವು ವೇಶ್ಯಾವೃತ್ತಿಯ ಹೆಚ್ಚಳಕ್ಕೆ ಕಾರಣವಾಗಿವೆ.

ಇಂದು ದೇಶದ ಪ್ರಮುಖ ದೊಡ್ಡ ದೊಡ್ಡ ನಗರಗಳಲ್ಲಿ, ಪಟ್ಟಣಗಳಲ್ಲಿ ಕೆಂಪು ದೀಪದ ಕಬಂದ ಬಾಹುವಿನಲ್ಲಿ ಸಿಕ್ಕಿ ಬಿದ್ದಿರುವ ವೇಶ್ಯಯರಲ್ಲಿ ಮೂರನೆ ಒಂದು ಭಾಗ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳಿದ್ದಾರೆ. ಅತಿ ಹೆಚ್ಚು ವೇಶ್ಯಯರು ಕರ್ನಾಟಕ, ಆಂದ್ರಪ್ರದೇಶ, ತಮಿಳನಾಡು, ಕೇರಳ, ಗೋವಾ, ಉತ್ತರಪ್ರದೇಶ ಮುಂತಾದ ರಾಜ್ಯಗಳಿಂದ ನಗರಗಳಿಗೆ ಬಂದವರಾಗಿದ್ದಾರೆ.

ಈ ವೇಶ್ಯಯರಲ್ಲಿ ತ್ಯೇಜಿಸಲ್ಪಟ್ಟ, ಅಪಹರಿಸಲ್ಪಟ್ಟ, ಮಾರಟವಾದವರು, ಪ್ರೀತಿಸಿ ವಂಚಿಸಲ್ಪಟ್ಟವರು, ಹೆತ್ತವರಿಂದ ಈ ವೃತ್ತಿಗೆ ನೂಕ್ಕಿದವರು ಈ ರೀತಿ ಹಲವಾರು ಕಾರಣಗಳಿಂದ ವೇಶ್ಯಾವೃತ್ತಿ ಎಂಬ ಪಾಪಕೂಪಕ್ಕೆ ಸಿಲುಕಿದವರಾಗಿದ್ದಾರೆ. ವೇಶ್ಯಾವೃತ್ತಿ ಇಂದು ಜಾಗತಿಕ ಉದ್ಯಮವಾಗಿ ಮಾರ್ಪಟ್ಟಿದೆ. ಇದರಿಂದ ಅಪಾರ ಪ್ರಮಾಣದ ಹಣ ಹೂಡಿಕೆ, ಲಾಭ ಕೋರತನ ದಂದೆ ನಡೆಯುತ್ತಿದೆ. ಅಸಹಾಯಕ ಹಾಗೂ ಮುಗ್ಧ ಯುವತಿಯರು, ಬಾಲಕಿಯರು, ಮಹಿಳೆಯರು ಈ ವೇಶ್ಯಾಕೂಪದಲ್ಲಿ ಬಿದ್ದಿದ್ದಾರೆ.

ಈ ವೇಶ್ಯಾವೃತ್ತಿಗೆ ದೇಶ, ಪ್ರಾಂತ್ಯದ ಗಡಿಯಿಲ್ಲ. ವೇಶ್ಯಾವೃತ್ತಿಯನ್ನೇ ಬಂಡವಾಳವಾಗಿಸಿಕೊಂಡಿರುವ ಬಹುದೊಡ್ಡ ಜಾಲಗಳು ದೇಶ ವಿದೇಶ ಸಂಪರ್ಕದೊಂದಿಗೆ ಮಾನವ ಸಾಗಾಟದ ವೃತ್ತಿಯಲ್ಲಿ ತೊಡಗಿವೆ.

ಕರ್ನಾಟಕದ ಕಲಬುರಗಿ, ಯಾದಗಿರಿ, ಬೆಳಗಾವಿ, ಬೀದರ, ವಿಜಯಪುರ ಮುಂತಾದ ಗಡಿ ಜಿಲ್ಲೆಗಳಲ್ಲಿ ಅಂತರಾಜ್ಯ ಮಾನವ ಸಾಗಾಣಿಕೆ ಹೆಚ್ಚುತ್ತಿರುವುದು ಕಂಡುಬಂದಿದೆ. ಇದರಲ್ಲಿ ಮನೆಗೆಲಸದ ನೆಪಹೇಳಿ ಮಹಿಳೆಯರು ಹಾಗೂ ಬಾಲ್ಯಾವ್ಯವಸ್ಥೆಯ ಹುಡುಗಿಯರನ್ನು ಪುಸಲಾಯಿಸಿ ಕರೆದೊಯ್ಯಲಾಗುತ್ತದೆ. ಮನೆಗೆಲಸ, ಕೂಲಿ ಕೆಲಸದ ಆಸೆಗೆ ಗುಳೆ ಹೋಗುವ ಬಹುತೇಕ ಹೆಣ್ಣುಮಕ್ಕಳು ಕೆಂಪು ದೀಪದ ಅಡಿಯಲ್ಲಿಯೇ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಹುಟ್ಟುಹಾಕಲಾಗುತ್ತದೆ.

ಮನೆ ಗೆಲಸಕಾರರ ನೆಪದಲ್ಲಿಯೂ, ಏಸ್ಕಾರ್ಟಗಳೆಂಬ ಹೈಟೆಕ್ ಹೆಸರಿನ ನೆರಳಿನಲ್ಲಿಯೂ ಇಂತಹ ಕೆಲಸಗಳು ನಡೆಯುತ್ತಿದೆ. ದೇಹ ಮಾರಟದ ಕಸುಬು ವಿವಿಧ ಹೆಸರುಗಳಲ್ಲಿ ನಡೆಯುತ್ತಲೇ ಇರುವುದು ವಿಪರ್ಯಾಸವಾಗಿದೆ. ಒಮ್ಮೆ ಈ ದಂದೆಗೆ ಇಳಿದು ಅಲ್ಲಿಂದ ಪಾರಾಗಬೇಕೆನ್ನುವ ಯೋಚನೆ ಸುಳಿಯುವ ಹೊತ್ತಿಗೆ ಅದೊಂದು ವಿಷವ್ಯೂಹವಾಗಿ, ಬೆಳಕಿನ ಕಿರಣವೆ ಕಾಣದ ನರಕವಾಗಿ ಪರಿಣಮಿಸಲ್ಪಟ್ಟಿರುತ್ತದೆ. ಇಂತಹ ವೇಶ್ಯಯರ ಸಾಮಾಜಿಕ ಸ್ಥಿತಿ ಬಹಳಷ್ಟು ಶೋಚನೆಯಿಂದ ಕೂಡಿರುತ್ತದೆ. ಇವರು ಆರ್ಥಿಕ, ಸಾಮಾಜಿಕ, ದೈಹಿಕವಾಗಿ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ.

ಒಬ್ಬ ವ್ಯಕ್ತಿಯನ್ನು ಮಾರಾಟ ಮಾಡುವುದಾಗಲಿ, ಒತ್ತೆಯಾಳುಗಳಾಗಿ ಇರಿಸಿಕೊಳ್ಳುವದಾಗಲಿ ಅಪರಾದವಾಗಿದ್ದು ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಮಾರಲ್ಪಟ್ಟ ಯುವತಿಯರನ್ನು, ಹೆಣ್ಣುಮಕ್ಕಳನ್ನು, ಬಾಲಕಿಯರನ್ನು ವೇಶ್ಯಾವಾಟಿಕೆಗೆ ಅಥವಾ ಲೈಂಗಿಕ ದಾಸ್ಯತ್ವಕ್ಕೆ ತಳ್ಳುತ್ತಿರುವುದು ಮಾನವತೆಗೊಂದು ಮಹಾ ಕಳಂಕವಾಗಿದೆ.

ಇದು ಮಹಿಳಾ ಬದುಕಿನ ಬಹುದೊಡ್ಡ ದುರಂತವೂ ಹೌದು. ಇಲ್ಲಿ ಮಹಿಳೆಯರನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗುತ್ತದೆ. ಈ ವೃತ್ತಿಯಲ್ಲಿ ಸಿಕ್ಕಿಯಾಕಿಕೊಂಡು ನರಳುವ ಅಸಹಾಯಕ ಸ್ತ್ರೀಯರ ದಯನೀಯ ಬದುಕು ಗಂಭೀರವಾಗಿದೆ.
ಗಿರಾಕಿಗಳ ಕೈಗೆ ಸಿಕ್ಕಿ ಜರ್ಝರಿತಗೊಂಡ ಈ ಮಹಿಳೆಯರು ಒಂದೆಡೆ ಘರವಾಲಿಗಳಿಂದ, ಪೋಲಿಸರಿಂದ, ಮತ್ತೊಂದಡೆ ಏಡ್ಸ್ ರೋಗದಿಂದ ಬಹುಷ್ಯವೇ ಇಲ್ಲದಂತೆ ತತ್ತರಿಸಿದ್ದಾರೆ. ಕತ್ತಲು ಕೂಪದಲ್ಲಿ ಜೀವನಸಾಗಿಸುತ್ತಿದ್ದಾರೆ.

ಈ ವೇಶ್ಯಾ ಕೂಪಕ್ಕೆ ಬಿದ್ದ ನತದೃಷ್ಟ ಮಹಿಳೆಯರು ಸಮಾಜದ ದೃಷ್ಠಿಯಲ್ಲಿ ಕಳಂಕಿತರಾಗುತ್ತಾರೆ. ಗೌರವಾನ್ವಿತ ಎಂದು ಹೇಳಿಕೊಳ್ಳುವ ಸಮಾಜ ಅವರನ್ನು ನೋಡುವ ದೃಷ್ಠಿಯೇ ಬೇರೆಯಾಗಿದೆ.

ಈ ವೇಶ್ಯಾ ಸಮಸ್ಸೆಯನ್ನು ಪರಿಹರಿಸಲು ಸರಕಾರ ಮತ್ತು ಸರಕಾರೇತರ ಸಂಘ ಸಂಸ್ಥೆಗಳು ಹಲವಾರು ಶಾಸನಗಳು, ರಕ್ಷಣಾತ್ಮಕ ಕ್ರಮಗಳು ಜಾರಿಗೆ ತಂದರೂ ಸಹ ಹಲವು ಕಾರಣಗಳಿಂದ ಈ ವೇಶ್ಯಾ ವೃತ್ತಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಮಹಿಳೆಯರನ್ನು ಕೀಳಾಗಿ ಕಾಣುವ, ಅಪರಾಧಿಗಳನ್ನಾಗಿಸುವ ಜನರ ಮನೋಭಾವ ಬದಲಾಗಿಲ್ಲ.

ಈ ವೇಶ್ಯಾ ವೃತ್ತಿಯ ಕಬಂಧ ಬಾಹುವಿನಿಂದ ಹೊರ ಬಂದ ಮತ್ತು ಆ ನರಕದಲ್ಲಿ ನರಳಾಡುತ್ತಿರುವ ಮಹಿಳೆಯರ ಜೀವನವಿಡಿ ಪುನರ ವಸತಿ ಸೌಲಭ್ಯಗಳನ್ನು ಒದಗಿಸಿಕೊಡುವುದರ ಬಗ್ಗೆ ಹಾಗೂ ಅವರು ಸಮಾಜದಲ್ಲಿ ಗೌರವಾನ್ವಿತ ಬದುಕನ್ನು ಸಾಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಹಳಷ್ಟು ಶ್ರಮಿಸಬೇಕು.

ಇಂತಹ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಹಾಗೂ ವೇಶ್ಯಾ ಮಹಿಳೆಯರಿಗೆ ಪುನರವಸತಿ ಕಲ್ಪಿಸಿಕೊಡಲು ಸರಕಾರ ಮತ್ತು ಸರಕಾರೇತರ ಸಂಘ ಸಂಸ್ಥೆಗಳು ಅನೇಕ ರೀತಿಯ ಕ್ರಮಗಳನ್ನು ಕೈಗೊಂಡು ಅವರಿಗೆ ಹಲವಾರು ಸೌಲಭ್ಯಗಳನ್ನು ನೀಡಿ ಗೌರವಾನ್ವಿತ ಬದುಕು ಸಾಗಿಸಲು ಪುನರ ವಸತಿಗಳನ್ನು ಕಲ್ಪಿಸಿಕೊಟ್ಟರು ಸಹ ಸಮಾಜದ ಹೆಣ್ಣನ್ನು ನೋಡುವ ದೃಷ್ಟಿಕೊನ ಎರಡನೆಯ ದರ್ಜೆಯಲ್ಲಿ ಇರುವುದರಿಂದ ಈ ಲಿಂಗ ತಾರತಮ್ಯ ಮನೋಭಾವ ವೇಶ್ಯಾವೃತ್ತಿಯಂತಹ ಅನಿಷ್ಟ ಪದ್ದತಿ ಇಂದು ಗಂಭೀರ ಸಮಸ್ಯೆಯಾಗಿ ಉಳಿದುಕೊಂಡಿದೆ.

ಆದ್ದರಿಂದ ಸಮಾಜವು ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೇಶ್ಯಾವೃತ್ತಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಗುರುತಿಸಿ ಈ ಸಮಸ್ಯೆಯನ್ನು ಹೋಗಲಾಡಿಸಲು ಹಾಗೂ ಮಹಿಳೆಗೆ ಸಮಾಜದಲ್ಲಿ ಆರೋಗ್ಯಕರ ಬದುಕನ್ನು ಸಾಗಿಸಲು ಶ್ರಮಿಸಬೇಕು.

ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು.ಶಹಾಪುರ.

Related Articles

Leave a Reply

Your email address will not be published. Required fields are marked *

Back to top button