ಗುಜರಾತ್ ಚುನಾವಣಾ ಪ್ರಚಾರದ ವೇಳೆ ಮೋದಿ ಸಡನ್ನಾಗಿ ಮೌನಕ್ಕೆ ಶರಣಾಗಿದ್ದೇಕೆ?
ಅಜಾನ್ ಧ್ವನಿ ಕೇಳಿದಾಕ್ಷಣ ಭಾಷಣ ನಿಲ್ಲಿಸಿ ಗೌರವ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
ಡಿಸೆಂಬರ್ 09 ಮತ್ತು 14ರಂದು ಗುಜರಾತ್ ಚುನಾವಣೆ ನಡೆಯಲಿದ್ದು ಚುನಾವಣ ಕಣ ರಂಗೇರಿದೆ. ಸ್ವರಾಜ್ಯದಲ್ಲಿ ನರೇಂದ್ರ ಮೋದಿ ಸಭೆಗಳ ಮೇಲೆ ಸಭೆ ಮಾಡುತ್ತಿದ್ದು ಶತಾಯಗತಾಯ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಶಪಥ ಮಾಡಿದ್ದಾರೆ. ಪರಿಣಾಮ ನಿತ್ಯವೂ ಹತ್ತಾರು ಸಭೆಗಳಲ್ಲಿ ಪಾಲ್ಗೊಂಡು ಜನರ ಗಮನ ಸೆಳೆಯುವ ಭಾಷಣ ಮಾಡುತ್ತಿದ್ದಾರೆ.
ಇಂದು ಗುಜರಾತಿನ ನವಸರಿಯಲ್ಲಿ ನಡೆದ ಬಿಜೆಪಿಯ ಬೃಹತ್ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಮೈದಾನದ ಪಕ್ಕದಲ್ಲಿದ್ದ ಮಸೀದಿಯಿಂದ ಅಜಾನ್ ಧ್ವನಿ ಕೇಳಿ ಬಂದಾಕ್ಷಣ ಮೋದಿ ಅರ್ಧಕ್ಕೆ ಮಾತು ನಿಲ್ಲಿಸಿ ಮೌನಕ್ಕೆ ಶರಣಾದರು. ತಮ್ಮ ಮುಂದಿನ ಮೈಕನ್ನು ಕೆಳಗಿಳಿಸಿ ಏಕಚಿತ್ತದಿಂದ ಅಜಾನ್ ಧ್ವನಿಯನ್ನು ಆಲಿಸುವ ಮೂಲಕ ಮುಸ್ಲಿಂ ಸಮುದಾಯದವರ ಪ್ರಾರ್ಥನೆಗೆ ಗೌರವ ಸೂಚಿಸಿದ್ದಾರೆ.
ನರೇಂದ್ರ ಮೋದಿ ಏಕಾಏಕಿ ಭಾಷಣ ನಿಲ್ಲಿಸಿದ್ದೇಕೆ ಎಂದು ತಿಳಿಯದೇ ಸಭೆಯಲ್ಲಿ ನೆರೆದಿದ್ದ ಜನ ಮೋದಿ ಮೋದಿ ಎಂದು ಕೂಗಿದ್ದಾರೆ. ಆದರೆ, ಎರಡೂ ಕೈಗಳಿಂದ ಸ್ವಲ್ಪ ಹೊತ್ತು ಶಾಂತಿಯಿಂದ ಇರಿ ಎಂದು ಪ್ರಧಾನಿ ಮೋದಿ ಜನರಿಗೆ ಸನ್ನೆ ಮಾಡುತ್ತಾರೆ. ಅಜಾನ್ ಮುಗಿದ ಬಳಿಕ ಪಕ್ಕದಲ್ಲಿದ್ದವರಿಗೆ ಕೇಳಿ ಅಜಾನ್ ಮುಗಿದಿರುವ ಬಗ್ಗೆ ಖಚಿತ ಪಡಿಸಿಕೊಂಡು ಮಾತು ಮುಂದುವರೆಸಿದ್ದಾರೆ ಮೋದಿ.
ನಮ್ಮಿಂದಾಗಿ ಯಾವುದೇ ಪೂಜೆ , ಪ್ರಾರ್ಥನೆಗಳಿಗೆ ಅಡಚಣೆ ಆಗಬಾರದು. ಧಾರ್ಮಿಕ ಆಚರಣೆಗಳಿಗೆ ನಾವು ಗೌರವ ಸಲ್ಲಿಸಬೇಕು. ಅದಕ್ಕಾಗಿ ನಾನು ಅಜಾನ್ ಧ್ವನಿ ಕೇಳಿದಾಕ್ಷಣ ಮಾತು ನಿಲ್ಲಿಸಿದೆ ಅಷ್ಟೇ ಎಂದು ಹೇಳುತ್ತ ಮತ್ತೆ ಚುನಾವಣಾ ಪ್ರಚಾರ ಭಾಷಣ ಮುಂದುವರೆಸಿದ್ದಾರೆ. ನರೇಂದ್ರ ಮೋದಿ ಅವರು ರಾಜಸ್ಥಾನದ ಚುನಾವಣೆ ಸಂದರ್ಭದಲ್ಲೂ ಸಹ ಭಾಷಣದ ವೇಳೆ ಅಜಾನ್ ಧ್ವನಿ ಕೇಳಿ ಮೌನವಹಿಸುವ ಮೂಲಕ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.