ದಸರಾ ಆನೆ ಜೊತೆ ಕಾಳಗ ನಡೆಸಿದ ಕಾಡಾನೆ : ದಂತ ಮುರಿದ ಅಭಿಮನ್ಯು!
ದಾವಣಗೆರೆ: ಕಳೆದ ಒಂದು ತಿಂಗಳಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಮತ್ತು ಆಂಧ್ರ ಗಡಿಭಾಗದ ಜನರ ನಿದ್ದೆಗೆಡಿಸಿದ್ದ ಪುಂಡಾನೆಗಳ ಕಾರ್ಯಾಚರಣೆ ನಡೆಯುತ್ತಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಬಳಿ ಮೈಸೂರಿನ ದಸರಾ ಆನೆ ಅಭಿಮನ್ಯು ನೇತೃತ್ವದ ಐದು ಆನೆಗಳು ಹಾಗೂ ಶಿವಮೊಗ್ಗದ ಸಕ್ರೆಬೈಲ್ ನ ಎರಡು ಹೆಣ್ಣಾನೆಗಳು ಕಾಡಾನೆ ಕಾರ್ಯಾಚರಣೆ ನಡೆಸುತ್ತಿವೆ. 70ಜನ ಅರಣ್ಯ ಸಿಬ್ಬಂದಿ, ತಗ್ನರು ಸ್ಥಳದಲ್ಲೇ ಬಿಡಾರ ಹೂಡಿದ್ದು ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಕಾಡಾನೆಗಳ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಸಾಕಾನೆಗಳ ಮೇಲೆ ದಾಳಿ ನಡೆಸಿದೆ. ಪರಿಣಾಮ ದಸರಾ ಆನೆ ಅಭಿಮನ್ಯು ಕಾಡಾನೆಯ ದಂತ ಮುರಿದಿದೆ. ಅಲ್ಲದೆ ಕಾಡಾನೆ ಅರಣ್ಯ ಇಲಾಖೆ ಸಿಬ್ಬಂದಿಯತ್ತ ಬರದಂತೆ ತಡೆದಿದೆ. ಬಳಿಕ ಕಾಡಾನೆ ಸಾಕಾನೆಗಳ ದಂಡು ಕಂಡು ಕಾಡಿನತ್ತ ಓಡಿದೆ. ಕಾಡಾನೆಯ ದಂತವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ, ದಂತ ಭಗ್ನವಾಗಿರುವ ಕಾಡಾನೆ ನಾಡಿಗೆ ಬಂದು ಪುಂಡಾಟ ಮಾಡಿದ ಆನೆ ಅಲ್ಲ. ಬದಲಾಗಿ ಕಾಡಿನಲ್ಲಿರುವ ಆನೆಯಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ, ಪದೇಪದೇ ನಾಡಿಗೆ ಬಂದು ಪುಂಡಾಟ ಮಾಡುತ್ತಿದ್ದ ಎರಡು ‘ಅಣ್ತಮ್ಮಾಸ್’ ಕಾಡಾನೆಗಳಿಗಾಗಿ ಆಪರೇಷನ್ ಕಾಡಾನೆ ಮುಂದುವರೆದಿದೆ.