ವಿಪ್ ಉಲ್ಲಂಘಿಸಿ ಮತದಾನ ಮಾಡಿದವರ ಸದಸ್ಯತ್ವ ರದ್ದುಃ ಜಿಲ್ಲಾಧಿಕಾರಿ ಆದೇಶ
ಯಾದಗಿರಿ ನಗರಸಭೆಯ ಏಳು ಜನರ ಸದಸ್ಯತ್ವ ರದ್ದು
ಯಾದಗಿರಿಃ ಕಳೆದ ಆರು ತಿಂಗಳ ಹಿಂದೆ ಇಲ್ಲಿನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ವಿರೋಧ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ 7 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಜೆ. ಮಂಜುನಾಥ ಆದೇಶ ಹೊರಡಿಸಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ನಿಂದ ಚುನಾಯಿತಗೊಂಡಿದ್ದ ಲಲಿತಾ ಅನಪೂರ ಮತ್ತು ಕಾಂಗ್ರೆಸ್ನಿಂದ ಶಂಕರ ರಾಠೋಡ ಸ್ಪರ್ಧಿಸಿದ್ದರು.
ಒಟ್ಟು 31 ಸದಸ್ಯರ ಬಲ ಹೊಂದಿದ್ದ ನಗರಸಭೆಯಲ್ಲಿ ಕಾಂಗ್ರೆಸ್-11, ಬಿಜೆಪಿ-7, ಜೆಡಿಎಸ್-8, ಬಿಎಸ್ಆರ್ ಕಾಂಗ್ರೆಸ್-4 ಮತ್ತು ಪಕ್ಷೇತರ-1 ಸದಸ್ಯರಿದ್ದರು.
4 ಜನ ಸದಸ್ಯರನ್ನು ಹೊಂದಿದ್ದ ಬಿಎಸ್ಆರ್ ಕಾಂಗ್ರೆಸ್ ಸದಸ್ಯೆ ಲಲಿತಾ ಅನಪೂರ 24 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ಪ್ರತಿಸ್ಪರ್ಧಿ ಕಾಂಗ್ರೆಸ್ನ ಸದಸ್ಯ ಶಂಕರ ರಾಠೋಡ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿ ಕೇವಲ 4 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದ್ದರು.
ಇದರಲ್ಲಿ ಕಾಂಗ್ರೆಸ್ನ 11 ಸದಸ್ಯರ ಪೈಕಿ 6 ಜನರು ಕಾಂಗ್ರೆಸ್ ನೀಡಿದ ವಿಪ್ ಉಲ್ಲಂಘಿಸಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದರು. ಅಲ್ಲದೆ ಇನ್ನೊಬ್ಬ ಸದಸ್ಯ ಗೈರು ಹಾಜರಾಗುವ ಮೂಲಕ ವಿಪ್ ಉಲ್ಲಂಘನೆಗೆ ಕಾರಣರಾಗಿದ್ದರು.
ಈ ಕುರಿತು ಸೋತ ಅಭ್ಯರ್ಥಿ ಶಂಕರ ರಾಠೋಡ ಕರ್ನಾಟಕ ಸ್ಥಳೀಯ ಪ್ರಾಧಿಕಾರಿಗಳ(ಪಕ್ಷಾಂತರ ನಿಷೇಧ) ಅಧಿನಿಯಮ1987 ರ ಕಲಂ 4(1) ಅಡಿಯಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕಳೆದ ಆರು ತಿಂಗಳಿಂದ ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ್ದು, ಕುಲಂಕೂಷವಾಗಿ ವಿಚಾರಿಸಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತೀರ್ಪು ಮಾತ್ರ ಬಾಕಿ ಉಳಿಸಿದ್ದರು ಎನ್ನಲಾಗಿದೆ. ವಿಪ್ ಉಲ್ಲಂಘನೆ ಮಾಡಿರುವದು ಸಾಬೀತುಗೊಂಡಿದೆ ಎನ್ನಲಾಗಿದೆ. ಇದೀಗ ಅಂತಿಮ ತೀರ್ಪು ಪ್ರಕಟಿಸಿರುವ ಜಿಲ್ಲಾಧಿಕಾರಿಗಳು, ಪಕ್ಷಾಂತರಿಗಳ ಸದಸತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಪ್ ಉಲ್ಲಂಘಿಸಿ ಸದಸ್ಯತ್ವ ಕಳೆದುಕೊಂಡವರು..!
ಬಸವರಾಜ ಜೈನ್ (ವಾರ್ಡ್-21) ಗೈರು ಹಾಜರಿ ಹಿನ್ನೆಲೆ, ಶಶಿಧರ ರಡ್ಡಿ ಹೊಸಳ್ಳಿ (ವಾರ್ಡ್ ನಂ-30), ಅಕ್ಕಮಹಾದೇವಿ ರಾಯಕೋಟಿ (ವಾರ್ಡ್ ನಂ-3), ಇಬ್ರಾಹಿಂಸಾಬ್ ಶೇಕ್ ( ವಾರ್ಡ್ ನಂ-13), ಮಹ್ಮದ್ ಕಮಲ್ ಖುರೇಶಿ (ವಾರ್ಡ್ ನಂ-16), ಶರಣಮ್ಮ ಬುಡಯ್ಯನೋರ್ (ವಾರ್ಡ್ ನಂ-23), ಶಿವಕುಮಾರ ದೊಡ್ಡಮನಿ (ವಾರ್ಡ್ ನಂ-25) ಏಳು ಜನ ಸದಸ್ಯತ್ವ ಕಳೆದುಕೊಂಡವರಾಗಿದ್ದಾರೆ.