ಕೆಲವರ ವಿಚಾರಕ್ಕೆ ಬಸವ ಬ್ರ್ಯಾಂಡ್ ಬಳಕೆ – ಶ್ರೀಶೈಲ ಜಗದ್ಗುರು ಆರೋಪ
ಗದಗ : ಬಸವಾದಿ ಶರಣರು ವೇದೋಪನಿಷತ್ತು ವಿರೋಧಿಗಳು ಎಂದು ಎಲ್ಲೂ ಇಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿರುವವರು ಮಾತ್ರ ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಡುಪ್ಲಿಕೇಟ್ ವಸ್ತುಗಳಿಗೆ ಬ್ರ್ಯಾಂಡೆಡ್ ಕಂಪನಿಯ ಲೇಬಲ್ ಬಳಸಿ ಮಾರಾಟ ಮಾಡಿ ವಂಚಿಸಲಾಗುತ್ತದೆ. ಹಾಗೆಯೇ ಕೆಲವರು ತಮ್ಮ ವಿಚಾರವನ್ನು ಬಸವಣ್ಣನವರ ವಿಚಾರಗಳೆಂದು ಮಾರ್ಕೆಟ್ ಮಾಡುತ್ತಿದ್ದಾರೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದ್ದಾರೆ.
ನಗರದಲ್ಲಿ ನಡೆದ ವೀರಶೈವ ಲಿಂಗಾಯತ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ ಶ್ರೀಶೈಲ ಜಗದ್ಗುರುಗಳು ಮಾತನಾಡಿದರು. ವೀರಶೈವ ಧರ್ಮದ ಐತಿಹಾಸಿಕ ಸಾಹಿತ್ಯ ನಮ್ಮ ಕಣ್ಣ ಮುಂದೆಯೇ ಇದೆ. ಈ ಆಧಾರದ ಮೇಲೆ ನಿರ್ಣಯ ಕೈಗೊಳ್ಳಬೇಕೇ ಹೊರತು ಗೆಜಿಟೀಯರ್ ನಿಂದ ಅಲ್ಲ. ರಾಜಕೀಯ ಸ್ವಾರ್ಥ ಸಾಧನೆಗಾಗಿ ಸಮಾಜ ಬಲಿ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಧರ್ಮ ಒಡೆಯವವರು ಎಂದೂ ದೊಡ್ಡವರಾಗಲಾರರು, ಧರ್ಮ ಕೂಡಿಸುವ ಕೆಲಸ ಮಾಡುವವರು ದೊಡ್ಡವರಾಗುತ್ತಾರೆ. ಒಡೆಯುವ ಸಮಾವೇಶಗಳು ಸಾಕಷ್ಟು ನಡೆದಿವೆ. ನಮ್ಮ ಸಮಾವೇಶ ಕತ್ತರಿಸುವ ಸಮಾವೇಶ ಅಲ್ಲ, ಪೋಣಿಸುವ ಸಮಾವೇಶ. ಧರ್ಮ ಒಡೆಯವ ಕೆಲಸಕ್ಕೆ ನೀಡಿದಷ್ಟು ಸಮಯ ಮಹದಾಯಿ ನೀರು ತರಲು ವಿನಿಯೋಗಿಸಿದ್ದರೆ ನೀರಾವರಿ ಸಚಿವರಿಗೆ ಗೌರವ ಬರುತ್ತಿತ್ತು ಎಂದು ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಶ್ರೀಶೈಲ ಜಗದ್ಗುರುಗಳು ಕಿಡಿಕಾರಿದರು.