ಕಲಬುರಗಿಯಲ್ಲಿ ಕಾರುಗಳಿಗೆ ಬೆಂಕಿ ಇಟ್ಟವನು ಡಾಕ್ಟರ್ ಅಂತೆ!
ಕಲಬುರಗಿ: ಕಳೆದ ಒಂದು ವಾರದಿಂದ ಕಲಬುರಗಿ ಹಾಗೂ ಬೆಳಗಾವಿ ನಗರದ ಮಂದಿ ಆತಂಕಕ್ಕೊಳಗಾಗಿದ್ದರು. ಕಾರಣ ನಗರದ ವಿವಿದ ಬಡಾವಣೆಗಳಲ್ಲಿ ರಾತೋರಾತ್ರಿ ಕಾರುಗಳು ಬೆಂಕಿಗಾಹುತಿ ಆಗಿದ್ದವು. ಕರ್ಪೂರವನ್ನು ಇಟ್ಟು ಕಾರಿಗೆ ಬೆಂಕಿಯಿಟ್ಟು ಆರೋಪಿ ಎಸ್ಕೇಪ್ ಆಗುತ್ತಿದ್ದ. ಪರಿಣಾಮ ಹತ್ತಾರು ಕಾರುಗಳು ಬೆಂಕಿಗಾಹುತಿ ಆಗಿದ್ದವು. ಬೆಂಕಿಯಿಡುವ ದೃಶ್ಯ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು. ಆದರೆ, ಆರೋಪಿ ಮಾತ್ರ ಪತ್ತೆ ಆಗಿರಲಿಲ್ಲ. ಹೀಗಾಗಿ, ಕಲಬುರಗಿ ಜನ ಕಂಗಾಲಾಗಿದ್ದರು. ಪೊಲೀಸರು ಆರೋಪಿ ಪತ್ತೆಗಾಗಿ ಸಾಕಷ್ಟು ಶ್ರಮಿಸಿ ಸುಸ್ತಾಗಿದ್ದರು.
ಆದರೆ ಇಂದು ಕಾರಿಗೆ ಬೆಂಕಿಯಿಡುವ ವಿಕೃತ ಮನೋಸ್ಥಿತಿಯ ಕಿರಾತಕನ ಗ್ರಹಚಾರ ನೆಟ್ಟಗಿರಲಿಲ್ಲ. ಹೀಗಾಗಿ, ಬೆಳಗಾವಿ ನಗರದಲ್ಲಿ ಎಪಿಎಂಸಿ ಠಾಣೆಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದರೆ, ಆರೋಪಿಯ ಹಿನ್ನೆಲೆ ಕೇಳಿದಾಗ ಪೊಲೀಸರೆ ಬೆಚ್ಚಿ ಬಿದ್ದಿದ್ದಾರೆ. ಕಾರಣ ಬಂಧಿತ ಆರೋಪಿ ಓರ್ವ ಡಾಕ್ಟರ್ ಆಗಿದ್ದರು. ಕಲಬುರಗಿ ಮೂಲದ ಡಾ. ಅಮಿತ್ ಗಾಯಕವಾಡ್ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.