ಸಗರ ಯಲ್ಲಮ್ಮದೇವಿ ಜಾತ್ರೆ ಸಂಭ್ರಮಃ ದೇವಿ ಕಲ್ಲುಬಂಡೆಯಲ್ಲಿ ಲೀನವಾದಳೆಂಬ ಪ್ರತೀತಿ.!
ಜಾತ್ರೆ ಸಂಭ್ರಮ, ಭಕ್ತರಿಂದ ಸಾಂಪ್ರದಾಯಿಕ ನೈವೇದ್ಯ ಸಮರ್ಪಣೆ, ದೇವಿ ದರ್ಶನ
ಮಲ್ಲಿಕಾರ್ಜುನ ಮುದ್ನೂರ್
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಗ್ರಾಮ ದೇವತೆ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ವರ್ಷದಲ್ಲಿ ಎರಡು ಬಾರಿ ನಡೆಯುವುದು ವಿಶೇಷವಾಗಿದೆ. ಅದರಂತೆ ಮೊದಲನೇಯದು ಪ್ರತಿವರ್ಷ ಭಾರತ ಹುಣ್ಣಿಮೆಯ ಮುಂಚೆ ಎರಡು ದಿನ ಮೊದಲು ದೇವಿಯ ಜಾತ್ರೆ ವಿಜೃಂಭಣೆಯಿಂದ ಆರಂಭಗೊಳ್ಳುತ್ತದೆ. ಅಂತೆಯೇ ಮಂಗಳವಾರ ಜಾತ್ರೆ ಸಂಭ್ರಮ ಸಡಗರ ದೇವಸ್ಥಾನದ ಪ್ರದೇಶದಲ್ಲಿ ಮನೆ ಮಾಡಿತ್ತು.
ಜಾತ್ರ ಅಂಗವಾಗಿ ದೇವಿಗುಡಿಯ ಅರ್ಚಕರ ಮನೆಯಿಂದ ದೇವಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯೂ ಡುಪುರ ತಾಲೂಕಿನ ಯಮನೂರ ಗ್ರಾಮ ಬಳಿಯ ಕೃಷ್ಣಾ ನದಿಗೆ ಸೋಮವಾರವೇ ತೆರಳಿದ್ದು, ಗಂಗಾ ಸ್ನಾನಾದಿ ಇತರೆ ಧಾರ್ಮಿಕ ಪೂಜೆ ಮುಗಿಸಿಕೊಂಡು ಸಂಜೆವರೆಗೆ ಪುನಃ ಮೂಲ ದೇವಸ್ಥಾನ ತಲುಪಲಿದೆ.
ಹೀಗಾಗಿ ಮಂಗಳವಾರ ಬೆಳಗ್ಗೆ ಸಗರ ಗ್ರಾಮ ಸೇರಿದಮತೆ ಸುತ್ತಲಿನ ಹತ್ತಾರು ಗ್ರಾಮಸ್ಥರು ದೇವಿ ದರ್ಶನ ಪಡೆದು ಹೋಳಿಗೆ, ಕಡಬು, ಕಾಳು ಪಲ್ಯ ವಿಶೇಷವಾಗಿ ಪುಂಡಿಪಲ್ಯ ನೈವೇದ್ಯ ಅರ್ಪಿಸಿ ದರ್ಶನ ಪಡೆಯುವುದು ವಾಡಿಕೆ.
ಬೆಳಗ್ಗೆಯಿಂದ ದರ್ಶನಕ್ಕಾಗಿ ಆಗಮಿಸುವ ಭಕ್ತರ ಸಂಖ್ಯೆ ಮೀರಿದೆ. ಈ ಬಾರಿ ತಾಲೂಕು ಆಡಳಿತವು ಅಸಂಖ್ಯಾತ ಭಕ್ತರ ಆಗಮಿಸುವ ನಿರೀಕ್ಷೆ ಇರುವದರಿಂದ ಕುಡಿಯುವ ನೀರು ಸೇರಿದಂತೆ ರಸ್ತೆ ಇತರೆ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಭಕ್ತಾಧಿಗಳು ದರ್ಶನ ಪಡೆಯುತ್ತಿರುವುದು ಕಂಡು ಬಂದಿತು.
ವರ್ಷದಲ್ಲಿ ಎರಡು ಬಾರಿ ಜಾತ್ರೆಃ ಪ್ರತಿವರ್ಷ ಭಾರತ ಹುಣ್ಣಿಮೆಯ ಮುನ್ನವೇ ಬರುವ ಮಂಗಳವಾರ ಹಾಗೂ ಪ್ರತಿ ಸಲ ಹೋಳಿ ಹುಣ್ಣಿಮೆಯ ಮುನ್ನ ಬರುವ ಶುಕ್ರವಾರ ಹೀಗೆ ಎರಡು ಬಾರಿ ಜಾತ್ರೆ ನಡೆಯುವು ಇಲ್ಲಿನ ವಿಶೇಷ. ಎರಡು ಬಾರಿ ಜಾತ್ರೆಯಲ್ಲಿ ಅಸಂಖ್ಯಾತ ಜನ ಸೇರಲಿದೆ. ಆಂದ್ರ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತಾಧಿಗಳು ಜಾತ್ರೆಗೆ ಆಗಮಿಸುತ್ತಾರೆ.
ಕಲ್ಲು ಬಂಡೆಯಲ್ಲಿ ಲೀನಃ ಪುರಾಣಗಳ ಪ್ರಕಾರ ಯಲ್ಲಮ್ಮ ದೇವಿ ಒಂದು ದಿನ ಹೊಲದಲ್ಲಿದ್ದ ಬದನೆಕಾಯಿ ಕೀಳುವಾಗ ಹೊಲದ ಓರ್ವ ಆಳು ಜೋರಾಗಿ ಕೂಗಿ ಯಾರದು ಬದನೆಕಾಯಿ ಕೀಳುತ್ತಿರುವದು ಎಂದು ದೇವಿಯನ್ನು ಹಿಡಿಯಲು ಬೆನ್ನು ಹತ್ತುತ್ತಾನೆ. ಗಾಬರಿಗೊಂಡ ಯಲ್ಲಮ್ಮ ಗುಡ್ಡವೇರಿ ಬಂಡೆಗಲ್ಲನ್ನು ಅಪ್ಪಿಕೊಂಡು ಲೀನವಾಗಿದ್ದಾಳೆ ಎಂಬ ಪ್ರತೀತಿ ಇದೆ.
ಬೆತ್ತಲೆ ಸೇವೆ ನಿಷೇಧಃ ಭಕ್ತಾಧಿಗಳಿಂದ ಪರ್ಯಾಯ ವ್ಯವಸ್ಥೆ
ಯಲ್ಲಮ್ಮದೇವಿ ಜಾತ್ರೆಯಲ್ಲಿ ಈ ಮೊದಲು ನಡೆಯುತ್ತಿದ್ದ ಅನಿಷ್ಟ ಪದ್ಧತಿ ಮೈತುಂಬಾ ಬೇವಿ ತಪ್ಪಲು ಕಟ್ಟಿಕೊಂಡು ನಡೆಸುವ ಬೆತ್ತಲೆ ಸೇವೆ ಹಾಗೂ ಅಪಾರ ಸಂಖ್ಯೆಯ ಕುರಿ ಬಲಿ ಪದ್ದತಿಗಳನ್ನು ಕಳೆದ ನಾಲ್ಕು ವರ್ಷದ ಹಿಂದೆ ಜಿಲ್ಲಾಡಳಿತ ನಿಷೇದಿಸಿದೆ. ಪ್ರಸ್ತುತ ಜಾತ್ರೆಯಲ್ಲಿ ಕುರಿಬಲಿ ನಡೆಯುವದಿಲ್ಲ. ಬೆತ್ತಲೆ ಸೇವೆಗೂ ಬ್ರೆಕ್ ಬಿದ್ದಿದೆ. ಆದರೆ ಭಕ್ತಾಧಿಗಳು ಮೈಮೇಲೆ ಬಟ್ಟೆ ತೊಟ್ಟುಕೊಂಡು ಅದರ ಮೇಲೆಯೇ ಮಡಿಯಲಿ ಬೇವಿನ ತಪ್ಪಲು ಕಟ್ಟಿಕೊಂಡು ತಾವುಗಳ ಹೊತ್ತ ಹರಕೆಯನ್ನು ತೀರಿಸುತ್ತಿರುವುದು ಕಂಡು ಬಂದಿತು. ದೇವಿಗೆ ನೈವೇದ್ಯ ಅರ್ಪಿಸಿ ನಂತರ ಕುಟುಂಬಸ್ಥರು ಸಹಭೋಜನ ಸವಿದರು.
ಉಳಿದಂತೆ ಜಾತ್ರೆಯಲಿ ಭಾಜ ಭಜಂತ್ರಿ, ದೀಡ ನಮಸ್ಕಾರ, ಕುಸ್ತಿ ಡೊಳ್ಳು ಕುಣಿತ ಆ ಮೇಲೆ ತಲೆ ಮೇಲೆ ಕುಂಭ ಅದರ ಮೇಲೆ ದೇವಿಯ ಮೂರ್ತಿ ಹೊತ್ತ ಜೋಗ ಆಡುವ ಮಹಿಳೆಯರು ತಾಳ, ಹಲಗೆಯ ನಾದಕ್ಕೆ ತಕ್ಕಂತೆ ಭಕ್ತಿಪರವಶರಾಗಿ ಕುಣಿಯುವುದು ಕಂಡು ಬಂದಿತು. ಜಾತ್ರೆ ಅಂಗವಾಗಿ ಹಲವಾರು ಅಂಗಡಿಗಳನ್ನು ಹಾಕಲಾಗಿತ್ತು. ಒಂದು ವಾರಗಳ ಕಾಲ ಜಾತ್ರೆ ನಡೆಯಲಿದೆ.