ಕಾವ್ಯ
ಅಮ್ಮನ ನೆನೆದು ಕವಿ ಅಸಾದುಲ್ಲಾ ಬೇಗ್ ಎದೆಯಾಳದಿಂದ ಹೊರಹೊಮ್ಮಿದ ಕಾವ್ಯ “ನನ್ನ ಅಮ್ಮ”
ನನ್ನ ಅಮ್ಮ
ನಗು ಮುಖದ ನನ್ನ ಅಮ್ಮ…
ಹೋಗಿ ಬರುವೆ… ಅನ್ನಲಿಲ್ಲ;
ಎಲ್ಲಿಗೆ,ಏಕೆ?… ಹೇಳಲಿಲ್ಲ
ನನ್ನ ಬಿಟ್ಟು ಹೇಗೆ ಬಾಳುವೆ?
ದೇಹ ಬಿಟ್ಟ ಆತ್ಮವೂ ಕೇಳಲಿಲ್ಲ,
ನಲ್ವತ್ತು ವರ್ಷಗಳ ಹಿಂದೆ
ಅಪ್ಪ ಹೀಗೆಯೇ ನಮ್ಮನ್ನಗಲಿದ್ದ;
ಬಳೆ-ಮಾಂಗಲ್ಯ ತೆಗೆದ ಅಮ್ಮ,
ತನ್ನ ಆಸೆ-ಆಕಾಂಕ್ಷೆ ಬಲಿ ಕೊಟ್ಟಳು,
ನನ್ನ ಬೆನ್ನಿಗೆ…ಇಬ್ಬಿಬ್ಬರು ತಮ್ಮಂದಿರು
ತಂಗಿಯರನ್ನು ಕಟ್ಟಿ…
ನನ್ನೊಂದಿಗೆ ತಾನೂ ಎತ್ತಾಗಿದ್ದವಳು,
ನಮ್ಮನ್ನೆಲ್ಲಾ ದಡಸೇರಿಸಿಯೇ…
ಉಸಿರು ಬಿಟ್ಟಳು!
ಮುತ್ತಿಟ್ಟ-ತುತ್ತಿಟ್ಟ ಅಮ್ಮ
ಸದಾ ನಗು ಮುಖದ..
ನನ್ನ ಅಮ್ಮ ಇನ್ನಿಲ್ಲ!!
–ಅಸಾದುಲ್ಲಾ ಬೇಗ್, ಖ್ಯಾತ ಕವಿ
21/02/18