‘ಮಾಡಿದಷ್ಟು ನೀಡು ಭಿಕ್ಷೆ’ ಮಂತ್ರದ ಮಹಾನುಭಾವ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಲಕ್ಷಾಂತರ ಭಕ್ತರು
-ವಿನಯ ಮುದನೂರ್
ಸಂತ, ಶರಣ, ದಾರ್ಶನಿಕ, ಪವಾಡ ಪುರುಷ ಶ್ರೀಗುರು ತಿಪ್ಪೇರುದ್ರಸ್ವಾಮಿ ಅವರು. ‘ಮಾಡಿದಷ್ಟು ನೀಡು
ಭಿಕ್ಷೆ’ ಎಂದು ಸಾರುವ ಮೂಲಕ ಕಾಯಕತತ್ವ ಹೇಳಿದ ಶರಣರು. ಕೇವಲ ಧಾರ್ಮಿಕ ಗುರುವಾಗಿರದೆ ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ಬರದನಾಡಿಗೆ ಬಗೀರಥನಾಗಿ ಬಂದವರು. ಪರಿಣಾಮ ಕೋಟೆನಾಡಿನ ಜನ ಇಂದಿಗೂ ಜಾತಿ ಬೇಧವಿಲ್ಲದೆ ತಿಪ್ಪೇರುದ್ರಸ್ವಾಮಿಯನ್ನು ದೇವರಂತೆ ಪೂಜಿಸುತ್ತಾರೆ. ವರ್ಷಕ್ಕೊಮ್ಮೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವಕ್ಕೆ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಜನ ಸೇರಿ ಸ್ಮರಿಸುತ್ತಾರೆ. ಬೇಡಿದ ವರ ನೀಡುವ ದೈವ ಎಂದು ನಂಬಿ ಪೂಜಿಸುತ್ತಾರೆ.
ಪಂಚಗಣಾಧೀಶ್ವರರೆಂದು ಹೇಳಲಾಗಿರುವ ಕೋಲುಶಾಂತೇಶ, ಕೆಂಪಯ್ಯ, ಚೆನ್ನಪ್ಪಯ್ಯ, ಚನ್ನಬಸವೇಶ್ವರ ಹಾಗೂ ತಿಪ್ಪೇಸ್ವಾಮಿಗಳು ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಜನೋಪಕಾರಿ ಕಾರ್ಯ ಕೈಗೊಂಡಿದ್ದರು. ಆ ಪೈಕಿ 15ನೇ ಶತಮಾನದಲ್ಲಿ ತಿಪ್ಪೇರುದ್ರಸ್ವಾಮಿಗಳು ಆಂಧ್ರಪ್ರದೇಶದಿಂದ ನಾಯಕನಹಟ್ಟಿಗೆ ಬಂದರು. ಸ್ವಾಮಿಗಳು ಬಂದ ಸಂದರ್ಭದಲ್ಲಿ ನಾಯಕನಹಟ್ಟಿ ಎಂಬ ಗ್ರಾಮ ಕುಗ್ರಾಮವಾಗಿತ್ತು. ಗ್ರಾಮದೇವತೆ ಮಾರಮ್ಮನ ದೇಗುಲದಲ್ಲಿ ಸ್ವಾಮಿಗಳು ಬಿಡಾರ ಹೂಡಿದ್ದರು. ದೇವಿ ಪರಗ್ರಾಮಗಳಿಗೆ ಹೋಗಿ ಬರುವಷ್ಟರಲ್ಲಿ ದೇಗುಲದ ತುಂಬ ಜೋಳಿಗೆ ಮತ್ತು ಬೆತ್ತಗಳು ಕಾಣಿಸುತ್ತವೆ. ಆಗ ಈ ಸ್ಥಳ ಮುಂದೆ ಪುಣ್ಯ ಕ್ಷೇತ್ರವಾಗಲಿದೆ. ಈ ಜಾಗವನ್ನು ನನಗೆ ಬಿಟ್ಟುಕೊಡು ದೇವಿ ಎಂದು ತಿಪ್ಪೇರುದ್ರಸ್ವಾಮಿಗಳು ಮನವಿ ಮಾಡುತ್ತಾರೆ. ಒಪ್ಪಿಗೆ ಸೂಚಿಸಿದ ದೇವಿ ಪಕ್ಕದ ವಡ್ಡನಹಳ್ಳಿಗೆ ಹೋಗಿ ನೆಲೆಸುತ್ತಾಳೆ ಎಂಬ ಪ್ರತೀತಿಯಿದೆ.
ತನ್ನ ಕಾಯಕ ಆರಂಭಿಸಿ ತಿಪ್ಪೇರುದ್ರಸ್ವಾಮಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಜನ ಮನ ಸೆಳೆಯುತ್ತಾರೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಸೂಚಿಸುತ್ತಾರೆ. ಊರ ಸುತ್ತ ಏಳು ಪುರ, ಏಳು ಕೆರೆಗಳನ್ನು ನಿರ್ಮಿಸುವ ಮೂಲಕ ಜನರಿಗೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ಕಾಯಕ ತತ್ವವನ್ನು ಸಾರುತ್ತಾರೆ. ಕೆರೆಗಳನ್ನು ಕಟ್ಟುವ ಮೂಲಕ ಸಮೃದ್ಧ ಭೂಮಿಯನ್ನು ನಿರ್ಮಿಸಿ ಕೃಷಿಕರ ಕೈಗೆ ಕೆಲಸ ನೀಡುವ ಮುಖಾಂತರ ಈ ಭಾಗದ ಜನರ ಆರಧ್ಯ ದೈವವಾಗುತ್ತಾರೆ.
ಒಳಮಠ – ಹೊರಮಠ ವಿಶೇಷ
ಅಷ್ಟದಿಕ್ಪಾಲಕ ಕಮಲ, ಭುವನೇಶ್ವರಿ ಕಮಲದ ಮಹಿಮೆ
ತಿಪ್ಪೇರುದ್ರಸ್ವಾಮಿಗಳೂ ದೇವಿಗುಡಿಯನ್ನೇ ತಮ್ಮ ದರ್ಬಾರು ಮಾಡಿಕೊಂಡಿದ್ದರು. ಅದೇ ಗುಡಿ ತಿಪ್ಪೇರುದ್ರಸ್ವಾಮಿಗಳ ಒಳಮಠ ಎಂದು ಕರೆಸಿಕೊಳ್ಳುತ್ತಿದೆ. ತಿಪ್ಪೇರುದ್ರಸ್ವಾಮಿಗಳು ಲಿಂಗೈಕ್ಯರಾಗಿರುವ ಚಿಕ್ಕಕೆರೆ ಬಳಿಯ ಸ್ಥಳ ಹೊರಮಠವಾಗಿದೆ. ಒಳಮಠದಲ್ಲಿ ವಿಶೇಷವಾದ ಕಲ್ಲಿನ ಮಂಟಪಗಳನ್ನು ನಿರ್ಮಾಣ ಮಾಡಲಾಗಿದೆ. ಮೊದಲ ಮಂಟಪ ಅಷ್ಟದಿಕ್ಪಾಲಕರ ಕಮಲ.
ಎರಡನೇಯದು ಭುವನೇಶ್ವರಿ ಕಮಲ. ಅಷ್ಟದಿಕ್ಪಾಲಕರ ಕಮಲದ ಕೆಳಗೆ ನಿಂತು ಧ್ಯಾನ ಮಾಡಿದ್ರೆ ಅಷ್ಟದಿಕ್ಪಾಲಕರ ಆಶೀರ್ವಾದ ಲಭಿಸುತ್ತದೆಂಬ ನಂಬಿಕೆ ಇದೆ. ಅಂತೆಯೇ ನಾಲ್ಕು ಕಲ್ಲಿನ ಮಂಟಪದ ಮದ್ಯದಲ್ಲಿರುವ ಭುವನೇಶ್ವರಿ ಕಮಲ ವಿಶೇಷವಾಗಿದೆ. ಶಿವಪುರಾಣದಲ್ಲಿನ ಗಿರಾಜಾ ಕಲ್ಯಾಣ , ತ್ರಿಪುರ ಸಂಹಾರ ಕಥೆಗಳಲ್ಲಿ ಬರುವ ದೇವಾನುದೇವತೆಗಳನ್ನು ಕಮಲದಲ್ಲಿ ರಚಿಸಲಾಗಿದೆ. ಪ್ರತಿ ಜಾತ್ರೆ , ಉತ್ಸವಗಳು ಅದೇ ಕಮಲದ ಕೆಳಗಿನಿಂದಲೇ ಆರಂಬಿಸಲಾಗುತ್ತದೆ.
ನವನಾರಿ ಕುಂಜರ – ಪಂಚನಾರಿ ತುರುಗ
ಮತ್ತೊಂದು ಕಡೆ ಕಂಬದಲ್ಲಿ ನವನಾರಿ ಕುಂಜರ ಮತ್ತು ಪಂಚನಾರಿ ತುರುಗ ಎಂಬ ವಿಶೇಷ ವಿಗ್ರಹಗಳಿವೆ. ಆ ಪೈಕಿ ನವನಾರಿ ಕುಂಜರದ ವಿಶೇಷತೆ ಅಂದರೆ ಗರ್ಭಿಣಿಯರಿಗೆ ಯಾವುದೇ ತೊಂದರೆ ಆಗದಿರಲಿ ಎಂದು ಈ ವಿಗ್ರಹಗಳ ಎದುರು ಎಣ್ಣೇ ದೀಪ ಹಚ್ಚಿ ಬೇಡಿಕೊಂಡರೆ ಹರಕೆ ಫಲಿಸುತ್ತದೆ. ಅಂತೆಯೇ ಪಂಚನಾರಿ ತುರುಗ ಚಂಚಲ ಮನಸ್ಸಿನ ಪ್ರತೀಕವಾಗಿದೆ. ಪ್ರಾಯಕ್ಕೆ ಬಂದ ಯುವಕ-ಯುವತಿ ಕುದುರೆಯಂಥ ಮನಸ್ಸಿನ ಕೈಲಿ ಬುದ್ದಿಕೊಟ್ಟು ಮನೆಬಿಟ್ಟು ಹೋದಾಗ ಪೋಷಕರು ಈ ಪಂಚನಾರಿ ತುರುಗದ ಎದುರು ದೀಪ ಹಚ್ಚಿ ಬೇಡಿಕೊಂಡರೆ ಒಳಿತಾಗುತ್ತದೆಂಬ ನಂಬಿಕೆ ಇದೆ.
ಐಕ್ಯಮಂಟಪ
ಗ್ರಾಮದ ಹೊರಭಾಗದ ಚಿಕ್ಕಕೆರೆ ಬಳಿ ಗುರುತಿಪ್ಪೇರುದ್ರಸ್ವಾಮಿ ಲಿಂಗೈಕ್ಯರಾಗಿರುವ ಸ್ಥಳದಲ್ಲಿ ಐಕ್ಯಮಂಟಪವನ್ನು ನಿರ್ಮಿಸಲಾಗಿದ್ದು ಹೊರಮಠ ಎಂದು ಕರೆಯಲಾಗುತ್ತದೆ. ಜಾತ್ರೆ, ಉತ್ಸವದ ಸಂದರ್ಭದ ವೇಳೆ ಹೊರಮಠದಲ್ಲಿ ಹೆಚ್ಚಾಗಿ ಸಾಧು-ಸಂತರು ಬೀಡು ಬಿಟ್ಟಿರುತ್ತಾರೆ. ಪ್ರತಿವರ್ಷದ ಪಾಲ್ಗುಣ ಮಾಸ, ಚಿತ್ತ ನಕ್ಷತ್ರದಂದು ತಿಪ್ಪೇರುದ್ರಸ್ವಾಮಿಗಳು ಜೀವೈಕ್ಯವಾದ ದಿನ ವಿಶಿಷ್ಟ ಜಾತ್ರೆ, ರಥೋತ್ಸವ ಆಚರಿಸಲಾಗುತ್ತದೆ.
ಗುರುತಿಪ್ಪೇರುದ್ರಸ್ವಾಮಿ ಗ್ರಾಮಕ್ಕೆ ಬರುವ ವೇಳೆ ಕತ್ತಲಾಗಿದ್ದು ಕೊಬ್ಬರಿ ವ್ಯಾಪಾರಿ ಆಗಿದ್ದ ಭಕ್ತ ಪಣಿಯಪ್ಪ ಕೊಬ್ಬರಿಯನ್ನು ಸುಟ್ಟು ದಾರಿದೀಪವನ್ನಾಗಿಸಿದ್ದನೆಂಬ ನಂಬಿಕೆಯಿದೆ. ಪರಿಣಾಮ ಇಂದಿಗೂ ಭಕ್ತರು ಜಾತ್ರೆ ವೇಳೆ ಕೊಬ್ಬರಿ ಸುಟ್ಟು ಹರಕೆ ತೀರಿಸುವ ವಿಶಿಷ್ಟ ಆಚರಣೆ ನಡೆಯುತ್ತದೆ. ರಾಜ್ಯದಲ್ಲೇ ಅತಿದೊಡ್ಡ ಜಾತ್ರೆಗಳ ಪೈಕಿ ಒಂದಾಗಿದೆ. ಇದೇ ಮಾರ್ಚ್ 05ರಂದು ಜಾತ್ರೆ ನಡೆಯಲಿದ್ದು ಲಕ್ಷಾಂತರ ಜನ ಸೇರಲಿದ್ದಾರೆ.