ಪ್ರಮುಖ ಸುದ್ದಿ

70 ವರ್ಷದಿಂದ ದೇಶವಾಳಿದ ಪಕ್ಷಗಳ ಕೊಡುಗೆ ನಗಣ್ಯಃ SDPI

ಪರ್ಯಾಯ ರಾಜಕಾರಣ ಅನಿವಾರ್ಯ, ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಸಿಲ್ಲ ಆರೋಪ

ಯಾದಗಿರಿಃ ಶೋಷಿತ ಸಮುದಾಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರವಿಲ್ಲದ ಮಾಡುವ ಹೋರಾಟ ಇತರೆ ಎಲ್ಲಾ ಪ್ರಯತ್ನಗಳು ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತೆ ಎಂದು ಎಸ್‍ಡಿಪಿಐ ಪಕ್ಷ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹೀಂ ಪಟೇಲ್ ಹೇಳಿದರು.

ಜಿಲ್ಲೆಯ ಶಹಾಪುರ ನಗರದ ಐಡಿಯಲ್ ಸ್ಕೂಲ್ ಹತ್ತಿರ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದವತಿಯಿಂದ ಆಯೋಜಿಸಲಾದ ಬೂತ್ ಮಟ್ಟದ ನಾಯಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರದ ಪ್ರಾಮುಖ್ಯತೆ ಕುರಿತು ಮಾತು ಮುಂದುವರೆಸಿದ ಅವರು, ಕಳೆದ 70 ವರ್ಷದಿಂದ ಅಧಿಕಾರ ನಡೆಸಿದ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರ ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಹಲವಾರು ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅದರಲ್ಲೂ ಮುಸ್ಲಿಂ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಗಳ ಕೊಡುಗೆ ನಗಣ್ಯ ಎಂದು ಆರೋಪಿಸಿದರು.

ಮತ್ತು ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಚುನಾವಣೆ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ರಂಗನಾಥ್ ಮಿಶ್ರಾ ವರದಿ ಶಿಫಾರಸ್ಸು ಜಾರಿ, ವಕ್ಫ್ ಆಸ್ತಿಯ ಸಂರಕ್ಷಣೆ ಸರ್ವೆ ಹಾಗೂ ಸೂಕ್ತ ಕ್ರಮ, ಹಲವಾರು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಯುವಕರ ಮೊಕದ್ದಮೆಗಳ ವಿಚಾರಣೆಗಾಗಿ ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆ ಸೇರಿದಂತೆ ಹೀಗೆ ಭರವಸೆಗಳ ಮಹಾಪೂರವೇ ನೀಡಿತ್ತು. ಆದರೆ ಇವ್ಯಾವಯ ಈಡೇರಿಸದೆ ಮುಸ್ಲಿಂ ಸಮುದಾಯ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ದೂರಿದರು.

ಕಾರಣ ಅಧಿಕಾರದ ಅನಿವಾರ್ಯತೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಬರುವ ಚುನವಾಣೆಯಲ್ಲಿ ಕನಿಷ್ಟ 50 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನ ಮಾಡಲಾಗಿದೆ. ಈಗಾಗಲೇ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಶಹಾಪುರ ಸೇರಿದಂತೆ 25 ಕ್ಷೇತ್ರಗಳಲ್ಲಿ ಶೀಘ್ರವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದ್ದೇವೆ. ಕಾರಣ ಮುಸ್ಲಿಂ ಬಾಂಧವರು ಕಾರ್ಯಕರ್ತರು ಸಮಾನ ಮನಸ್ಕರು ಮತ್ತು ಪ್ರಜ್ಞಾವಂತರು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಬೇಕಿದೆ.

ಕೇವಲ ಕೋಮುವಾದಿ ಬಿಜೆಪಿ ಪಕ್ಷ ಸೋಲಿಸುವ ನಿಟ್ಟಿನಲ್ಲಿ ಇನ್ನೊಂದು ಪಕ್ಷವನ್ನು ಗೆಲ್ಲಿಸುವುದು ಮೂರ್ಖತನವಾಗಿದೆ. ಜಾತ್ಯತೀತ ಸಿದ್ಧಾಂತ ಹೊಂದಿದ್ದ ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮತದಾನ ಮಾಡಬೇಕು. ಈ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಆದರೆ ಈ ಬಾರಿ ಖಂಡಿತವಾಗಿ ಎಸ್‍ಡಿಪಿಐ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಮೂಲಕ ರಾಜ್ಯದಲ್ಲಿ ರಾಜಕೀಯ ನೆಲೆಯನ್ನು ಕಂಡುಕೊಳ್ಳುವುದು ಶತಸಿದ್ಧ ಎಂದರು.

ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಸಯ್ಯದ್ ಇಸಾಕ ಹುಸೇನ್, ಮುಖಂಡರಾದ ಶಾಹೀದ್ ನಸೀರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಮನೀರ ಬಾಗವಾನ್, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಸಯ್ಯದ್ ಚಂದಾ ಹುಸೇನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button