ಮತ ಬೇಟೆಗೆ ಮಠ ಭೇಟಿ : ಯಾರಿಗೆ ಒಲಿಯುವರು ಮತಾ(ಠಾ)ಧೀಶರು?
-ವಿನಯ ಮುದನೂರ್
ಶತಾಯಗತಾಯ ಕರ್ನಾಟಕ ಗೆಲ್ಲಲೇಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರು ನಾನಾ ಸರ್ಕಸ್ ಮಾಡುತ್ತಿದ್ದಾರೆ. ವೀರಶೈವ – ಲಿಂಗಾಯತ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಎರಡೂ ಪಕ್ಷಗಳು ನಾನಾ ತಂತ್ರಗಾರಿಕೆಯಲ್ಲಿ ತೊಡಗಿವೆ. ಬಿಜೆಪಿ ಮತಬ್ಯಾಂಕ್ ಎಂದೇ ಕರೆಯಲ್ಪಡುತ್ತಿದ್ದ ವೀರಶೈವ-ಲಿಂಗಾಯತ ಮತಬ್ಯಾಂಕಿಗೆ ಕೈ ಹಾಕುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಶಸ್ವಿ ಆಗಿದ್ದಾರೆ. ಲಿಂಗಾಯತ – ವೀರಶೈವ ಸ್ವಂತಂತ್ರ ಧರ್ಮವೆಂದು ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದಾರೆ.
ಸಿದ್ಧರಾಮಯ್ಯ ಸರ್ಕಾರದ ನಿರ್ಧಾರ ಬಹುತೇಕ ಲಿಂಗಾಯತರಿಗೆ ಖುಷಿ ಮೂಡಿಸಿದ್ದರೆ ವೀರಶೈವರಲ್ಲಿ ಕಿಡಿ ಹೊತ್ತಿಸಿದೆ. ಹೀಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದ ಪ್ರಬಲ ಸಮುದಾಯದ ಮತಗಳನ್ನು ಪಡೆಯಲು ಬಡಿದಾಡುತ್ತಿವೆ. ಪರಿಣಾಮ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ, ಚುನಾವಣ ಚಾಣಕ್ಯ ಅಮಿತ್ ಶಾ ತಮ್ಮ ಚಾಣಕ್ಯ ನೀತಿ ಆರಂಭಿಸಿದ್ದಾರೆ. ಹೀಗಾಗಿ, ಕರುನಾಡ ಜಾಗೃತಿ ಯಾತ್ರೆ ಹೆಸರಿನಲ್ಲಿ ಎರಡು ದಿನದ ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಇಂದು ತುಮಕೂರಿನ ಸಿದ್ಧಗಂಗಾ ಮಠದಿಂದಲೇ ಆರಂಭಿಸಿದ್ದಾರೆ. ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಶತಾಯುಷಿ ಶಿವಕುಮಾರ್ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಯಾತ್ರೆ ಆರಂಭಿಸಿದ್ದು ಸಾಕ್ಷಾತ್ ಶಿವ ದರ್ಶನ ಪಡೆದಷ್ಟೇ ಖುಷಿ ಆಗಿದೆ. ಅವರ ಬದುಕೇ ನಮಗೆ ಆದಾರ್ಶ ಪಾಠ ಎಂದು ಹೇಳಿ ಅಮಿತ್ ಶಾ ಪ್ರವಾಸ ಹೊರಟಿದ್ದಾರೆ.
ನಾಳೆ ಮದ್ಯಕರ್ನಾಟಕದ ಪ್ರಭಾವಿ ಮಠಗಳಾದ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠ ಹಾಗೂ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಮಠ, ಮುರುಘಾಮಠಕ್ಕೆ ಭೇಟಿ ನೀಡಿ ಮಠಾಧೀಶರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಮುರುಘಾಮಠ ಸರ್ಕಾರ ಎಂದೇ ಖ್ಯಾತಿ ಪಡೆದಿರುವ ಇತಿಹಾಸ ಮುರುಘಾಮಠಕ್ಕಿದೆ. ಅಂಥ ಪ್ರಭಾವಿ ಶೂನ್ಯಪೀಠದ ಪೀಠಾದ್ಯಕ್ಷರಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರು ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಹೀಗಾಗಿ, ಅಮಿತ್ ಶಾ ಅವರ ಮುರುಘಾಶ್ರೀ ಹಾಗೂ ಅವರೊಂದಿಗೆ ಇತರೆ ಮಠಾಧೀಶರ ಭೇಟಿ ಮಹತ್ವ ಪಡೆದುಕೊಂಡಿದೆ.
ಐದು ಮತಕ್ಷೇತ್ರಗಳಲ್ಲಿ ಇಂಥವರನ್ನೇ ಗೆಲ್ಲಿಸಬೇಕೆಂದು ಅಬ್ಯರ್ಥಿಗಳ ಹೆಸರು ಘೋಷಿಸಿ ಆ ಪೈಕಿ ನಾಲ್ವರ ಗೆಲುವಿಗೆ ಕಾರಣವಾಗಿದ್ದ ಇತಿಹಾಸ ತರಳಬಾಳು ಮಠಕ್ಕಿದೆ. ಮದ್ಯಕರ್ನಾಟಕದ ಪ್ರಭಾವಿ ಮಠವಾದ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜೊತೆ ಅಮಿತ್ ಶಾ ಸಮಾಲೋಚನೆ ನಡೆಸುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.
ಇಬ್ಬರು ಪ್ರಮುಖ ಮಠಾಧೀಶರ ಜೊತೆ ಲಿಂಗಾಯತ ಸ್ವತಂತ್ರ ಧರ್ಮ ಸೇರಿದಂತೆ ಇತರೆ ವಿಚಾರಗಳ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ದಲಿತ ಸಮುದಾಯದ ಪ್ರಭಾವಿ ಮಠವಾದ ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಅಮಿತ್ ಶಾ ಭೇಟಿ ಮಾಡುತ್ತಿರುವುದು ದಲಿತ ಮತ್ತು ಲಿಂಗಾಯತ ಮತಗಳ ಮೇಲೆ ಚಾಣಕ್ಯ ಕಣ್ಣಿಟ್ಟಿರುವುದು ಪಕ್ಕಾ ಆಗುತ್ತಿದೆ. ಅಹಿಂದ ನಾಯಕರಾಗಿದ್ದ ಸಿಎಂ ಸಿದ್ಧರಾಮಯ್ಯ ಈಗ ವೀರಶೈವ-ಲಿಂಗಾಯತ ಮತಬುಟ್ಟಿಗೆ ಕೈ ಹಾಕುವ ಮೂಲಕ ಹೊಸ ತಂತ್ರಗಾರಿಕೆ ಹೆಣೆದಿದ್ದಾರೆ. ಸಿಎಂ ಸಿದ್ಧರಾಮಯ್ಯ ತಂತ್ರಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಯಾವ ಪ್ರತಿತಂತ್ರ ಹಣಿಯಲಿದ್ದಾರೆ ಎಂಬುದೇ ರಾಜ್ಯದ ಜನರಲ್ಲಿ ಮೂಡಿದ ಸದ್ಯದ ಕುತೂಹಲ.
ಚುನಾವಣ ಚಾಣಕ್ಯ ಅಮಿತ್ ಶಾ ಮಠಾಧೀಶರ ಭೇಟಿ ಮೂಲಕ ಮತಾಧೀಶರನ್ನು ಸೆಳೆಯುವ ತಂತ್ರಗಾರಿಕೆಗೆ ಚಾಲನೆ ನೀಡುತ್ತಿದ್ದಂತೆ ಅತ್ತ ರಾಹುಲ್ ಗಾಂಧಿ ಮತ್ತೆ ರಾಜ್ಯ ಪ್ರವಾಸಕ್ಕೆ ಅಣಿಯಾಗಿದ್ದಾರೆ. ಎಪ್ರಿಲ್ 3ಮತ್ತು 4 ಚಿತ್ರದುರ್ಗ, ತುಮಕೂರು, 7ಮತ್ತು8ಕ್ಕೆ ಕೋಲಾರ, ಬೆಂಗಳೂರು ಪ್ರವಾಸದ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ರಾಹುಲ್ ಗಾಂಧಿಯೂ ಸಹ ಮತಾಧೀಶರ ಬೇಟೆಗಾಗಿ ಮಠ ಭೇಟಿಗೆ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಮಠಾಧೀಶರ ಭೇಟಿಯಿಂದ ಮತಾಧೀಶ ಒಲಿಯುತ್ತಾನೆಯೇ ಎಂಬುದನ್ನು ಕಾದು ನೋಡಬೇಕಿದೆ. ರಾಹುಲ್ ಮತ್ತು ಅಮಿತ್ ಶಾ ಮಠ-ಮತ ರಾಜಕೀಯ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತದೆ ಎಂಬುದನ್ನು ಕರ್ನಾಟಕ ಚುನಾವಣ ಫಲಿತಾಂಶದಿಂದ ಹೊರಬರಬೇಕಿದೆ.