ಅಡೆತಡೆಗಳು ಗೆಲುವು ತರುವ ಮೈಲಿಗಲ್ಲುಗಳು.!
ಅಡೆತಡೆಗಳು ಗೆಲುವು ತರುವ ಮೈಲಿಗಲ್ಲುಗಳು.!
-ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ. 9449234142.
ಗುರಿಯತ್ತ ಹೋಗುವ ದಾರಿಯಲ್ಲಿ ಅಡತಡೆಗಳು ಒಂದೇ, ಎರಡೇ, ಅಬ್ಬಬ್ಬಾ! ಸಾಲು ಸಾಲಾಗಿ ನಿಂತಿರುತ್ತವೆ.
ಒಂದೊಂದೇ ಅಡೆತಡೆಯನ್ನು ದಾಟುತ್ತ ಇಟ್ಟ ಗುರಿಯೆಡೆಗೆ ಸಾಗಬೇಕೆನ್ನುವಷ್ಟರಲ್ಲಿ ಮನೋಸ್ಥೈರ್ಯ ನೆಲ ಕಚ್ಚಿರುತ್ತದೆ. ಹೇಗಾದರೂ ಮಾಡಿ ಮೈ ಮನದಲ್ಲಿನ ಶಕ್ತಿಯನ್ನು ಒಟ್ಟು ಗೂಡಿಸಿಕೊಂಡು ಎದ್ದು ನಿಂತು ಮುನ್ನುಗ್ಗಬೇಕೆಂದರೂ ಅಡೆತಡೆಗಳೆಂಬ ನಕ್ಷತ್ರಕನಿಗೆ ಹೆದರಿ ಅಲ್ಲಿಯೇ ನಿಂತು ಬಿಡುತ್ತೇನೆ.
ಗುರಿಯನ್ನು ಸಾಧಿಸಿಯೇ ತೀರಬೇಕೆಂದು ದಿನವೂ ನೂರು ಬಾರಿ ಅಂದುಕೊಂಡರೂ ಮಗ್ಗುಲಲ್ಲಿರುವ ಅಡೆತಡೆಯ ಮುಳ್ಳುಗಳು ಇನ್ನಿಲ್ಲದಂತೆ ಬಾಧಿಸುತ್ತವೆ. ನಡೆಯುವ ದಾರಿ ಸುಗಮವಾಗಿದ್ದರೆ ಅದೆಷ್ಟು ಸೊಗಸಾಗಿರುತ್ತಿತ್ತು ಎಂದು ಸಾವಿರಾರು ಸಲ ಅಂದುಕೊಳ್ಳುತ್ತೇವೆ.
ತಂದೆ ತಾಯಿಗಳ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಕೊಂಚ ಧೈರ್ಯ ಬರುತ್ತದೆ. ತಿರುವುಗಳ ಅರಿವು ಮೂಡುತ್ತದೆ. ತೀರ ಸಣ್ಣ ಪುಟ್ಟ ಅಡೆತಡೆಗಳನ್ನು ಹೇಗೆ ಸುಲಭವಾಗಿ ನಿಭಾಯಿಸುವುದು ತಿಳಿಯುತ್ತದೆ. ಆದರೂ ಅದು ಬಹಳಷ್ಟು ದಿನ ನಡೆಯುವುದೇ ಇಲ್ಲ.
ಸ್ವಲ್ಪ ದೊಡ್ಡ ಅಡೆತಡೆಗಳು ಎದುರಾದರೆ ರೋಧಿಸುತ್ತೇನೆ. ಕೈ ಚೆಲ್ಲಿ ಕುಳಿತುಬಿಡುತ್ತೇನೆ. ಗುರಿ ತಲುಪಬೇಕೆನ್ನುವ ಮನೋಭಾವ ಮನದಲ್ಲಿ ತುಂಬಿದ್ದರೂ ನಡು ನಡುವೆ ತಡೆಯುವ ಅಡೆತಡೆಗಳು ಸೋಲಿಸುತ್ತವೆ. ಹಿಂಡಿ ಹಿಪ್ಪೆ ಮಾಡುತ್ತವೆ.
ಗುರಿಯೆಂಬ ರಸ್ತೆಯ ತಡೆಗಳನ್ನು ದಾಟಲಾಗದೇ ಸೋತು ಸುಣ್ಣವಾಗುತ್ತೇನೆ. ಹೆತ್ತವರು ನನ್ನ ವೈಫಲ್ಯ ಕಂಡು ಚಿಂತಿತರಾಗುತ್ತಾರೆ. ನಮ್ಮ ಮಗ/ಳು ಪ್ರಯತ್ನ ಮಾಡುತ್ತಾನೆ/ಳೆ ಆದರೆ ಅದೃಷ್ಟ ಸರಿ ಇಲ್ಲ ಅದ್ಯಾವಾಗ ಸರಿ ಆಗುತ್ತೋ ಗೊತ್ತಿಲ್ಲ ಎನ್ನುವ ಪಾಲಕರ ನುಡಿ ಕೇಳಿದಾಗಲಂತೂ ಎದೆಯಲ್ಲಿ ತಣ್ಣೀರು ಸುರುವಿದಂತಾಗುತ್ತದೆ. ಎಂಬುದು ಬಹುತೇಕ ಯುವ ಮನಸ್ಸುಗಳ ಸ್ವಗತ.
ಹೆಜ್ಜೆ ಹೆಜ್ಜೆಗೂ ಕಿರಿಕಿರಿಯನ್ನುಂಟು ಮಾಡುವ ಇಟ್ಟ ಗುರಿಯಿಂದ ಹಿಂದಕ್ಕೆ ತಳ್ಳುವ ಈ ಅಡೆತಡೆಗಳ ನೆರವಿನಿಂದಲೇ ಗೆಲುವು ಸಾಧಿಸುವ ಮಾರ್ಗವಿದ್ದರೆ ಎಷ್ಟು ಒಳ್ಳೆಯದೆಂದು ಅಂದುಕೊಳ್ಳುವವರಿಗೆಲ್ಲ ಇಲ್ಲಿವೆ ಕೆಲ ಉಪಯುಕ್ತ ಸಲಹೆಗಳು.
ನಿರೀಕ್ಷಿಸದೇ ಇರುವ ಸವಾಲುಗಳು
‘ಗುರಿಯತ್ತ ಅಡಿ ಇಡುವಾಗ ನಾವು ನಿರೀಕ್ಷಿಸದೇ ಇರುವ ಸವಾಲುಗಳು. ದುತ್ತೆಂದು ನಮ್ಮ ಕಣ್ಮುಂದೆ ನಿಲ್ಲುವ ಹಂತಗಳೇ ಅಡೆತಡೆಗಳು.’ಇವುಗಳನ್ನು ವೈಯಕ್ತಿಕ, ಪರಿಸರ ಮತ್ತು ಸಾಮಾಜಿಕ ಅಡೆತಡೆಗಳೆಂದು ವರ್ಗೀಕರಿಸಬಹುದು.ವೈಯಕ್ತಿಕ ಅಡೆತಡೆಗಳು ನಾವೇ ಸೃಷ್ಟಿಸಿಕೊಳ್ಳುವಂಥವು.ನಮ್ಮ ನಡವಳಿಕೆ ಮತ್ತು ಮನಸ್ಥಿತಿಗೆ ಸಂಬಂಧಿಸಿವೆ.
ಭಯ ಮತ್ತು ಅಪನಂಬಿಕೆ ವಸ್ತು ನಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆಯುತ್ತದೆ. ಶಿಸ್ತಿನ ಕೊರತೆ, ಜ್ಞಾನ ಮತ್ತು ಕೌಶಲ್ಯದ ಅಭಾವ, ವಿಳಂಬ ಪ್ರವೃತ್ತಿ ನಿರಾಶಾವಾದಿ ಆಲೋಚನೆಗಳು ನಿಮ್ಮಲ್ಲಿರುವುದೇ ವೈಯಕ್ತಿಕ ಅಡೆತಡೆಗಳಿಗೆ ಕಾರಣ.
ಶಕ್ತಿ ಸಾಮಥ್ರ್ಯ ಅರ್ಥೈಸಿಕೊಂಡು ಭಯದಿಂದ ಮುಕ್ತವಾದರೆ ವೈಯಕ್ತಿಕ ಅಡೆತಡೆಗಳನ್ನು ದೂರವಿಡಲು ಸಾಧ್ಯ. ಹೆಚ್ಚಿನ ಸ್ಪಷ್ಟತೆಯಿಂದ ಗುರಿಗೆ ಸೂಕ್ತ ಪರಿಸರವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮತ್ತು ನಿಮ್ಮನ್ನು ಅಧೈರ್ಯಗೊಳಿಸುವ, ಅಸಮರ್ಥರಾದ ಜನರಿಂದ ದೂರವಿದ್ದು, ಜ್ಞಾನಿಗಳ ಬಲವಾದ ಬಂಧ ಹೊಂದಿದರೆ ಪರಿಸರ ಹಾಗೂ ಸಾಮಾಜಿಕ ಅಡೆತಡೆಗಳನ್ನು ನಿಭಾಯಿಸುವುದು ಸುಲಭ.
ಭಾವನಾತ್ಮಕವಾಗಿ ಬಲಗೊಳ್ಳಿ ಮಗು ನಡೆಯಲು ಕಲಿಯುವಾಗ ಅದೆಷ್ಟೋ ಸಲ ಬೀಳುತ್ತದೆ ಮತ್ತೆ ಏಳುತ್ತದೆ. ಬೀಳುತ್ತೇನೆ ಎಂಬ ಭಯದಲ್ಲಿ ನಡೆಯುವುದನ್ನು ಬಿಡುವುದಿಲ್ಲ.
ಸೈಕಲ್ ಕಲಿಯುವಾಗಲೂ ಎಷ್ಟು ಸಾರಿ ಬಿದ್ದು ಮೊಣಕಾಲು ಕೆಂಪಾಗಿಲ್ಲ ಹೇಳಿ? ಆದರೂ ಗಾಯದ ಬಗೆಗೆ ಚಂತಿಸದೇ ಸೈಕಲ್ ಕಲಿತರೆ ಸೈ ಎಂದು ಕಲಿಯಲಿಲ್ಲವೇ? ಬಿದ್ದಾಗೊಮ್ಮೆ ಎದ್ದು ನಿಂತ, ತಪ್ಪು ತಿದ್ದಿಕೊಂಡು ಮುನ್ನಡೆದ ಸಂದಭ್ರ್ಗಗಳನ್ನು ಮೆಲಕು ಹಾಕಿ.
ಆಗ ಭಾವನಾತ್ಮಕವಾಗಿ ಬಲಗೊಳ್ಳಲು ಸಾಧ್ಯ. ‘ಸೋಲದೇ ಗೆಲುವುದು ಅಸಾಧ್ಯ.’ಎಂಬುದು ರಷ್ಯನ್ ಗಾದೆ. ಪ್ರಗತಿಯನ್ನು ಹಿಮ್ಮೆಟ್ಟಿಸುವ ಅಡೆತಡೆಗಳ ಕುರಿತು ದೀರ್ಘವಾಗಿ ಆಳವಾಗಿ ಚಿಂತಿಸಿ ಮಂಥಿಸಿ ಬುದ್ಧಿಯನ್ನು ಜಾಗೃತಗೊಳಿಸುವುದು ಅಗತ್ಯ.
ಬಹುತೇಕ ಮಹನೀಯರು ಅನಿರೀಕ್ಷಿತ ಅಡೆತಡೆಗಳಿಂದಲೇ ಮಹಾ ಔನತ್ಯವನ್ನು ಸಾಧಿಸಿದ್ದಾರೆ. ಸಾರಿಗೆ ಕ್ಷೇತ್ರದಲ್ಲಿ ಸಂಚಲನ ಸೃÀಷ್ಟಿಸಿದ ಫೋರ್ಡ್ ಕಾರಿನ ಉದ್ಯಮಿ ಹೆನ್ರಿ ಫೋರ್ಡ್ ಅಮೇರಿಕದ ಸುಪ್ರಸಿದ್ಧ ಅಧ್ಯಕ್ಷ ಅಬ್ರಾಹಂ ಲಿಂಕನ್ ನಡೆದು ಬಂದ ದಾರಿ ಮುಳ್ಳುಗಳಿಂದಲೇ ಕೂಡಿತ್ತು.
ಅಡೆತಡೆಗಳಿಗೆ ಪರಿಹಾರವಿಲ್ಲವೆಂದು ಕೈ ಕಟ್ಟಿ ಕುಳಿತುಕೊಳ್ಳದೇ, ಆತ್ಮವಿಶ್ವಾಸದಿಂದ ಗೆಲುವಿನ ನಗೆ ಬೀರಿದರು.
ಬದಲಾಗಲಿ ದೃಷ್ಟಿಕೋನ ಬದುಕು ನಿಂತಿರುವುದೇ ನಮ್ಮ ದೃಷ್ಟಿಕೋನದ ಮೇಲೆ.. ಸಂದಿಗ್ಧ ಪರಿಸ್ಥಿತಿಗೆ ಸ್ಪಂದಿಸುವ ರೀತಿ ಗೆಲುವನ್ನು ನಿರ್ಧರಿಸುತ್ತದೆ. ಕಾರ್ಯ ಯೋಜನೆಗಳ ಅನುಷ್ಟಾನದ ಪ್ರತಿ ಅತ್ಯಾಸಕ್ತಿ ಮುಖ್ಯ.
ಸಾಧಕರೆಲ್ಲ ಪ್ರತಿಕೂಲತೆಗಳ ಪ್ರತಿ ತಮ್ಮ ದೃಷ್ಟಿಯನ್ನು ಸಕಾರಾತ್ಮಕವಾಗಿ ಬದಲಿಸಿಕೊಂಡವರೆ! ಅಡೆತಡೆಗಳನ್ನು ವಿನಯವಾಗಿ ಸ್ವೀಕರಿಸಿ ಅದರ ವಿರುದ್ಧ ಜಯದ ನಗೆ ಬೀರಿದವರು ಎಂಬುದನ್ನು ಮರೆಯುವಂತಿಲ್ಲ. ಇತಿ ಮಿತಿಗಳನ್ನು ಮೀರಿ ಬಹು ದೊಡ್ಡದಾಗಿ ಬೆಳೆದ ಅಬ್ದುಲ್ ಕಲಾಂ ಸರ್ ಎಮ್ ವಿಶ್ವೇಶ್ವರಯ್ಯನಂಥವರ ಜೀವನ ದೃಷ್ಟಿಯನ್ನು ಅನುಸರಿಸಬೇಕು. ಕೆಳಕ್ಕೆ ಎಸೆದ ಚೆಂಡು ಪುಟೆದೇಳುವಂತೆ ಏಳಬೇಕು.
ಅಡೆತಡೆಗಳಿಂದ ನಾಶವಾಗುತ್ತಿದ್ದೇವೆ ಎಂದು ಕುಗ್ಗದೇ ಅವುಗಳ ಆಸರೆಯಿಂದಲೇ ಬೆಳೆಯುವ ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಉದ್ಯಮಿ ಧೀರೂಬಾಯಿ ಅಂಬಾನಿ ಹೆಸರು ಕೇಳದವರು ಕಡಿಮೆ. ಅವರು ಬಡತನದ ಅಡೆತಡೆಯನ್ನು ಏಣಿಯಾಗಿಸಿಕೊಂಡೇ ಶ್ರೀಮಂತಿಕೆಯ ಅರಮನೆ ಕಟ್ಟಿದವರು. ‘ಯೋಚಿಸ ಬಲ್ಲವರಿಗೆ ಲೋಕವು ಒಂದು ಸುಖಾಂತ. ಅನುಭವಿಸಬಲ್ಲವರಿಗೆ ಅದೇ ಒಂದು ದುಃಖಾಂತ.’ ಎಂದಿದ್ದಾನೆ ಹೋರಸ್ ವಾಲ್ಟೋಲ್.
ಕುಶಾಗ್ರಮತಿ ಅಲ್ಲ ಎಂದು ಗೆಳೆಯರಿಂದ ಶಿಕ್ಷಕರಿಂದ ತಿರಸ್ಕರಿಸಲ್ಪಟ್ಟ ಐನ್ ಸ್ಟೀನ್ ಮುಂದೊಂದು ದಿನ ಜಗತ್ತಿನ ಮೇದಾವಿ ವಿಜ್ಞಾನಿ ಆಗುತ್ತಾನೆಂದು ಯಾರೂ ಊಹಿಸಿರಲಿಲ್ಲ. ದೃಷ್ಟಿಕೋನವು ಅಗಾಧ ಶಕ್ತಿ ನೀಡಬಲ್ಲದು. ಗೆಲುವಿನ ದಡಕ್ಕೆ ತಂದು ನಿಲ್ಲಿಸಬಲ್ಲದು.
ಅಂತಃಸ್ಸತ್ವವಿರಲಿ ಈಜಿಪ್ತಿನ ದೊರೆಗಳ ಸಮಾಧಿಯಲ್ಲಿರಿಸಿದ್ದ ಐದು ಸಾವಿರ ಹಿಂದಿನ ಗೊಧಿ ಕಾಳಿನ ಬಗ್ಗೆ ಸಸ್ಯ ಶಾಸ್ತ್ರಜ್ಞರಿಗೆ ಆಸಕ್ತಿ ಮೂಡಿತು.
ಅದು ಮೊಳೆಯುವುದೋ ಇಲ್ಲವೋ ನೋಡಬೇಕೆನ್ನುವ ಜಿಜ್ಞಾಸೆ ಅವರಲ್ಲಿ ಕಾಣಿಸಿಕೊಂಡಿತು. ಗೋಧಿ ಕಾಳನ್ನು ಭೂಮಿಯಲ್ಲಿ ಹಾಕಿ ನೀರೆರೆದರು. ಅಚ್ಚರಿಯಂಬಂತೆ ಕಾಳು ಮೊಳೆಯಿತು.
ಕಲ್ಲಿನ ಗೋಡೆಯಲ್ಲಿ ಅರಳಿದ ಹೂಗಳನ್ನು ನಾವು ಕಾಣುತ್ತೇವೆ. ಇವೆಲ್ಲ ಅಂತಃಸ್ಸತ್ವದ ಫಲವೇ ಹೊರತು ಮತ್ತೇನಲ್ಲ. ‘ಓಡುವವರಿಗೆ ಒಂದೇ ದಾರಿ ಬೆನ್ನು ಹತ್ತಿದವರಿಗೆ ನೂರು ದಾರಿ.’ ಎಂಬ ರಷ್ಯನ್ ಗಾದೆಯಂತೆ ಫಲಾಯನವಾದಿಗಳಿಗೆ ಒಂದು ದಾರಿಯಾದರೆ ಅಡೆತಡೆಗಳಾಚೆ ಬರಬೇಕೆನ್ನುವವರಿಗೆ ನೂರಾರು ದಾರಿ. ತೊಂದರೆಗಳೆಂಬವು ನಮ್ಮ ಪ್ರಗತಿಯನ್ನು ಕುಂಠಿತಗೊಳಿಸಲು ಬರುವುದಿಲ್ಲ. ನಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ಹೊಳಪು ನೀಡಲು ಬರುತ್ತವೆ.
ಅಂತಃಸ್ಸತ್ವವಿರುವ ವ್ಯಕ್ತಿಯನ್ನು ಜಗತ್ತಿನ ಯಾವ ಶಕ್ತಿಯೂ ಸೋಲಿಸಲಾರದು. ಬೆಳೆಯಬೇಕೆನ್ನುವವ ಎಲ್ಲಿದ್ದರೂ ಎಷ್ಟೇ ಕಷ್ಟಗಳಿದ್ದರೂ ಬೆಳೆಯುತ್ತಾನೆ. ಆ ಜಿಗಟುಗಾರಿಕೆಯನ್ನು ಅಂತಃಸ್ಸತ್ವ ಕಲಿಸುತ್ತದೆ. ಆದ್ದರಿಂದ ಅಂತಃಸ್ಸತ್ವ ಹೆಚ್ಚಿಸಿಕೊಳ್ಳಿ.
ನಾವು ಪ್ರತಿಯೊಂದನ್ನು ಹೇಗೆ ನೋಡುತ್ತೇವೆ ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆಯೇ ಎಲ್ಲವೂ ನಿಂತಿರುತ್ತದೆ ಅಡೆತಡೆಗಳೆಂಬ ಗುರಿಯ ದಾರಿಯಲ್ಲಿ ಎದುರಾಗುವ ಅಡೆತಡೆಗಳಿಗೆ ಅಂಜಿ ಕುಳಿತರೆ ನಮ್ಮೊಳಗಿರುವ ಸಾಮಥ್ರ್ಯ ಸತ್ತು ಹೋಗುತ್ತದೆ. ಜೀವನವೂ ನರಕಮಯವಾಗುತ್ತದೆ..
ಅಡೆಡೆಗಳ ಸೆಲೆಯಿಂದಲೇ ಗೆಲುವು ಹಾದು ಬರೋದು ಅಡೆತಡೆಗಳನ್ನು ಭೇದಿಸಿ ಅವುಗಳ ಮೇಲೆರಗಲು ಶಕ್ತರಾದರೆ, ಜೀವನವೆಂಬ ಮೈದಾನದಲ್ಲಿ ಏಕಾಂಗಿಯಾಗಿ ನಿಂತಾಗಲೂ ಸೋಲಿರುವುದಿಲ್ಲ.
ಬದುಕಿನ ಎಂಥ ವಿಚಿತ್ರವಾದ ವಿಭಿನ್ನವಾದ ಘಟ್ಟಗಳಲ್ಲೂ ಉತ್ಸಾಹದಿಂದ ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಅಡೆತಡೆಗಳು ಮಗ್ಗಲು ಮುಳ್ಳುಗಳಾಗದೇ ಗೆಲುವು ತರುವ ಮೈಲಿಗಲ್ಲುಗಳಾಗಿ ಬದಲಾಗುತ್ತವೆ.
ಅಡೆತಡೆಗಳೆಂಬ ವಟರುಗಪ್ಪೆಗಳ ಜೋರು ಶಬ್ದಕ್ಕೆ ಆಚಿಂದೀಚೆಗೆ ಈಚಿಂದಾಚೆಗೆ ಜಿಗಿಯುತ್ತ ಬದುಕು ನಿರರ್ಥಗೊಳಿಸುವುದನ್ನು ಬಿಡೋಣ. ಅಡೆತಡೆಗಳನ್ನೇ ಅವಕಾಶಗಳನ್ನಾಗಿಸಿಕೊಳ್ಳೋಣ. ಜಯದ ಬಾಗಿಲು ತೆರೆಯೋಣ.