ಚಾಲಕನ ನಿರ್ಲಕ್ಷದಿಂದ ಮೂಕ ಪ್ರಾಣಿಗಳ ಸಾವುಃ ಆಕ್ರೋಶ
ಟ್ರ್ಯಾಕ್ಟರ್ ಡಿಕ್ಕಿ ಜಾನುವಾರುಗಳ ಸಾವು-ನೋವು
ಶಹಾಪುರಃ ಸಂಜೆ ವೇಳೆ ಮನೆ ಕಡೆ ಹೊರಟ್ಟಿದ್ದ ಜಾನುವಾರುಗಳ ಮೇಲೆ ಕುಡಿದ ಅಮಲಿನಲ್ಲಿ ಟ್ರ್ಯಾಕ್ಟರ್ ಚಾಲಕನೋರ್ವ ಅವುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ಕರು ಮತ್ತು ಒಂದು ಎಮ್ಮೆ ಸಾವನ್ನಪ್ಪಿದ್ದು, ಇನ್ನೊಂದು ಹಸು ಹಾಗೂ ಎಮ್ಮೆ ಚಿಂತಾಜನಕ ಸ್ಥಿತಿಯಲ್ಲಿ ಒದ್ದಾಡುತ್ತಿರುವ ಘಟನೆ ಸಮೀಪದ ಯಾದಗಿರಿ ಮಾರ್ಗದಲ್ಲಿ ಬೇವಿನಹಳ್ಳಿ ಸಮೀಪ ಹೆದ್ದಾರಿ ಮೇಲೆ ನಡೆದಿದೆ.
ಜಾನುವಾರುಗಳು ಮನೆಗೆ ಹೊಡೆದುಕೊಂಡು ಹೊರಟಿದ್ದಾಗ ಎದುರಿಗೆ ಅಡ್ಡದಿಡ್ಡಿಯಾಗಿ ಬಂದ ಟ್ರ್ಯಾಕ್ಟರ್ ಮೂಕ ಪ್ರಾಣಿಗಳ ಮೇಲೆ ಹಾಯಿಸಿದ್ದಾನೆ ನಾನು ದೂರ ಓಡಿದೆ ಎಂದು ಜಾನುವಾರುಗಳ ಜೊತೆಯಲ್ಲೇ ಇದ್ದ ಅವುಗಳನ್ನು ಕಾಯುವಾತ ಬಸಪ್ಪ ಎಂಬಾತ ಕಣ್ಣೀರಿಟ್ಟಿದ್ದಾನೆ. ಕಣ್ಣೆದುರಲ್ಲಿ ಅವುಗಳ ದುರ್ಮಣ ಕಂಡು ಆತ ದುಃಖಿಸಿದ್ದಾನೆ.
ಸಾರ್ವಜನಿಕರು ಸ್ಥಳಕೆ ದೌಡಾಯಿಸಿ ತೀವ್ರಗಾಯಗೊಂಡ ಹಸು, ಎಮ್ಮೆಗೆ ನೀರು ಕುಡಿಸಿದರು ಉಳಿಯುವ ಭರವಸೆ ಇಲ್ಲ ಎಂದು ನಾಗರಿಕರು ತಿಳಿಸಿದ್ದಾರೆ. ಹಳಿಸಗರ ನಿವಾಸಿ ರೈತನೋರ್ವನಿಗೆ ಜಾನುವಾರುಳು ಸೇರಿದ್ದಿವೆ ಎಂದು ಬಸಪ್ಪ ತಿಳಿಸಿದ್ದಾನೆ. ಚಾಲಕನ ನಿರ್ಲಕ್ಷದಿಂದ ಮೂಕ ಪ್ರಾಣಿಗಳ ಸಾವಾಗಿದ್ದು, ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಕ ಪ್ರಾಣಿಗಳ ರೋಧನೆ ನೋಡಿ ಜನರು ಮರಗಿದರು. ಸಾಕಷ್ಟು ಜನರು ನೀರು ತಂದು ಅವುಗಳಿಗೆ ಕುಡಿಸಿ ಉಳಿಸುವ ಪ್ರಯತ್ನ ಮಾಡುತ್ತಿರುವದು ಜೀವ ಹಿಂಡುವಂತಿತ್ತು. ಅತ್ತ ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿ ಟ್ರ್ಯಾಕ್ಟರ್ ನಡೆಸಿಕೊಂಡು ಮೂಕ ಪ್ರಾಣಿಗಳ ಜೀವ ಹಾನಿಗೆ ಕಾರಣನಾದವ ಟ್ರ್ಯಾಕ್ಟರ್ ಸಮೇತ ಪರಾರಿಯಾಗಿದ್ದಾನೆ. ಆತನನ್ನು ಹಿಡಿದು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಜನರು ಆಗ್ರಹಿಸಿದ್ದಾರೆ.