HIT & RUN : ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು!
ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸಮೀಪ ಬೈಕಿಗೆ ಡಿಕ್ಕಿ ಹೊಡೆದು ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಮೃತರನ್ನು ಕೋಡ್ಲಾ ಗ್ರಾಮದ ನಿವಾಸಿಗಳಾದ ಮಹಾದೇವ ಸ್ವಾಮಿ (35), ಸಿದ್ದಪ್ಪ ಭಜಂತ್ರಿ (30) ಎಂದು ಗುರುತಿಸಲಾಗಿದೆ. ಮೃತರ ಆಕ್ರಂದನ ಮುಗಿಲುಮುಟ್ಟಿದೆ. ಹಿಟ್ ಅಂಡ್ ರನ್ ಮಾಡಿದ ಚಾಲಕನ ವಿರುದ್ಧ ಮೃತನ ಸಂಬಂಧಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಸೇಡಂ ಪಟ್ಟಣದಿಂದ ಗ್ರಾಮಕ್ಕೆ ಮರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಅಪಘಾತದ ಬಳಿಕ ವಾಹನ ನಿಲ್ಲಿಸಿ ಗಾಯಾಳುಗಳ ಸ್ಥಿತಿಗತಿ ವಿಚಾರಿಸಬೇಕಿದ್ದ ವಾಹನ ಚಾಲಕ ಮಾನವೀಯತೆ ಮರೆತು ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣಕ್ಕೆ ಆಸ್ಪತ್ರೆಗೆ ಸಾಗಿಸಿದ್ದರೆ ಜೀವ ಉಳಿಯಬಹುದಾಗಿತ್ತು. ಆದರೆ, ಅಪರಿಚಿತ ವಾಹನ ಚಾಲಕ ಡಿಕ್ಕಿ ಬಳಿಕ ಎಸ್ಕೇಪ್ ಆಗಿದ್ದಾನೆ. ಕೂಡಲೇ ಅಪಘಾತ ಮಾಡಿದ ವಾಹನವನ್ನು ಪತ್ತೆ ಹಚ್ಚಿ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥ ಹಿಟ್ ಅಂಡ್ ರನ್ ಘಟನೆಗಳಿಗೆ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.