ಪೌರತ್ವ ಕಾಯ್ದೆ ವಿರೋಧಿಸಿ ವಕೀಲರಿಂದ ಪ್ರತಿಭಟನೆ
ಅಖಿಲ ಭಾರತ ವಕೀಲರ ಒಕ್ಕೂಟದಿಂದ ಪ್ರತಿಭಟನೆ
ಶಹಾಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ವಿರೋಧಿಸಿ ಶುಕ್ರವಾರ ಇಲ್ಲಿನ ಅಖಿಲ ಭಾರತ ವಕೀಲರ ಒಕ್ಕೂಟ ತಾಲ್ಲೂಕು ವಕೀಲರ ಸಮಿತಿ ಸದಸ್ಯರು ಬೈಕ್ ರ್ಯಾಲಿ ಮೂಲಕ ತಹಶೀಲ್ ಕಚೇರಿಗೆವರೆಗೆ ತೆರಳಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಒಕ್ಕೂಟದ ತಾಲ್ಲೂಕು ವಕೀಲರ ಸಮಿತಿ ಸಂಚಾಲಕ ಹಿರಿಯ ವಕೀಲ ಆರ್.ಚನ್ನಬಸವ ವನದುರ್ಗ, ಕೇಂದ್ರ ಸರ್ಕಾರ ಜಾತ್ಯತೀತ ಆಶಯದ ಸಂವಿಧಾನದ ಅನುಸಾರವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಆದಾಗ್ಯು ಸಹ ಅವೆಲ್ಲವನ್ನು ಲೆಕ್ಕಿಸದೆ ಜನ ವಿರೋಧಿ ಕಾಯ್ದೆ ಹಾಗೂ ನಿಯಮಗಳನ್ನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರತ್ವದ ಮಾಹಿತಿಯನ್ನು ಕಲೆ ಹಾಕಲು ಸರ್ಕಾರ ನಿರ್ಧರಿಸಿರುವುದು ಸಂವಿಧಾನ ಬಾಹಿರವಾಗಿದೆ. ದೇಶದ ಕೋಟ್ಯಂತರ ಜನತೆ ಅನಕ್ಷರಸ್ಥರಾಗಿದ್ದು ಸರ್ಕಾರ ಕೇಳುವ ದಾಖಲಾತಿಗಳನ್ನು ನೀಡಲು ಕಷ್ಟವಾಗುತ್ತದೆ. ಹೀಗಾಗಿ ಪೌರತ್ವದಿಂದ ವಂಚಿರಾಗುವ ಸಾಧ್ಯತೆಗಳಿವೆ. ಇದರಿಂದ ದೇಶದ ಆರ್ಥಿಕತೆಯ ಮೇಲೆ ದೊಡ್ಡ ಹೊರೆ ಬೀಳುವ ಸಾಧ್ಯತೆ ಎಂದರು.
ವಕೀಲ ಸಾಲೋಮನ್ ಆಲ್ಫ್ರೈಡ್ ಮಾತನಾಡಿ, ಜನ ವಿರೋಧಿ ಹಾಗೂ ಮತೀಯ ಭಾವನೆಗಳನ್ನು ಉಂಟು ಮಾಡಿ ಕೋಮುವಾದ ಭಾವನೆಗಳನ್ನು ಬಿತ್ತುವ ಕಾರ್ಯವನ್ನು ಪ್ರಜ್ಞಾವಂತ ಹಾಗೂ ಪ್ರಗತಿಪರ ವಕೀಲರು ತೀವ್ರವಾಗಿ ವಿರೋಧಿಸಬೇಕಾಗಿದೆ.
ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯನ್ನು ವಕೀಲರು ಬೀದಿಗಿಳಿದು ಜಾಗೃತಿಯ ಮೂಲಕ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.
ಕೇಂದ್ರ ಸರ್ಕಾರ ಜನ ವಿರೋಧಿ ನಿಯಮ ಹಾಗೂ ಕಾಯ್ದೆಯನ್ನು ಜಾರಿಗೆ ತರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸಂವಿಧಾನದ ರಕ್ಷಣೆ ಹಾಗೂ ಹೊಣೆಗಾರಿಕೆ ದೇಶದ ಪ್ರತಿ ನಾಗರಿಕರ ಕರ್ತವ್ಯವಾಗಿದೆ. ಸಂವಿಧಾನವೇ ನಮಗೆ ಧರ್ಮಗ್ರಂಥವಾಗಿದೆ. ಅದರ ಆಶಯದಂತೆ ನಾವೆಲ್ಲರೂ ಸಾಗೋಣವೆಂದು ಪ್ರತಿಭಟನಾನಿರತ ಸದಸ್ಯರು ಆಗ್ರಹಿಸಿದರು.
ವಕೀಲರಾದ ಸಯ್ಯದ ಇಬ್ರಾಹಿಂಸಾಬ್ ಜಮಾದಾರ, ಸಯ್ಯದ ಯೂಸೂಫ್ ಸಿದ್ದಕಿ, ನಿಂಗಣ್ಣ ಬೇವಿನಹಳ್ಳಿ, ನಿಂಗಣ್ಣ ಸಗರ, ಮಲ್ಲಪ್ಪ ಪೂಜಾರಿ, ಭೀಮಣ್ಣಗೌಡ ಪಾಟೀಲ್, ಸಂತೋಷ ಸತ್ಯಂಪೇಟೆ, ದೇವರಾಜ ಚೆಟ್ಟಿ, ಶರಬಣ್ಣ ರಸ್ತಾಪುರ, ಎಚ್.ಆರ್.ಪಾಟೀಲ್, ಮಲ್ಕಪ್ಪ ಕನ್ಯಾಕೊಳ್ಳೂರ, ಜೈಲಾಲ್ ತೋಟದಮನೆ, ಹಣಮಂತರಾಯ ಬೇಟೆಗಾರ, ಅಮರೇಶ ನಾಯಕ, ಮಲ್ಲಿಕಾರ್ಜುನ ಹಾಲಬಾವಿ, ಸತ್ಯಮ್ಮ ಹೊಸ್ಮನಿ, ನಾಜಿಯಾ ಬೇಗಂ, ಬಲ್ಕಿಶ್ ಫಾತಿಮಾ, ಪರ್ವಿನ ಜಮಖಂಡಿ, ಅಯ್ಯಪ್ಪಸ್ವಾಮಿ ವನದುರ್ಗ, ಶಿವಶರಣ ಹೊತಪೇಟ, ಮಲ್ಲಿಕಾರ್ಜುನ ಬುಕ್ಕಲ, ದೊಡ್ಡೇಶ ದರ್ಶನಾಪುರ ಹಾಗೂ ಪ್ರಗತಿಪರ ಚಿಂತಕರಾದ ನೀಲಕಂಠ ಬಡಿಗೇರ, ಸಯ್ಯದ ಖಾಲಿದ ಹುಸೇನಿ, ಸೋಫಿಸಾಬ್ ಕನ್ಯಾಕೊಳ್ಳೂರ, ಮಲ್ಲಿಕಾರ್ಜುನ ಕರಿಗುಡ್ಡ ಇದ್ದರು.