ಮದ್ಯ ಪ್ರಿಯರ ಗಮನಕ್ಕೆ: ರಾಜ್ಯದಲ್ಲಿ 5 ದಿನ ಬಾರ್ ಬಂದ್..!
(Liquor ban) ಲೋಕಸಭಾ ಚುನಾವಣೆಯ ಮತ ಎಣಿಕೆಯಿಂದಾಗಿ ಜೂನ್ ಮೊದಲ ವಾರ ನಗರದಲ್ಲಿ ಒಂದು ದಿನ ಹೊರತುಪಡಿಸಿದರೆ ಬರೋಬ್ಬರಿ ಐದು ದಿನ ಮದ್ಯದಂಗಡಿಗಳು ಬಂದ್ ಆಗಲಿವೆ.
ಜೂ.3ರಂದು ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೂ.1ರ ಸಂಜೆ 4 ಗಂಟೆಯಿಂದ ಜೂ.3ರ ಸಂಜೆ 4 ಗಂಟೆ ವರೆಗೂ ಮದ್ಯ ನಿಷೇಧಿಸಲಾಗಿದೆ. ಜೂ.4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯು ವುದರಿಂದ ಅಂದು ಸಹ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ನಿರ್ಬಂಧವಿದೆ. ವೈನ್ ಸ್ಟೋರ್, ಬಾರ್ ಆಯಂಡ್ ರೆಸ್ಟೋರೆಂಟ್‌ನವರು ಸೇರಿದಂತೆ ಯಾರೂ ಮದ್ಯ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.
ಜೂ.5ರಂದು ಎಂದಿನಂತೆ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ ಪುನಃ ಜೂ.6ರಂದು ನಗರದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯುವುದರಿಂದ ಅಂದೂ ಸಹ ನಗರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ.