ಜೆಡಿಎಸ್ನಿಂದ ಇನ್ನೋರ್ವ ‘ಶಿರವಾಳ’ ಸ್ಪರ್ಧೆಗೆ ಸಿದ್ಧತೆ.! ಅಹಿಂದ ಮಂದಿಯ ಬೆಂಬಲ
ಶಹಾಪುರ ಮತಕ್ಷೇತ್ರಃ ಅಹಿಂದ ಮುಖಂಡರ ಒಗ್ಗಟ್ಟು, ಜೆಡಿಎಸ್ ಟಿಕೇಟ್ ಗೆ ಪೈಪೋಟಿ
ಮಲ್ಲಿಕಾರ್ಜುನ ಮುದನೂರ
ಯಾದಗಿರಿಃ ಪ್ರಸಕ್ತ ವರ್ಷ ಬರುವ 2018 ರ ಚುನಾವಣೆಯಲ್ಲಿ ಈ ಬಾರಿ ಜಿಲ್ಲೆಯ ಶಹಾಪುರ ವಿಧಾನಸಭೆ ಮತಕ್ಷೇತ್ರ ರಂಗೇರುವ ಸಾಧ್ಯತೆ ದಟ್ಟವಾಗಿ ಹರಡಿದೆ. ಈ ಮತಕ್ಷೇತ್ರ ಶಿರವಾಳ ಮತ್ತು ದರ್ಶನಾಪುರ ಕುಟುಂಬದವರ ಹಿಡಿತದಲ್ಲಿಯೇ ಇಲ್ಲಿವರೆಗೂ ಬಂದಿದೆ. ಕಳೆದ 25-30 ವರ್ಷದಿಂದ ಇವೆರಡು ಮನೆತನದವರೇ ಇಲ್ಲಿ ರಾಜಕೀಯ ಪ್ರಾಬಲ್ಯ ಮೆರೆದಿದ್ದಾರೆ. ಇವರ ಮಧ್ಯೆ ಬೇರೆಯವರು ಸ್ಪರ್ಧಿಗಿಳಿದು ಸೋಲುಂಡಿದ್ದಾರೆ.
ಡಾ.ಮಲ್ಲಣ್ಣಗೌಡ ಉಕ್ಕಿನಾಳ ಮತ್ತು ಶರಣಪ್ಪ ಸಲಾದಪುರ ಸ್ಪರ್ಧಿಸಿ ಸೋಲುಂಡಿದ್ದಾರೆ. ಆದರೆ ಈಗ ಇದೇ ಶಿರವಾಳ ಗ್ರಾಮದ ನಿವಾಸಿಯಾದ ಮತ್ತು ಪ್ರಸ್ತುತ ಶಾಸಕ ಗುರು ಪಾಟೀಲರ ಆತ್ಮೀಯರು ಆಗಿದ್ದ ಇಬ್ರಾಹಿಂಸಾಬ ಶಿರವಾಳ ಅವರು ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದು. ಶಹಾಪುರ ಮತಕ್ಷೇತ್ರದಿಂದ ಸ್ಪರ್ಧಿಸಲು ಸರ್ವ ರೀತಿಯ ತಯ್ಯಾರಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ಅಮೀನರಡ್ಡಿ ಯಾಳಗಿ ಕಾಳಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಸಂಘಟನಾತ್ಮಕವಾಗಿ ಚುರುಕು ಕಾರ್ಯವನ್ನು ಕೈಗೊಂಡಿದ್ದಾರೆ. ಕಳೆದ 2 ತಿಂಗಳ ಹಿಂದೆ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಕ್ಷೇತ್ರದಾದ್ಯಂತ ಜೆಡಿಎಸ್ ಕಿಚ್ಚು ಹೊತ್ತಿಸಿದ್ದರು, ಮಾಜಿ ಪ್ರಧಾನಿ ದೇವೆಗೌಡರು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಾದವು ಮಾಡಿದ್ದರು.
ಆದರೆ ಈಗ ಜೆಡಿಎಸ್ನಲ್ಲಿ ತಿರುವು ಪಡೆಯವು ಸಾಧ್ಯತೆಗಳು ಗೋಚರಿಸುತ್ತಿವೆ. ಅಮೀನರಡ್ಡಿ ಯಾಳಗಿ ಮತು ಇಬ್ರಾಹಿಂಸಾಬ ಶಿರವಾಳ ನಡುವೆ ಜೆಡಿಎಸ್ ಟಿಕೇಟ್ಗಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಇಬ್ರಾಹಿಂಸಾಬ ಹಿಂದೆ ಅಹಿಂದ ಮುಖಂಡರ ದಂಡು ಕೆಲಸ ಮಾಡಲಿದೆ. ಕುಮಾರಸ್ವಾಮಿಯನ್ನು ಭೇಟಿಯಾಗಿ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಅಮೀನರಡ್ಡಿ ಯಾಳಗಿ ಅವರ ಹಿಂದೆ ನುರಿತ ಹಿರಿಯ ರಾಜPಕೀಯ ಮುಖಂಡರ ಕೊರತೆ ಕಾಣುತ್ತಿದೆ ಎಂಬ ಅಂಶವನ್ನು ವರಿಷ್ಟರಿಗೆ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ.
ಇಬ್ರಾಹಿಂಸಾಬ ಅವರ ಪರ ಹಿರಿಯ ಅಹಿಂದ ಮುಖಂಡರು ನೇರವಾಗಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಇಬ್ರಾಹಿಂಸಾಬ ಶಿರವಾಳ ಅವರಿಗೆ ಟಿಕೇಟ್ ನೀಡಿದ್ದಲ್ಲಿ ನಾವೆಲ್ಲ ಒಂದಾಗಿ ಕೆಲಸ ಮಾಡಲಾಗುವುದು ಎಂದು ಮಾತು ಕೊಟ್ಟು ಬಂದಿದ್ದಾರೆ ಎನ್ನಲಾಗಿದೆ.
ಅಹಿಂದ ಮುಖಂಡರಲ್ಲಿ ಬಹುತೇಕರು ಕಾಂಗ್ರೆಸ್ ಮುಖಂಡರಿದ್ದು, ಅವರೆಲ್ಲ ಇಬ್ರಾಹಿಂಸಾಬ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಬ್ರಾಹಿಂಸಾಬ ಶಿರವಾಳ ಯಾರೀತ..?
ಇಬ್ರಾಹಿಂಸಾಬ ಶಿರವಾಳ ನಿವೃತ್ತ ಶಿಕ್ಷಕ ಮಹಿಬೂಬಅಲಿ ಶಿರವಾಳ ಅವರ ಹಿರಿಯ ಸುಪತ್ರ. ಅಲ್ಲದೆ ದಿ.ಶಿವಶೇಖರಪ್ಪಗೌಡ ಶಿರವಾಳ ಅವರ ತವರೂರಿನವರೇ ಆಗಿದ್ದು, ಮತ್ತು ಅವರ ಆಪ್ತರೂ ಆಗಿದ್ದವರು. ಶಿವಶೇಖರಪ್ಪಗೌಡ ಶಿರವಾಳ ಹಾಗೂ ಅವರ ಮಗ ಗುರು ಪಾಟೀಲ್ ಶಿರವಾಳ ಅವರ ಚುನಾವಣೆಗಳಲ್ಲಿ ಜವಬ್ದಾರಿಯುತವಾಗಿ ಕೆಲಸ ಮಾಡಿದವರು. ಸಾಕಷ್ಟು ಚುನಾವಣೆಗಳಲ್ಲಿ ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದವರು. ಹೀಗಾಗಿ ಪ್ರತಿ ಚುನಾವಣೆಯ ಒಳಸುಳಿಯನ್ನು ಬಲ್ಲವರಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶಸ್ಸು ಕಂಡವರಾಗಿದ್ದಾರೆ. ನಗರದ ಯುವಕರ ಅಭಿರುಚಿ ಕ್ರಿಕೇಟ್ ಸೇರಿದಂತೆ ಇನ್ನಿತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದವರು. ಹೀಗಾಗಿ ಯುವಕರ ಮನಸೆಳೆಯುವಲ್ಲಿ ಇವರು ಕಾರ್ಯಪ್ರವೃತ್ತರಾಗಿದ್ದು, ನಗರದಲ್ಲಿ ಸುಪರಿಚಿತರು ಹೌದು.
ಅಹಿಂದ ಮುಖಂಡರ ಸಾಥ್.!
ಮತಕ್ಷೇತ್ರದ ಅಹಿಂದ ಮುಖಂಡರು ಇಬ್ರಾಹಿಂಸಾಬ ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳಿವೆ. ಅಹಿಂದ ಜನ ಒಗ್ಗಟ್ಟಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನಲಾಗಿದೆ.
ಮೊದಲನೇ ಸುತ್ತಿನ ಮಾತುಕತೆ ಮುಗಿದಿದ್ದು, ಎರಡನೇ ಹಂತದಲ್ಲಿ ಜೆಡಿಎಸ್ ಟಿಕೇಟ್ ಪಡೆಯುವ ಭರವಸೆಯನ್ನು ವ್ಯಕ್ತಪಡಿಸುವ ಇಬ್ರಾಹಿಂಸಾಬ ಜತೆಗೆ ತೆರಳಿದ್ದ ಹೆಸರು ಹೇಳಲು ಇಚ್ಛಿಸದ ಅಹಿಂದ ಮುಖಂಡರೊಬ್ಬರು ‘ವಿನಯವಾಣಿ’ ಗೆ ತಿಳಿಸಿದ್ದಾರೆ.
ಶಾಸಕ ಗುರು ಪಾಟೀಲ್ ಅವರ ಸ್ನೇಹಿತ, ಆತ್ಮೀಯರಾಗಿದ್ದ ಇಬ್ರಾಹಿಂಸಾಬ ಚುನಾವಣೆ ಕಣಕ್ಕೆ ಇಳಿಯಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದು, ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಟಿಕೇಟ್ ಖಚಿತದ ನಂತರವೇ ಇವರು ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿಯನ್ನು ಅವರೇ ಸ್ವತಹಃ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿರುವ ಕೆಲ ಅಹಿಂದ ಮುಖಂಡರು ಇಬ್ರಾಹಿಂಸಾಬ ಜತೆಗಿದ್ದು, ಚುನಾವಣೆ ತಂತ್ರಗಾರಿಕೆ ಎಣಿಯುತ್ತಿದ್ದಾರೆ ಎನ್ನಲಾಗಿದೆ. ಈ ಬಾರಿ ಶತಾಯಗತಾಯ ಅಹಿಂದ ಮುಖಂಡರು ಒಂದಾಗಿ ಇಬ್ರಾಹಿಂಸಾಬ ಶಿರವಾಳ ಇವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದ್ದಾರೆ.
2018ರ ಚುನಾವಣೆ ಕಣದಲ್ಲಿ ಸ್ಪರ್ಧಾಳುಗಳೆಷ್ಟು.?
ಕಾಂಗ್ರೆಸ್ನಿಂದ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಟಿಕೇಟ್ ಬಹುತೇಕ ಖಚಿತ ಎನ್ನಲಾಗಿದೆ. ಬಿಜೆಪಿಯಿಂದ ಗುರು ಪಾಟೀಲ್ ಶಿರವಾಳ. ಜೆಡಿಎಸ್ನಲ್ಲಿ ಎರಡು ಮುರು ಜನ ಆಕಾಂಕ್ಷಿಗಳಾಗಿದ್ದು, ಈಗಾಗಲೇ ಗುರುತಿಸಿಕೊಂಡ ಅಮೀನರಡ್ಡಿ ಯಾಳಗಿ ಮತ್ತು ಪ್ರಸ್ತುತ ಅಹಿಂದ ಮಂದಿಯ ಬೆಂಬಲದೊಂದಿಗೆ ಇಬ್ರಾಹಿಂಸಾಬ ಶಿರವಾಳ ಹೆಸರು ಕೇಳಿ ಬರುತ್ತಿದೆ.
ಇನ್ನು ಶರಣಪ್ಪ ಸಲಾದಪುರ ಜೆಡಿಎಸ್ ಆಕಾಂಕ್ಷಿಯಾಗಿದ್ದು, ಟಿಕೇಟ್ ದೊರೆಯುವ ಭರವಸೆ ಇಲ್ಲವಾದ್ದರಿಂದ ಬೇರೆ ಪಕ್ಷದ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ. ಸಲಾದಪುರ ಅವರು ವರ್ತೂರ ಪ್ರಕಾಶ ಅವರ ನಮ್ಮ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ನಡುವೆ ಬಿಎಸ್ಪಿ ಮತ್ತು ಎಸ್ಡಿಪಿಐ ಒಪ್ಪಂದ ಮೇರೆಗೆ ಒಬ್ಬರು ಚುನಾವಣೆಗೆ ಇಳಿಯಲಿದ್ದಾರೆ ಎಂದು ಸುದ್ದಿ ಬಂದಿದೆ. ಒಟ್ಟಾರೆ ಈ ಬಾರಿ ಐದು ವಿವಿಧ ಪಕ್ಷಗಳಿಂದ ಸ್ಪರ್ಧೆಗಿಳಿಯುವ ಸಾಧ್ಯತೆ ಕಂಡು ಬರುತ್ತಿದೆ. ಇನ್ನೂ ಚುನಾವಣೆ ಸಮೀಪಿಸಿದಂತೆ ಈ ಸಂಖ್ಯೆ ಹೆಚ್ಚಾಗುತ್ತದೆ. ಟಿಕೇಟ್ ದೊರೆಯದವರು ಪಕ್ಷೇತರ ಅಥವಾ ಇನ್ನಾವುದೋ ಪಕ್ಷದಿಂದ ಕಣಕ್ಕಿಳಿದರು ಅಚ್ಚರಿ ಪಡಬೇಕಿಲ್ಲ. ಒಟ್ಟಾರೆ 2018ರ ಚುನಾವಣೆ ರಂಗೇರಲಿದೆ. ಜಯದ ಮಾಲೆ ಯಾರಿಗೆ ಒಲಿಯಲಿದೆ ಎಂಬುದು ಕಾದು ನೋಡಬೇಕು.