ವಿನಯ ವಿಶೇಷ

ಅಲ್ಲಮಪ್ರಭು ಎಲ್ಲಿಯವರು ಗೊತ್ತೆ..? ಅಲ್ಲಮನ ಕುರಿತು ಅವಲೋಕನ.!

ಹಗರಟಗಿಯ ಅಲ್ಲಮಪ್ರಭುಗಳು –ಒಂದು ಅವಲೋಕನ

12 ನೇ ಶತಮಾನದ ಕ್ರಾಂತಿಕಾರಿ ಚಳುವಳಿಯ ನೇತೃತ್ವ ವಹಿಸಿದ್ದ ಬಸವಣ್ಣನವರಿಂದ ಸ್ಥಾಪಿತವಾದ ಅನುಭವಮಂಟಪದ ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುಗಳು ನೂತನ ಹುಣಸಗಿ ತಾಲೂಕಿನ ಹಗರಟಗಿಯವರೇ? ಇದು ಅವರ ಜನ್ಮಸ್ಥಳವೇ? ಹೌದು ಎನ್ನುತ್ತಾರೆ ಹಿರಿಯ ಸಂಶೋಧಕ ಸೀತಾರಾಮ ಜಾಗಿರದಾರರು. ನಾವು ಇಲ್ಲಿಯವರೆಗೂ ಅಲ್ಲಮಪ್ರಭುಗಳ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿ ಎಂದೇ ಓದಿದ್ದೇವೆ, ಕೇಳಿದ್ದೇವೆ. ಎಲ್ಲಿಯ ಶಿವಮೊಗ್ಗದ ಬಳ್ಳಿಗಾವೆ, ಎಲ್ಲಿಯ ಹುಣಸಗಿಯ ಹಗರಟಗಿ ಒಂದಕ್ಕೊಂದು ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ.

ಈ ನಿಟ್ಟಿನಲ್ಲಿ “ದೇವಪುರದ ಮಹಾಕವಿ ಲಕ್ಷ್ಮೀಶ ಸಂಘ, ಸುರಪುರ” ಇವರು ಪ್ರಕಟಿಸಿದ, ಶ್ರೀ ಸೀತಾರಾಮ ಜಾಗಿರದಾರರು ಬರೆದ “ಅಲ್ಲಮಪ್ರಭುಗಳು” ಕೃತಿಯನ್ನು ಅವಲೋಕಿಸಲು ಅಣಿಯಾಗಿ ಕೂತಾಗ ಜಾಗಿರದಾರರು ನೀಡಿದ ಸೂಕ್ಷ್ಮ ಸಂಗತಿಗಳು ಅಚ್ಚರಿಯನ್ನುಂಟು ಮಾಡುತ್ತವೆ.
ಮೊದಲು ಅಲ್ಲಮಪ್ರಭುಗಳ ಅಂಕಿತದ ಬೆನ್ನು ಹತ್ತಿ ಹೊರಟ ಜಾಗಿರದಾರರಿಗೆ ಹೊಸ ಹೊಸ ಸಂಗತಿಗಳು ಗೋಚರವಾಗಿ ಕೊನೆಗೆ ಹಗರಟಗಿಯೇ ಅಲ್ಲಮಪ್ರಭುಗಳ ಜನ್ಮಸ್ಥಳ ಎಂದು ಖಚಿತಪಡಿಸುತ್ತಾರೆ.

ಜಾಗಿರದಾರರು ನೀಡಿದ ಸೂಕ್ಷ್ಮ ಸಂಗತಿಗಳನ್ನು ಇಲ್ಲಿ ತಿಳಿಸಲು ಇಚ್ಛಿಸುತ್ತೇನೆ. ಚಾಮರಸನ ಪ್ರಭುಲಿಂಗಲೀಲೆ, ಹರಿಹರನ ಪ್ರಭುದೇವರ ರಗಳೆ ಹಾಗೂ ಅಲ್ಲಮಪ್ರಭುಗಳ ಸಮಕಾಲೀನ ಬಸವಾದಿ ಶರಣರ ವಚನಕಾರರು ರಚಿಸಿದ ವಚನಗಳನ್ನು ಆಧರಿಸಿ ಅಲ್ಲಮಪ್ರಭುಗಳ ಬೆಂಬತ್ತಿ ಹೋಗುತ್ತಾರೆ.
“ಬಳ್ಳಿಗಾವಿಯೆನಿಪ್ಪ ಪುರಂವರಂ ರಂಜಿಪುದು ಪಲ್ಲವಿಪ ಶರಣಸಂಕುಳ ದಿಂ ವಿರಾಜಿಪುದು” ಎಂದು ಹರಿಹರ ಹೇಳಿದ್ದಾನೆ.

ಶಿವಮೊಗ್ಗದ ಬಳ್ಳಿಗಾವಿಯು ಶರಣ ಸಂಕುಳ(ಬಹಳಷ್ಟು ಶರಣರಿರುವ ಪ್ರದೇಶ)ದಿಂದ ಶೋಭಾಯಮಾನವಾಗಿತ್ತೆಂದು ಹೇಳುತ್ತಾನೆ. ಇನ್ನು ಚಾಮರಸನ ಪ್ರಭುಲಿಂಗಲೀಲೆಯಲ್ಲಿ “ಸುಜ್ಞಾನಿ ನಿರಹಂಕಾರ” ದಂಪತಿಗಳ ಉದರದಲ್ಲಿ “ಬನವಸೆ ಬಳ್ಳಿಗಾವಿ”ಯಲ್ಲಿ ಅಲ್ಲಮಪ್ರಭುಗಳ ಜನನವಾಯಿತು. ಬನವಾಸಿಯ ಮಧುಕೇಶ್ವರ ದೇವಾಲಯ ಅಲ್ಲಮಪ್ರಭುಗಳು ನೆಲೆಸಿದ್ದ ನೆಲ ಎಂದು ಹೇಳಿದ್ದಾರೆ. ಇಲ್ಲಿ ಬನವಾಸಿ-ಬಳ್ಳಿಗಾವಿ ಎಂದು 2 ಸ್ಥಳದ ಉಲ್ಲೇಖವಿದೆ. ಇದರಲ್ಲಿ ಯಾವುದನ್ನು ಸ್ವೀಕರಿಸಬೇಕು? ತನ್ನ ನೆಲದ ಆರಾಧ್ಯ ದೈವ(ಮಧುಕೇಶ್ವರ)ವನ್ನು ಅಲ್ಲಮಪ್ರಭುಗಳು ತಮ್ಮ ವಚನಗಳಲ್ಲಿ ನೆನೆಯುತ್ತಿದ್ದರು. ಎಲ್ಲಿಯೂ ಮಧುಕೇಶ್ವರನನ್ನು ನೆನೆದಿಲ್ಲ. ಎಲ್ಲಿಯೂ ನೆನೆದಿಲ್ಲ ಎಂದರೆ ಬನವಾಸಿ ಬಳ್ಳಿಗಾವಿ ಅವನ ಜನ್ಮನೆಲ ಅಲ್ಲವೆಂದು ಇಟ್ಟುಕೊಳ್ಳೋಣ.

ಅದೇ ತೆರನಾಗಿ ಹಿರಿಯ ವಿದ್ವಾಂಸ ದಿ.ಎಂ.ಎಂ.ಕಲಬುರ್ಗಿಯವರು ಕೂಡ ಅಲ್ಲಮಪ್ರಭುಗಳ ಜನ್ಮನೆಲದ ಬಗ್ಗೆ ಗಮನಸೆಳೆದಿದ್ದಾರೆ. ಆದರೆ ಇವರು ಹರಿಹರ ಮತ್ತು ಚಾಮರಸ ಉಲ್ಲೇಖಿಸಿದ ಜನ್ಮನೆಲ ಬಳ್ಳಿಗಾವಿ ಎಂಬುದನ್ನು ಅಲ್ಲಗಳೆದು ಅಲ್ಲಮಪ್ರಭುಗಳ ಜನ್ಮನೆಲ “ಕರವೂರು” ಎಂದು ಗಮನ ಸೆಳೆಯುವರು. ಕರವೂರಿನ ನಿರಹಂಕಾರ ಸುಜ್ಞಾನಿಗಳು ಪ್ರಭುದೇವರ ತಂದೆ ತಾಯಿಯರು. ಅತನ ಜನ್ಮನೆಲೆ ಕರವೂರು ಎನ್ನುತ್ತಾರೆ ದಿ.ಎಂ.ಎಂ.ಕಲಬುರ್ಗಿ,
ಆದರೆ ಬನವಾಸಿ ಬಳ್ಳಿಗಾವಿಯಾಗಲಿ, ಶಿವಮೊಗ್ಗದ ಬಳ್ಳಿಗಾವಿಯಾಗಲಿ, ಕರವೂರು ಆಗಲಿ ಈ ಪ್ರದೇಶದಲ್ಲಿ ಶರಣಸಂಕುಲವೆಲ್ಲಿತ್ತು? ಎಷ್ಟು ಜನ ಶರಣರಿದ್ದರು? ಎಂದು ಜಾಗಿರದಾರರು ಪ್ರಶ್ನಿಸುತ್ತಾರೆ. ಕೇವಲ “ಬಳ್ಳಿಗಾವಿ”ಎಂಬ ಗ್ರಾಮನಾಮವನ್ನಿಟ್ಟುಕೊಂಡು ಜನ್ಮನೆಲೆಯನ್ನು ಖಚಿತಪಡಿಸುವುದಕ್ಕಿಂತ ಅಲ್ಲಿಯ ಸುತ್ತಲಿನ ಪರಿಸರದೆಡೆಗೆ ಗ್ರಹಿಸುವುದೊಳಿತು. ಬಳ್ಳಿಗಾವಿಯಲ್ಲಿ ಶರಣ ಸಂಕುಲವೇ ಇರಲಿಲ್ಲ. ಹಾಗಿದ್ದ ಮೇಲೆ ಹರಿಹರ ಉಲ್ಲೇಖಿಸಿದ “ಬಳ್ಳಿಗಾವಿ” ಯಾವುದು ಎಂದು ಬೆನ್ನತ್ತಿ ಹೋದ ಜಾಗಿರದಾರರು ಮೊದಲು ಅಲ್ಲಮ ಪ್ರಭುಗಳ ವಚನದ ಕಡೆ ಗಮನಹರಿಸುವರು. ಬಹುತೇಕ ಎಲ್ಲ ಶರಣರು ತಮ್ಮ ಅಂಕಿತಗಳನ್ನು ಸ್ಥಾವರಲಿಂಗದ ಹೆಸರನ್ನು ಇಟ್ಟುಕೊಂಡು ವಚನಗಳನ್ನು ಬರೆದಿದ್ದಾರೆ.

ಉದಾಹರಣೆಗೆ
ಬಸವಣ್ಣನ ಅಂಕಿತ ಕೂಡಲಸಂಗಮದೇವನ ಸ್ಥಾವರಲಿಂಗ- ಸಂಗಮನಾಥ
ಆದಯ್ಯನ ಅಂಕಿತ ಸೌರಾಷ್ಟ್ರ ಸೋಮೇಶ್ವರನ ಸ್ಥಾವರಲಿಂಗ-ಸೋಮೇಶ್ವರ
ಅಕ್ಕಮಹಾದೇವಿಯ ಅಂಕಿತ ಚೆನ್ನಮಲ್ಲಿಕಾರ್ಜುನನ ಸ್ಥಾವರಲಿಂಗ-ಶ್ರೀಶೈಲ ಮಲ್ಲಿಕಾರ್ಜುನ
ಹಾವಿನಾಳ ಕಲ್ಲಯ್ಯನ ಅಂಕಿತ ಮಹಾಲಿಂಗ ಕಲ್ಲೇಶ್ವರನ ಸ್ಥಾವರಲಿಂಗ- ಕಲ್ಲೇಶ್ವರ
ಕೆಂಭಾವಿ ಭೋಗಣ್ಣ ಅಂಕಿತ ಭೋಗೇಶ್ವರನ ಸ್ಥಾವರಲಿಂಗ -ಭೋಗೇಶ್ವರ
ಹೀಗೆ ನೂರಾರು ಶರಣರು ಸ್ಥಾವರಲಿಂಗನ್ನು ನೆನೆದು ಅಂಕಿತವನ್ನು ಇಟ್ಟುಕೊಂಡಿದ್ದಾರೆ. ಅದೇ ತೆರನಾಗಿ ಅಲ್ಲಮಪ್ರಬುಗಳ ಗುಹೇಶ್ವರನ ಸ್ಥಾವರಲಿಂಗ ಇರಲೇಬೇಕಲ್ಲವೇ? ಬನವಾಸಿಯಲ್ಲಿ ಗುಹೇಶ್ವರ ದೇವಾಲಯವಿಲ್ಲ. ಬಳ್ಳಿಗಾವಿಯಲ್ಲೂ ಇಲ್ಲ. ಜಾಗಿರದಾರರು ತಿಳಿಸುವ ಹುಣಸಗಿಯ ಹಗರಟಗಿಯಲ್ಲಿಯೂ ಇಲ್ಲ!! ಹಾಗಿದ್ದ ಮೇಲೆ ಗುಹೇಶ್ವರ ದೇವಾಲಯ ಎಲ್ಲಿದೆ? ಎಂದು ಜಾಗಿರದಾರರು ಶಾಸನಗಳನ್ನು ಬೆನ್ನು ಹತ್ತಿ ಹಲವು ಶಾಸನಗಳಲ್ಲಿ ಉಕ್ತವಾದ ಉದಾಹರಣೆಗಳನ್ನು ನೀಡುತ್ತಾರೆ.

ರಾಷ್ಟ್ರಕೂಟರ ದೊರೆ ದಂತಿದುರ್ಗನ ಎಲ್ಲೋರಾದ ಕ್ರಿ.ಶ.742 ರ ತಾಮ್ರ ಶಾಸನದಲ್ಲಿ ಗುಹೇಶ್ವರ ತೀರ್ಥದ ಉಲ್ಲೇಖವಿದೆ. ಈ ಗುಹೇಶ್ವರ ತೀರ್ಥ ಈಗಿನ ಛತ್ತೀಸ್‍ಗಡ ರಾಜ್ಯದ “ಜಜ್‍ಪುರ”ದಲ್ಲಿದೆ. ಹಾಗೂ ಇದು ಓರಿಸ್ಸಾ ಮತ್ತು ಜಾರ್ಖಂಡ ರಾಜ್ಯಗಳ ಗಡಿ ಭಾಗದಲ್ಲಿದೆ. ಅಲ್ಲಮಪ್ರಭುಗಳು ಉತ್ತರಭಾರತದ ಕಡೆ ತೀರ್ಥ ಕ್ಷೇತ್ರಗಳಿಗೆ ತೆರಳಿದ್ದರೆಂದು ಅವರ ವಚನವೇ ಹೇಳುತ್ತದೆ.
“ಅರಗಿನ ದೇಗುಲದಲ್ಲಿ ಒಂದು ಉರಿಯಲಿಂಗವ ಕಂಡೆಮತ್ತೆ ದೇವರ ಪೂಜಿಸುವವರಾರು ಇಲ್ಲ
ಉತ್ತರಾಪಥಧ ದರ್ಶನಾದಿಗಳಿಗೆ ಸುತ್ತಿ ಮುತ್ತಿದ ಮಾಯೆ ಎತ್ತಲಿಕೆ ಹೋಯಿತು?
ಮರನೊಳಗಣ ಕಿಚ್ಚು ಮರನ ಸುಟ್ಟುದು ಕಂಡೆ; ಗುಹೇಶ್ವರನೆಂಬ ಲಿಂಗವಲ್ಲಿಯೆ ನಿಂದಿತ್ತು”.

ವಚನದಲ್ಲಿ ಉಲ್ಲೇಖಿಸಿದಂತೆ ಉತ್ತರ ಭಾರತದ ಕಡೆಗೆ ಅವರು ಯಾತ್ರೆ ಕೈಗೊಂಡಿದ್ದರೆಂದು ತಿಳಿಯುತ್ತದೆ. ಹಾಗೆಯೇ ಈಗಿನ ಛತ್ತಿಸ್‍ಗಡದಲ್ಲಿರುವ ಜಜ್‍ಪುರದ ಗುಹೇಶ್ವರತೀರ್ಥದಲ್ಲಿ ತಂಗಿದ್ದರು. ಅಲ್ಲಿ ಅವರಿಗೆ ಬುದ್ದನ ಹಾಗೆ ಪರಾತ್ಪರದ ಸಾಕ್ಷಾತ್ಕಾರವಾಯಿತು. ಅಂತೆಯೇ ಆ ತೀರ್ಥದ ಸ್ಥಾವರಲಿಂಗವನ್ನೇ ತಮ್ಮ ಅಂಕಿತವನ್ನಾಗಿಸಿಕೊಂಡರು. ಅಂದಿನಿಂದ ಆ ಲಿಂಗ ಅವರಿಗೆ ಜೀವನದ ಒಳಗೂ ಹೊರಗೂ ಸರ್ವಸ್ವವೂ ಆಯಿತು ಎನ್ನುತ್ತಾರೆ ಜಾಗಿರದಾರರು.
ಅಲ್ಲಮಪ್ರಬುಗಳ ಹೆಸರನ್ನು ಗಮನಿಸಿದಾಗ ಅಲ್ಲ+ಅಮ್ಮ= ಅಲ್ಲಮ್ಮ>ಅಲ್ಲಮ ಎಂದಾಗಿದೆ. ಎಲ್ಲಮ್ಮ>ಎಲ್ಲಪ್ಪ, ಗುಂಡಬ್ಬೆ>ಗುಂಡಮ,ಜನ್ನಯ್ಯ>ಜನ್ನಮ ಎಂದಾಗುತ್ತದೆ. ಇಲ್ಲಿ ಎಲ್ಲಮ್ಮದೇವಿಯು ಮೂಲತ: ಅಲ್ಲಮ್ಮ ದೇವತೆಯಾಗಿದ್ದಳು. ಈಕೆ ಶಾಕ್ತ ಪಂಥಕ್ಕೆ ಸೇರಿದ ಶಕ್ತಿ ದೇವತೆಯಾಗಿದ್ದಾಳೆ. ಅಲ್ಲಮಪ್ರಭುಗಳ ಮನೆತನ ಶಕ್ತಿ ಪೂಜಕರಾಗಿದ್ದವರೆಂದು ತಿಳಿಯುತ್ತದೆ. ಹೀಗಾಗಿ ಜಜ್‍ಪುರದ ಮಾತೃದೇವತೆಯ ಪೂಜಾಸಂಸ್ಕøತಿ ಮತ್ತು ತಾಂತ್ರಿಕ ಪೂಜೆಯ ಪ್ರಸಿದ್ಧ ಕೇಂದ್ರವಾಗಿತ್ತು. ಹೀಗಾಗಿ ಅಲ್ಲಮಪ್ರಭುಗಳು ಶಕ್ತಿದೇವತೆಯ ದರ್ಶನಕ್ಕೆ ಜಜ್‍ಪುರಕ್ಕೆ ಹೋಗಿದ್ದರೆಂಬುದು ನಮಗೆ ತಿಳಿಯುತ್ತದೆ.
ಸಿಂಗಿರಾಜ(ಕ್ರಿ.ಶ.1500)ಬರೆದ ಸಿಂಗಿರಾಜ ಪುರಾಣ ಚರಿತ್ರೆಯಲ್ಲಿ ಅಲ್ಲಮಪ್ರಭುಗಳ ಸ್ಥಳವನ್ನು ಹೀಗೆ ಉಲ್ಲೇಖಿಸಿದ್ದಾನೆ.
ವೃಷಭನಾ ನದಿನದಂಗಳೊಳಾಡಿ ಬರುತ[ಒಂ]
ದೆಸೆವಡೆದ ಕೃಷ್ಣವೇಣಿಯ ಮಲಪ್ರಹರಿಗಳ
ದೆಶೆಯೊಳಾನಂದದಿಂದಿರುತಿರುತ ತದ್ದಕ್ಷಿಣಾ ಪ್ರಾಂತದಲ್ಲಿ
ಪೆಸರೇಕಚಕ್ರ ದ್ವಿಚಕ್ರಪುರ ಪಗರಟಗೆ ಹೆಸರು ಯುಗಭೇಧ ಬಲಿಗ್ರಾಮವೆಂಬಾಪುರದ
ಪಸರಿಸಿದ ಪೊಳಲೊಡಾಡುತ್ತ ಸುಂಮಿರಲಿತ್ತಲಿಂದ್ರಾದ್ಯಮರ ಸಮೂಹ ||

ಇಲ್ಲಿ ಸಿಂಗಿರಾಜನಿಗೆ ಹಗರಟಗಿ ಪರಿಸರದ ಪರಿಚಯ ಚೆನ್ನಾಗಿಯೇ ಇತ್ತೆಂದು ತಿಳಿಯುತ್ತದೆ. ಇಲ್ಲಿ ಹಗರಟಗಿ ಊರಿಗೆ ಮತ್ತೊಂದು ಹೆಸರು “ಬಲಿಗ್ರಾಮ” ಎಂದು ತಿಳಿಸಿದ್ದಾನೆ. ಹರಿಹರನು ಹೇಳಿದ ಶರಣ ಸಂಕುಳ ಹಗರಟಗಿ ಪ್ರದೇಶದಲ್ಲಿತ್ತು. ಕ್ರಿ.ಶ.10 ರಿಂದ 13 ನೇ ಶತಮಾನದ ಅವಧಿಯಲ್ಲಿ ಹಗರಟಗಿಯು ಮಾಸವಾಡಿ ಸೇವುಣರ ರಾಜಧಾನಿಯಾಗಿತ್ತೆಂದು ಶಾಸನಗಳೇ ತಿಳಿಸುತ್ತವೆ. ಹಗರಟಗಿ-300 ಭೂಪ್ರದೇಶದಲ್ಲಿ ಶರಣರ ಕ್ರಾಂತಿಯ ಕಾಲದಲ್ಲಿ ಮಹತ್ವದ ಪ್ರದೇಶವಾಗಿತ್ತು. ಹಗರಟಗಿಯ ಹತ್ತಿರದಲ್ಲಿ ಬಾಗೇವಾಡಿ, ಕೆಂಭಾವಿ, ಕೂಡಲಸಂಗಮ, ಮುದನೂರು, ಕೊಂಡಗುಳಿ,ಹಾವಿನಾಳ ಮುಂತಾದ ಶರಣ ಸಂಕುಲವೇ ಇಲ್ಲಿತ್ತು. ಬಳ್ಳಿಗಾವಿಯಲ್ಲಿ ಇದ್ದಿಲ್ಲ.

ಸಿಂಗಿರಾಜ ಉಲ್ಲೇಖಿಸಿದ ಏಕಚಕ್ರಪುರವೇ ಈಗಿನ ಹಗರಟಗಿಯಾಗಿದೆ. ಸ್ಥಳಪುರಾಣದಲ್ಲಿ ಹಗರಟಗಿಗೆ ಏಕಚಕ್ರಪುರವೆಂದೇ ಕರೆಯುವರು. ಕೊನೆಯದಾಗಿ ಬಸವಣ್ಣನವರ ವಚನವೊಂದನ್ನು ಗಮನಿಸೋಣ.

ಶ್ರೋತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ತ್ವಕ್ಕಿನಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ನಾಸಿಕದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ನೇತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ಜಿಹ್ವೆಯಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು
ಇಂತೀ ಪಂಚೇಂದ್ರಿಯಗಳಲ್ಲಿ ಬ್ರಹ್ಮಚಾರಿಯಾಗಿ
ಕೂಡಲಸಂಗಮ ದೇವರಲ್ಲಿ ಎನ್ನನಾಗು ಮಾಡಲಿಕ್ಕೆ
ಬ್ರಹ್ಮಚಾರಿಯಾದನು ಪ್ರಭುದೇವರು.

ಇಲ್ಲಿ ಬಸವಣ್ಣನವರು ಆಗು ಮಾಡಲಿಕ್ಕೆ-ರೂಪಿಸಲಿಕ್ಕೆ ಅಲ್ಲಮಪ್ರಭುಗಳು ಬ್ರಹ್ಮಚಾರಿಯಾದರು ಎಂದಿದೆ. ಶಿವಮೊಗ್ಗದ ಬಳ್ಳಿಗಾವಿಯಲ್ಲಿದ್ದ ಅಲ್ಲಮಪ್ರಭುಗಳಿಂದ ಕೂಡಲಸಂಗಮದ ಬಸವಣ್ಣನವರನ್ನು ಆಗು ಮಾಡಲಿಕ್ಕೆ ಹೇಗೆ ಸಾಧ್ಯ? ಒಬ್ಬರನ್ನೊಬ್ಬರು ಸಂಧಿಸುವದು ಹತ್ತಿರದ ಸ್ಥಳಗಳಲ್ಲಿ ಸಾಧ್ಯ. ಕೂಡಲಸಂಗಮಕ್ಕೆ ಹಗರಟಗಿಯಿಂದ ಬಹಳ ಅಂತರವೇನೂ ಇಲ್ಲ. ಈಗಿನಂತೆ ಆಗ ರಸ್ತೆ ಮಾರ್ಗವಿರಲಿಲ್ಲ. ಕಾಡುದಾರಿಯಲ್ಲಿ ಸಾಗುತ್ತಿದ್ದರು. ಹಗರಟಗಿಯಿಂದ- ನಾಲತವಾಡ-ಕೋಳೂರು- ತಂಗಡಗಿಗೆ ಸೇರುವದು. ಇಲ್ಲವೆ ಹಗರಟಗಿ-ಹಿರೇಮುರಾಳ-ಕೋಳೂರು ಮೂಲಕ ತಂಗಡಗಿಗೆ ಮಾರ್ಗವಿದ್ದಿರಬೇಕು. ತಂಗಡಗಿಯಿಂದ ಆಗಿನ ಕಾಲದಲ್ಲಿ ಕೃಷ್ಣಾ ನದಿಯನ್ನು ಹರಿಗೋಲುಗಳ (2 ದಶಕದ ಹಿಂದೆ ಅಲ್ಲಿ ಬೋಟ್(ಲಾಂಚ್)ಗಳ ಮೂಲಕ ನಾನು ಕೂಡಲ ಸಂಗಮಕ್ಕೆ ಹೋಗಿದ್ದು ಇನ್ನೂ ನೆನಪಿದೆ.ತಂಗಡಗಿ ನನ್ನ ತಾಯಿ ತವರು ಮನೆ. ಹೀಗಾಗಿ ನೆನಪಿರುತ್ತದೆ!! ಮನೆಯ ಮೇಲೆ ನಿಂತರೆ ಸಾಕು ಕೂಡಲ ಸಂಗಯ್ಯನ ದರ್ಶನವಾಗುತ್ತದೆ. ತಂಗಡಗಿಯ ಜನ ತಮ್ಮ ಮನೆಯ ಮೇಲೆ ನಿಂತು ಪ್ರತಿನಿತ್ಯ ಸಂಗಮನಾಥನಿಗೆ ನಮಸ್ಕರಿಸುತ್ತಿದ್ದುದು ನಾ ಬಲ್ಲೆ. ) ಮೂಲಕ ಹಾದು ಕೂಡಲಸಂಗಮ ತಲುಪಬಹುದಿತ್ತು. ಹೀಗೆ ಹೋದರೆ ಹಗರಟಗಿಯಿಂದ ಕೂಡಲಸಂಗಮಕ್ಕೆ ಸುಮಾರು 50-60 ಕಿ.ಮೀ.ಗಿಂತ ಕಡಿಮೆ ಕ್ರಮಿಸಬಹುದು. ಹಗರಟಗಿಯಿಂದ ಕೂಡಲಸಂಗಮ ಹತ್ತಿರದಲ್ಲೇ ಇರುವುದರಿಂದ ಅಲ್ಲಮಪ್ರಭುಗಳು ಬಸವಣ್ಣನವರನ್ನು ಆಗು ಮಾಡಲಿಕ್ಕೆ ಸಾಧ್ಯವಾಗುತ್ತದೆ.

ಮೇಲಿನ ಎಲ್ಲ ಸಂಗತಿಗಳನ್ನು ಅವಲೋಕಿಸಿದಾಗ ಕೇವಲ “ಬಳ್ಳಿಗಾವಿ”ಎಂಬ ಗ್ರಾಮವನ್ನಿಟ್ಟುಕೊಂಡು ಜನ್ಮನೆಲೆಯನ್ನು ಖಚಿತಪಡಿಸುವುದಕ್ಕಿಂತ ಸುತ್ತಲಿನ ಪರಿಸರದೆಡೆಗೆ ಗ್ರಹಿಸುವುದೊಳಿತು. ಇದರಿಂದ ಹಗರಟಗಿಯೇ ಅಲ್ಲಮಪ್ರಭುಗಳ ಜನ್ಮನೆಲೆ ಎಂದು ಸ್ಪಷ್ಟವಾಗುತ್ತದೆ.

ರಾಜನಕೋಳೂರು ಹತ್ತಿರದಲ್ಲಿ ಅಲ್ಮೇಶ್ವರ ಕ್ಯಾಂಪ್ ಒಂದಿದೆ ಎಂದು ಕೇಳಿದ್ದೇನೆ. ಅಲ್ಲಿ ಒಂದು ಬಾರಿ ಕ್ಷೇತ್ರಕಾರ್ಯ ನಡೆಸಿದರೆ ಅಲ್ಲಮಪ್ರಭುಗಳ ಕುರಿತು ಮತ್ತಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಒಂದೂವರೆ ದಶಕದ ಹಿಂದೆಯೇ ಅಲ್ಲಮಪ್ರಭುಗಳ ಕುರಿತು ಸಂಶೋಧನೆ ನಡೆಸಿ ಅವರ ಜನ್ಮನೆಲ ಹಗರಟಗಿ ಎಂದು ಖಚಿತಪಡಿಸಿದ ಹಿರಿಯ ವಿದ್ವಾಂಸ ಶ್ರೀ ಸೀತಾರಾಮ್ ಜಾಗಿರದಾರರಿಗೆ ಅನಂತ ಕೃತಜ್ಞತೆಗಳು.

ಪಾಟೀಲ ಬಸನಗೌಡ.ಹುಣಸಗಿ.
9900771427.

Related Articles

Leave a Reply

Your email address will not be published. Required fields are marked *

Back to top button