ಅನ್ನದ ಕಿಮ್ಮತ್ತು ಭಾಗ – 7 ಸಾಸನೂರ ಬರಹ
-ಆನಂದಕುಮಾರ ಸಾಸನೂರ
ರಾವುತಪ್ಪ ಕಾಕಾನ ಎತ್ತಿನ ಬಂಡ್ಯಾಗ ಕುಂತು ನೀರು ತರ್ಲಾಕ ಹೋಗೋದು, ಎತ್ತುಗೊಳಿಗಿ ಕಣಕಿ , ಹುಲ್ಲು ಕೊಯ್ದು ಹಾಕದು, ಕೆರಿಗಿ ಹೋಗಿ ಎತ್ತುಗೊಳ ಮೈ ತೊಳಿಯೋದು ತುಂಬಾ ಇಷ್ಟ ಆಯ್ತು. ಆಮೇಲೆ ಶಾಲೆಗೆ ಹೋಗುವುದು.
ಆಮೇಲೆ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಎಲ್ಲವನ್ನೂ ತಪ್ಪಿಲ್ಲದೆ ಮಾಡುತ್ತಿದ್ದೆ, ಅದಕ್ಕೆ ಕಾರಣ ತಾಳಿಕೋಟೆಯ ವಸತಿ ತರಬೇತಿ ಶಾಲೆಯ ಗೂಟದ ಬೆಲ್ಟಿನೇಟು ಮತ್ತು ಮಗ್ಗಿ, ಎಲ್ಲಕಡೆ ಕಿಮ್ಮತ್ತಿರದವನಿಗೆ ಗುಂಡಲಗೇರಿ ಶಾಲೆಯಲ್ಲಿ ಒಂದು ತೂಕ ಬಂದಿತ್ತು.
ದಿನಾಲೂ ಶಾಲೆ ಬಿಟ್ಟ ಮ್ಯಾಲ ಆ ಮಾಸ್ಟರ್ ನಮ್ಮ ಅತ್ತಿ ಮುಂದ ನೀಲಮ್ಮ ಗೌಡಸಾನಿ ನಿಮ್ಮ ಅಳಿಯ ಭಾಳ ಶಾಣ್ಯಾ ಅದಾನ್ರಿ ಅಂದಾಗ ನಾನಂತೂ ಉಬ್ಬಿ ಪುಗ್ಗಾ ಆಗ್ತಿದ್ದೆ ನನ್ನ ಜೊತೆ ಅತ್ತೆ ನೀಲಮ್ಮಳು ಹಿಗ್ಗಿ ಖುಷಿಪಡ್ತಿದ್ದಳು.
ಎಲ್ಲದಕ್ಕೂ ಒಂದು ಕೊನೆ ಆಗ್ಬೇಕಲಾ ಎಷ್ಟು ದಿನ ಅಂತ ಖುಷಿಯ, ಆನಂದದ ದಿನಗಳಿರ್ತಾವ ಒಬ್ಬನ ಜೀವನದಲ್ಲಿ, ಒಂದು ಮಂಜಾನೆ ರಾವುತಪ್ಪ ಕಾಕಾ ನಾಷ್ಟಾ ಮಾಡಾಕ ತನ್ನ ಮನೀಗಿ ಕರದ. ಉಪ್ಪಿಟ್ಟು ಮಾಡಿದ್ದರು ಮ್ಯಾಳಿಗಿ ಹೋಗಿ ಕುಂಬಿ ಮ್ಯಾಲ ಕುಂತು ಉಪ್ಪಿಟ್ಟು ಬಾಯಾಗ ಇಟಗೋಬೇಕು ಎಡಗಣ್ಣ ಹಾರಿದ್ಹಂಗಾಯ್ತು.
ಕಣ್ಣಿನ ಎಳ್ಕೊಂಡೆ ಆದರೂ ಎಡಗಣ್ಣ ಹಾರೋದು ನಿಂದರ್ಲಿಲ್ಲ. ಯಾಕ್ ಏನ ಕುತ್ತ ಆದ ಮಗಂದು ಅನ್ಕೊಂಡೆ. ಕೆಳಗ ತಲಬಾಗಲ ಕಡಿಗಿ ನೋಡಿದರೆ ವ್ಯಾಘ್ರನನ್ನೇ ಪಳಗಿಸುವ ಕಲೆ ಗೊತ್ತಿರುವ ನಮ್ಮಪ್ಪ ಶ್ರೀ ಮಲ್ಲೇಶಪ್ಪ ಸಾಸನೂರ ಅವರ ಸಾಕ್ಷಾತ್ ದರ್ಶನವಾಯಿತು.
ಕುಂತಿದ್ದ ಕುಂಬಿಯ ಕೆಳಗ ನೋಡಿದೆ ಹಾರಿ ಹೋಗ್ಲಾಕ ಅವಕಾಶ ಆದೇನು ಅಂತ ಎದೀ ಧಸ್ ಅಂತು. ಮಾರಾಯನ ಬೃಹತ್ ಬಂಡೆಗಲ್ಲು ಇಪ್ಪತ್ತೈದು ಅಡಿಗಳ ಮ್ಯಾಲಿಂದ ಹಾರಿದರ ಇಡೀ ದೇಹ ಪೀಸ್ ಪೀಸ್ ಆಗೋ ಛಾನ್ಸ್ ಇತ್ತು. ” ಎಗರಬ್ಯಾಡ, ದುಡುಕಬ್ಯಾಡ ಬದುಕಿದ್ದರ ಮುಂದ ನೂರಾರು ದಾರಿಗಳಾವ” ಅಶರೀರವಾಣಿ ನುಡಿದಂಗಾಯ್ತು.
” ಆನಂದ ಇನ್ನೊಂದು ಸ್ವಲ್ಪ ಉಪ್ಪಿಟ್ಟು ಬೇಕೆನು ಕೆಳಗ ಬಾ” ಅಬ್ಬ ಎಂತಹ ಪ್ರೀತಿ , ಮಮತೆ, ಸಿಹಿ , ಮಧುರತೆ ತುಂಬಿದ ಧ್ವನಿಯಲ್ಲಿ ಆಯಸ್ಕಾಂತಿಯ ಆಕರ್ಷಣೆ ನನಗ ಎಳದಂಗಾಯ್ತು ಒಂದು ಕ್ಷಣ.
ವಾಸ್ತವಿಕತೆಗೆ ಬಂದೆ ಇನ್ನೇನು ನಮ್ಮಪ್ಪ ಕೆಬ್ಬಣದ ರಾಡಿನಿಂದ ಹೊಡಿತಾರೇನೋ ಅನ್ಕೊಂಡವನಿಗೆ ಆಶ್ಚರ್ಯ ಕಾದಿತ್ತು. ಗುಂಡಲಗೇರಿ ಶಾಲೆಯ ಬಗ್ಗೆ ವಿಚಾರಿಸಿ ನಿನಗ ಇಲ್ಲೇ ಹಚ್ತೀನಿ ಆದರ ತಾಳಿಕೋಟೆಗೆ ಟೀಸಿ ಮತ್ತ ಬಟ್ಟೆಯ ಟ್ರಂಕು ತೊಗೊಂಬ ರಾಮು ಅಂದರು ಅಂಜಿ ನಾಯಿಕುನ್ನಿ ಹಾಂಗ ಅಪ್ಪನ ಹಿಂದೆ ನಾ ಹೋದೆ.. ಮುಂದುವರೆಯುವದು..
ಸ್ಪೂರ್ತಿದಾಯಕ ಬರಹ ಸರ್