ಕಥೆ

ಬಡ ರೈತ ಅರಸನಿಗೆ ನೀಡಿದ ಉಡುಗೊರೆ ಪ್ರತಿಫಲ ಏನು.? ಇದನ್ನೋದಿ

ಅರಸನ ಉಡುಗೊರೆ

ರೈತನೊಬ್ಬನ ತೋಟದಲ್ಲಿದ್ದ ಸೇಬು ಮರದಲ್ಲಿ ಒಂದೇ ಒಂದು ಹಣ್ಣು ಬೆಳೆಯಿತು. ಆತ ಅದನ್ನು ಕೊಯ್ದು ಇದನ್ನು ತನಗೆ ಅತ್ಯಂತ ಪ್ರೀತಿಪಾತ್ರರಾದ ಯಾರಿಗಾದರೂ ಉಡುಗೊರೆಯಾಗಿ ಕೊಡಬೇಕು ಎಂದು ಯೋಚಿಸಿ ಪ್ರಜೆಗಳ ಕ್ಷೇಮಕ್ಕಾಗಿ ಹಗಲಿರುಳೂ ಚಿಂತಿಸುವ ಅರಸನಿಗೆ ಒಪ್ಪಿಸಲು ನಿರ್ಧರಿಸಿ ಅರಸನ ಸಭೆಗೆ ಹೋದ. ಅಲ್ಲಿ ಆತ ಸೇಬನ್ನು ಅರಸನ ಮುಂದಿರಿಸಿ ‘ದೊರೆಯೇ, ಇದು ಬಹು ವಿಶೇಷವಾಗಿದೆ.

ದೇವತೆಗಳ ಕೃಪೆಯಿಂದ ಈ ಏಕೈಕ ಹಣ್ಣು ನನ್ನ ತೋಟದಲ್ಲಿ ಬೆಳೆದಿದೆ ಎಂದು ಭಾವಿಸಿದ್ದೇನೆ. ಅಮೂಲ್ಯವಾದ ಹಣ್ಣನ್ನು ನನಗೆ ಪ್ರೀತಿಪಾತ್ರರಾದವರಿಗಷ್ಟೇ ಕೊಡಬೇಕು ಎಂದು ನಿರ್ಧರಿಸಿ ತಮಗೆ ಇದನ್ನು ಉಡುಗೊರೆಯಾಗಿ ನೀಡಬೇಕೆಂದು ತಂದಿದ್ದೇನೆ. ಸ್ವೀಕರಿಸಿ’ ಎಂದು ನಿವೇದಿಸಿದ.

ಅರಸನು ಸೇಬನ್ನು ಹಿಡಿದು ನೋಡಿದಾಗ ಅದರಲ್ಲಿ ವಿಶೇಷವಿದೆ ಎಂದು ಅವನಿಗನಿಸಲಿಲ್ಲ. ಆದರೆ ಮುಗ್ಧ ರೈತನ ಪ್ರೀತಿಯನ್ನು ಶಂಕಿಸಬಾರದು ಎಂಬ ಕಾರಣಕ್ಕೆ ಸಂತೋಷ ವ್ಯಕ್ತಪಡಿಸಿ ‘ನಿಜವಾಗಿಯೂ ಅತ್ಯಮೂಲ್ಯ ಕೊಡುಗೆಯನ್ನೇ ತಂದಿರುವೆ. ಇದಕ್ಕಾಗಿ ನನ್ನಿಂದ ನಿನಗೆ ಏನು ಪ್ರತಿಫಲ ಬೇಕು ಕೇಳು’ ಎಂದು ಹೇಳಿದ.

ರೈತ ಪ್ರತಿಫಲಕ್ಕೆ ಕೈಯೊಡ್ಡದೆ ‘ಎಲ್ಲಾದರೂ ಉಂಟೆ? ಪ್ರೀತಿಯ ಕೊಡುಗೆಗೆ ಪ್ರತಿಫಲ ಸ್ವೀಕರಿಸುವುದು ಉಚಿತವಲ್ಲ’ ಎಂದು ನಿರಾಕರಿಸಿದ.

ಬರಿಗೈಯಲ್ಲಿರೈತನನ್ನು ಕಳುಹಿಸಲು ಅರಸನ ಮನವೊಪ್ಪದೆ ಮಂತ್ರಿಗಳೊಂದಿಗೆ ಸಮಾಲೋಚಿಸಿದಾಗ ಮಂತ್ರಿಗಳು ‘ಆತ ಕಾಲಿಗೆ ಹಾಕಲು ಒಳ್ಳೆಯ ಪಾದರಕ್ಷೆಗಳು ಕೂಡ ಇಲ್ಲದೆ ಕಷ್ಟಪಟ್ಟು ನಡೆದು ಇಲ್ಲಿಗೆ ಬಂದಿದ್ದಾನೆ.

ಅವನಿಗೆ ಸವಾರಿಗೆ ಯೋಗ್ಯವಾದ ಒಳ್ಳೆಯ ಕುದುರೆ ಕೊಡಬೇಕು. ಕುದುರೆಯ ಮೇಲೆ ಅದಕ್ಕೆ ಹೊರಲು ಸಾಧ್ಯವಿರುವಷ್ಟು ಚಿನ್ನದ ನಾಣ್ಯಗಳ ಮೂಟೆಯನ್ನಿರಿಸಿದರೆ ಆತ ಸುಖದಿಂದ ಬದುಕಲು ನೆರವಾಗುತ್ತದೆ’ ಎಂದು ಹೇಳಿದರು.

ಹೀಗೆ ಅರಸನು ಕೊಡುಗೆಯಾಗಿ ನೀಡಿದ ಕುದುರೆಯ ಮೇಲೆ ಕುಳಿತುಕೊಂಡು ರೈತ ಮನೆಯ ದಾರಿ ಹಿಡಿದ. ಆತನ ಮನೆಯ ಪಕ್ಕದಲ್ಲಿ ಒಬ್ಬ ಶ್ರೀಮಂತ ರೈತನಿದ್ದ. ಅವನು ಯಾರಿಗೂ ಕೊಳೆತ ಹಣ್ಣು ಕೂಡ ಉಚಿತವಾಗಿ ಕೊಡುವವನಲ್ಲ.

ಆತ ಒಳ್ಳೆಯ ಕುದುರೆಯನ್ನೇರಿಕೊಂಡು ಬರುತ್ತಿರುವ ಬಡ ರೈತನನ್ನು ಕಂಡು ಬೆರಗಾಗಿ ಅವನನ್ನು ತಡೆದು ನಿಲ್ಲಿಸಿ ‘ನಿನ್ನೆ ತನಕ ಹೊಲ ಉಳಲು ಮುದಿ ಎತ್ತನ್ನು ಕೊಳ್ಳಲು ನಿನ್ನ ಬಳಿ ಶಕ್ತಿಯಿರಲಿಲ್ಲ.

ಆದರೆ ಇಂದು ಲಕ್ಷ ಲಕ್ಷ ಬೆಲೆ ಬಾಳುವ ಕುದುರೆಯ ಮೇಲೆ ಕುಳಿತುಕೊಂಡು ಬರುತ್ತಾ ಇದ್ದೀ ಅಂದರೆ ಏನು ಸಮಾಚಾರ?’ ಎಂದು ಕೇಳಿದ. ಅದಕ್ಕೆ ರೈತ ‘ಇದು ಪ್ರಾಮಾಣಿಕವಾಗಿಯೇ ದೊರಕಿದೆ. ನನ್ನ ತೋಟದಲ್ಲಿ ಕೆಂಪು ಬಣ್ಣದ ದೊಡ್ಡ ಸೇಬು ಆಗಿತ್ತಲ್ಲ.

ಅದು ಬಹಳ ಅಪೂರ್ವವಾದುದೆಂದು ನನಗೆ ಗೊತ್ತಾಗಿ ಅದನ್ನು ಅರಸರಿಗೆ ಉಡುಗೊರೆಯಾಗಿ ಕೊಟ್ಟೆ. ಅವರು ನನಗೆ ಈ ಕುದುರೆ ಕೊಟ್ಟರು ಮತ್ತು ಬಂಗಾರದ ನಾಣ್ಯಗಳ ಮೂಟೆಯನ್ನೂ ಹೊರಿಸಿ ಕಳುಹಿಸಿದರು’ ಎಂದ.

ಶ್ರೀಮಂತನು ತನ್ನ ತೋಟದಲ್ಲಿ ಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾಗಿರುವ ಸೇಬು ಹಣ್ಣುಗಳು ಬೇಕಾದಷ್ಟಿವೆ. ಒಂದು ಹಣ್ಣಿಗೆ ಒಂದು ಕುದುರೆ, ಒಂದು ಮೂಟೆ ಚಿನ್ನ ಸಿಗುವುದಾದರೆ ತನ್ನ ಮನೆಯನ್ನು ಅದರಿಂದಲೇ ತುಂಬಿಸಬಹುದು ಎಂದು ಲೆಕ್ಕ ಹಾಕಿದ ಅವನು ಚಂದಚಂದದ ಸೇಬು ಹಣ್ಣುಗಳನ್ನು ಕೊಯ್ಯಿಸಿ ಗಾಡಿ ತುಂಬ ಹೇರಿಕೊಂಡು ಅರಸನ ಸನ್ನಿಧಿಗೆ ಹೋಗಿ ‘ನಾನು ಬಡ ರೈತ.

ನನ್ನ ತೋಟದಲ್ಲಿ ಅತ್ಯಮೂಲ್ಯವಾದ ಸೇಬು ಹಣ್ಣುಗಳು ರಾಶಿರಾಶಿಯಾಗಿ ಬೆಳೆದಿವೆ. ಇದು ಯೋಗ್ಯರಾದವರ ಬಳಿಗೆ ಸೇರಬೇಕು ಎಂಬ ಆಶಯದಿಂದ ಎಲ್ಲವನ್ನೂ ಕೊಯ್ಯಿಸಿ ತಮಗೆ ಸಮರ್ಪಿಸಲು ತಂದಿದ್ದೇನೆ’ ಎಂದ.

ಅದಕ್ಕೆ ಅರಸ ‘ತುಂಬಾ ಸಂತೋಷವಾಯಿತು. ಈ ಹಣ್ಣುಗಳಿಗಾಗಿ ನೀನು ಯಾವ ಪ್ರತಿಫಲ ಬೇಕು ಎಂದು ಬಯಸಿದರೂ ಅದನ್ನು ಕೊಡುವ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದ.

ಅದಕ್ಕೆ ರೈತ ‘ನಾನು ಇದನ್ನು ತಂದಿದ್ದು ಪ್ರತಿಫಲದ ಬಯಕೆಯಿಂದ ಅಲ್ಲವೇ ಅಲ್ಲ. ನನಗೆ ಏನೂ ಬೇಡ’ ಎಂದು ಹೇಳಿದಾಗ ಅರಸ ‘ಪ್ರಜೆಗಳಿಂದ ನಾನು ಯಾವ ವಸ್ತುವನ್ನೂ ಉಚಿತವಾಗಿ ಸ್ವೀಕರಿಸುವುದಿಲ್ಲ. ಅದಕ್ಕೆ ಪ್ರತಿಫಲ ಕೊಡಲೇಬೇಕಾಗುತ್ತದೆ. ಏನು ಬೇಕಿದ್ದರೂ ಕೇಳು. ಕೊಡುತ್ತೇನೆ’ ಎಂದ.

ಶ್ರೀಮಂತ ರೈತ ಮನಸ್ಸಿನಲ್ಲೇ ಸಂತೋಷಪಟ್ಟು ‘ಅರಸರು ಪ್ರೀತಿಯಿಂದ ಏನು ಕೊಟ್ಟರೂ ಅದನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ. ಗಾಡಿ ತುಂಬ ಹಣ್ಣು ತಂದಿರುವ ಇವನು ಬಡವನಲ್ಲ ಎಂದು ನಿರ್ಧರಿಸಿ ಅರಸ ಆತನ ಬೆರಳುಗಳಲ್ಲಿ ಉಂಗುರಗಳನ್ನು ಧರಿಸಿರುವ ಗುರುತನ್ನು ಕಂಡು ಆತ ದುಡಿಯುವವನೂ ಅಲ್ಲ ಅನಿಸಿತು.

ಆತ ಬಡ ರೈತ ತಂದುಕೊಟ್ಟಿದ್ದ ಸೇಬು ಹಣ್ಣನ್ನು ಒಳಗಿನಿಂದ ತರಿಸಿ ಶ್ರೀಮಂತ ರೈತನ ಕೈಯಲ್ಲಿಟ್ಟು ‘ಇದು ನನಗೆ ತುಂಬಾ ಪ್ರೀತಿಯ ಹಣ್ಣು. ಬಡ ರೈತನೊಬ್ಬನ ಶ್ರಮದ ಫಲ. ಇದರ ಬೆಲೆ ಕಟ್ಟಲಾಗದು. ಇದನ್ನು ತೆಗೆದುಕೊಂಡು ಹೋಗು’ ಎಂದು ಹೇಳಿದಾಗ ಶ್ರೀಮಂತ ರೈತ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಬಂದ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button