ಕಥೆ

ಆತ್ಮವಿಶ್ವಾಸದ ಗಣಿ ಅರುಣ್ ನಂದಗಿರಿ ನಿಮ್ಗೆ ಗೊತ್ತೆ.?

ಆತ್ಮವಿಶ್ವಾಸದ ಗಣಿ ಅರುಣ್ ನಂದಗಿರಿ

ಎಲ್ಲಾ ರೀತಿಯಲ್ಲಿ ಸಮರ್ಥರಾಗಿದ್ದೂ ಒಮ್ಮಿಂದೊಮ್ಮೆಗೆ ಸಮಸ್ಯೆ ಎದುರಾದಲ್ಲಿ ತನ್ನಿಂದೇನಾಗದು ಎಂದು ಕೈಚೆಲ್ಲಿ ಕುಳಿತು ಕೊಳ್ಳುವವರೇ ಹೆಚ್ಚು. ಇನ್ನು ಕೆಲವರಂತೂ ಬದುಕೇ ಬೇಡವೆಂದು ದೇಹವನ್ನು ತ್ಯಜಿಸಲು ಮುಂದಾ ಗುತ್ತಾರೆ. ಆದರೆ ಹುಟ್ಟಿದಾರಭ್ಯ ಅಂಗವಿಕಲರಾಗಿದ್ದರೂ ಆ ನೋವನ್ನು ತಮ್ಮೊಳಗಿರುವ ಅದ್ಭುತ ಕಲಾವಿದನ ಮೂಲಕ ಮರೆಯುತ್ತಿದ್ದಾರೆ ವ್ಯಂಗ್ಯಚಿತ್ರಕಾರ ಅರುಣ್.

ನಾವು ಏನೇ ಸಾಧನೆ ಮಾಡಬೇಕಾದರೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಸಾಧಿಸಲು ತೀರಾ ಪರದಾಡಬೇಕಾಗುತ್ತದೆ. ವ್ಯಕ್ತಿ ದೈಹಿಕವಾಗಿ ಅಂಗವಿಕಲನಾದರೂ ಮಾನಸಿಕವಾಗಿ ಆತನಲ್ಲಿ ಆತ್ಮವಿಶ್ವಾಸ ವಿದ್ದಾಗ ಏನನ್ನು ಬೇಕಾದರೂ ಸಾಧಿಸಬಹುದು. ಈ ಮಾತಿಗೆ ಸಾಕ್ಷಿ ಎಂಬಂತೆ ನಮ್ಮ ಮಧ್ಯೆಯೇ ಇರುವ ಕಲಾವಿದ ಅರುಣ್ ನಂದಗಿರಿ. ಹೊರಗಿನ ವಿದ್ಯಮಾನಗಳ ಬಗ್ಗೆ ಸ್ವತಃ ಓಡಾಡಿ ಅರಿಯಲಾಗದಿದ್ದರೂ ಒಬ್ಬ ಕಲಾವಿದನಾಗಿ ಆತನ ಆತ್ಮವಿಶ್ವಾಸವು ಹುಬ್ಬೇರಿಸುವಂತಿದೆ.

ಕೋಟೆ ಕೊತ್ತಲೆಗಳ ನಗರಿ ರಾಯಚೂರಿನ ಅರುಣ್ ನಂದಗಿರಿ ಓರ್ವ ಪ್ರಖ್ಯಾತ ವ್ಯಂಗ್ಯಚಿತ್ರಕಾರ. ಇವರ ವ್ಯಂಗ್ಯಚಿತ್ರಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಈ ವ್ಯಂಗ್ಯಚಿತ್ರವನ್ನು ನೋಡಿ ನೀವೂ ನಕ್ಕಿರಬಹುದು. ಆದರೆ ಅರುಣ್‌ನ ಹಿಂದಿನ ವ್ಯಥೆ ಅನೇಕರಿಗೆ ತಿಳಿದಿರಿಲಿಕ್ಕಿಲ್ಲ. 36 ರ ಹರೆಯದ ಅರುಣ್ ಗೆ ಹುಟ್ಟಿನಿಂದಲೂ ದೇಹ ಅತಿಕುಬ್ಜಗೊಂಡು, ಅಂಗವೈಕಲ್ಯತೆಗೆ ಒಳಗಾಗಿದ್ದಾರೆ. ವೈದ್ಯಕೀಯ ಕ್ಷೇತ್ರ ಈ ರೋಗಕ್ಕೆ ಆಸ್ಟ್ರೋಜನಿಟಿಕ್ ಇಂಫರ್ಫೆಕ್ಟ್ ಎನ್ನು ತ್ತದೆ. ಈ ಕಾಯಿಲೆಯು ಅರುಣನನ್ನು ನಾಲ್ಕು ಗೋಡೆಯ ಮಧ್ಯೆಯೇ ಇರುವಂತೆ ಮಾಡಿದೆ.

ಹಾಗಂತ ಅರುಣ್ ಪ್ರತಿಭೆಗೆ ಇವರ ಅಂಗವೈಕಲ್ಯವೇನು ತೊಡಕುಂಟುಮಾಡಿಲ್ಲ. ಮಲಗಿದ್ದಲ್ಲಿಯೇ ಮಲಗಿದ್ದರೂ ಇವರ ವ್ಯಂಗ್ಯಚಿತ್ರಗಳು ಮಾತ್ರ ಇಡೀ ನಾಡನ್ನೇ ಸುತ್ತುತ್ತಿವೆ. ಅರುಣ್ ನಡೆಯಲಾರರು, ಕುಳಿತುಕೊಳ್ಳಲಾರರು. ಅಲುಗಾಡದೇ ಒಂದೇ ಕಡೆ ಮಲಗಿದ್ದಲ್ಲಿಯೇ ಮಲಗಬೇಕು. ಈ ರೋಗದಿಂದ ನೋಡಲು ಪುಟ್ಟ ಪಾಪುವಿನಂತೆ ಕಾಣುವ ಇವರ ದೇಹ ಬಹುತೇಕ ಅಂಗವಿಕಲಗೊಂಡಿದೆ. ಈ ಅವಸ್ಥೆಯಲ್ಲಿಯೇ ಎಲ್ಲರೂ ನಕ್ಕು ನಲಿಸುವ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾರೆ.

ಮನದಲ್ಲಿ ಹೇಳಿಕೊಳ್ಳಲಾಗದ ನೋವು ತುಂಬಿಕೊಂಡಿದ್ದರೂ ಅದನ್ನು ಹೊರ ಸೂಸದೇ ಅದನ್ನೇ ವ್ಯಂಗ್ಯಚಿತ್ರಗಳಾಗಿ ಪರಿವರ್ತನೆ ಮಾಡಿ ಎಲ್ಲವನ್ನೂ ಮರೆಯಲು ಯತ್ನಿಸುತ್ತಾರೆ. ತಂದೆ-ತಾಯಿ, ಅಣ್ಣಂದಿರು, ಅಕ್ಕಂದಿರ ಪ್ರೀತಿ, ಮಮತೆ ಅರುಣ್‌ರಲ್ಲಿನ ಕೀಳರಿಮೆ ಯನ್ನೇ ತೊಡೆದುಹಾಕಿದೆ. ಎಲ್ಲವನ್ನೂ ಇವರು ಮೆಟ್ಟಿ ನಿಲ್ಲಲು ಸಹಕಾರಿಯಾಗಿದೆ.

ಸ್ನೇಹಿತರ ನೆರವಿನಿಂದ ಅರುಣ್ ಕಂಡ ಪ್ರಪಂಚ ಎಂಬ ವ್ಯಂಗ್ಯಚಿತ್ರ ಪುಸ್ತಕ ಹೊರತಂದಿದ್ದಾರೆ. ರಾಯಚೂರಿನ ಜಿಲ್ಲಾಡಳಿತ ಇವರ ಪ್ರತಿಭೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ರೇಖಾಚಿತ್ರ, ಕವನ, ಇತರೆ ಲೇಖನಗಳನ್ನು ಬರೆಯುವ ಅರುಣ್‌ಗೆ ಸ್ಥಳೀಯ ಪತ್ರಿಕೆ ಇಪ್ಪತ್ತು ವರ್ಷಗಳ ಹಿಂದೆಯೇ ವೇದಿಕೆ ನೀಡಿ ಪ್ರೋತ್ಸಾಹಿಸಿದೆ.

ಸದಾ ಕಾಲ ಮಲಗಿಯೇ ಇರುವ ಅರುಣ್ ಟಿವಿ, ದಿನಪತ್ರಿಕೆ ಓದುವುದರ ಮೂಲಕ ಸಮಯ ಕಳೆಯುತ್ತಾರೆ. ನನಗೆ ಅನುಕಂಪ ಬೇಡ ಅವಕಾಶ ಕೊಡಿ ಅನ್ನುವುದು ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಕ್ರಿಯಾಶೀಲರಾಗಿರುವ ಸ್ವಾಭಿಮಾನಿ ಅರುಣ್‌ರ ಮಾತು.

ಇವರಲ್ಲಿರುವ ಆಶಾಭಾವನೆಯಂತೂ ಯಾವ ಸಮಸ್ಯೆಗೂ ಕುಂದಲಾರದಂತದ್ದು. ಹೊರಗಿನ ಪ್ರಪಂಚದ ಬಗೆಗೂ ಬಹಳಷ್ಟು ಕುತೂಹಲ, ಆಸಕ್ತಿಯನ್ನು ಹೊಂದಿದ್ದು ತಮ್ಮ ಸುತ್ತಮುತ್ತಲಿನ ಜನರಿಂದಲೇ ಎಲ್ಲಾ ವಿಷಯಗಳನ್ನು ಕೇಳಿ ತಿಳಿದು ಕೊಳ್ಳುತ್ತಾರೆ. ಅಂಗವೈಕಲ್ಯತೆ ಎನ್ನುವುದು ಅದು ದೇಹಕ್ಕೆ ಸಂಬಂಧಿಸಿದ್ದು, ಮನಸ್ಸಿಗಲ್ಲ ಎನ್ನುವ ಅರುಣ್‌ರ ಜೀವನೋತ್ಸಾಹ ಇತರ ಅಂಗವಿಕಲರಿಗೆ ಅಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ಮಾದರಿಯಾಗಿದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button