ಕೇಂದ್ರ ಸರ್ಕಾರದ ಅನೀತಿಯಿಂದ ದೇಶದಲ್ಲಿ ಅಶಾಂತಿ – ಅಮುಲ್ಯ ಆರೋಪ
ಶಹಾಪುರಃ ಸಂವಿಧಾನ ರಕ್ಷಿಸಿ ಆಂದೋಲನಾ
ಶಹಾಪುರಃ ಜಾತಿ, ಧರ್ಮದ ಹೆಸರಿನಲ್ಲಿ ಪೌರತ್ವ ನೀತಿ ಜಾರಿಗೊಳಿಸಿದ ಕೇಂದ್ರ ಸರ್ಕಾರ ಅನೀತಿಗೆ ಧಿಕ್ಕಾರ ಹೇಳಬೇಕಿದೆ. ದೇಶದಲ್ಲಿ ಅಶಾಂತಿ ಅಸಮಧಾನಕ್ಕೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡೆ ಕಾಯ್ದೆಯೇ ಕಾರಣವೆಂದು ಕುಮಾರಿ ಅಮುಲ್ಯ ಆರೋಪಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ರವಿವಾರ ಅಂಬೇಡ್ಕರ ಅಭಿಮಾನಿಗಳ ಬಳಗದಿಂದ ನಡೆದ ಸಂವಿಧಾನ ರಕ್ಷಿಸಿ ಆಂದೋಲನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ಕೇಂದ್ರದ ಮೋದಿ ಸರ್ಕಾರ ಭಾರತ ದೇಶವನ್ನು ಒಡೆದಾಳುವ ನೀತಿ ಅನುಸರಿಸುತ್ತಿದೆ. ಇದರಿಂದ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಸಂವಿಧಾನಕ್ಕೆ ಧಕ್ಕೆಯಾದಲ್ಲಿ ದೇಶದಲ್ಲಿ ರಕ್ತಪಾತವಾದರೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು. ದೇಶದ ಜನರು ಸೌಹಾರ್ಧತೆಯಿಂದ ಬದುಕುತ್ತಿದ್ದಾರೆ. ಕೇಂದ್ರ ಸರ್ಕಾರ ಇಲ್ಲದ ಕಾನೂನು ರಚಿಸುವ ಮೂಲಕ ಅಶಾಂತಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ಪ್ರಗತಿಪರ ಚಿಂತಕ ಮಹೇಂದ್ರಕುಮಾರ ಮಾತನಾಡಿ, ಜಾತಿ ಅವ್ಯವಸ್ಥೆ ಮೂಲಕ ದೇಶವನ್ನು ಹದಗೆಡಿಸುತ್ತಿರುವ ಕೋಮುವಾದಿಗಳ ವಿರುದ್ಧ ಉಗ್ರ ಹೋರಾಟ ಅಗತ್ಯವಿದೆ. ಧರ್ಮಗಳ ಸಂಕೋಲೆಯಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಕೊಂಡಯ್ಯಲಾಗುತ್ತಿದೆ. ಹೀಗಾಗಿ ದೇಶದಲ್ಲಿ ಸಾಮಾಜಿಕ ಆರೋಗ್ಯ ಸ್ಥಿತಿ ಕುಸಿಯುತ್ತಿದೆ ಎಂದು ಆರೋಪಿಸಿದರು.
ಜನ ಸಾಮಾನ್ಯರಿಗೆ ದುರ್ಭೀತಿ ನೀಡುವ ಹುನ್ನಾರದಲ್ಲಿ ಕೇಂದ್ರ ಸರ್ಕಾರದ ಆಡಳಿತ ಮುಂದುವರೆದಿದೆ. ಸಂವಿಧಾನ ರಕ್ಷಣೆ ಅಗತ್ಯವಿದೆ. ಆ ನಿಟ್ಟಿನಲ್ಲಿ ಯುವ ಸಮೂಹದ ಸಂಘಟಿತ ಹೋರಾಟ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಖಾಲಿದ್, ರುಕ್ಸಾನ ಬೇಗಂ, ಅಹಿಂದ ನಾಯಕರಾದ ಶರಣಪ್ಪ ಸಲಾದಪುರ, ಆರ್.ಚೆನ್ನಬಸ್ಸು, ಡಾ.ಬಸವರಾಜ ಇಜೇರಿ, ಬಾಬಾಖಾನ್, ಸಣ್ಣ ನಿಂಗಣ್ಣ ನಾಯ್ಕೋಡಿ, ಟಿ.ಶಿಶಧರ, ಸಯ್ಯದ್ ಖಾಲಿದ್, ಶಿವುಕುಮಾರ ತಳವಾರ್, ಸಯ್ಯದ್ ಫಾರುಖ್, ಸಯ್ಯದ್ ಅಜುಮುದ್ದೀನ್, ನಜೀರಹ್ಮದ್ ಖಾನ್ ಮಾತನಾಡಿದರು.
ವೇದಿಕೆ ಮೇಲೆ ಗೋಗಿ ದರ್ಗಾ ಷರೀಫ್ ಮುತಾವಲಿ ಸಜ್ಜಾದೆಯವರು ಸಾನ್ನಿಧ್ಯವಹಿಸಿದ್ದರು. ಸಯ್ಯದ್ ಮುಸ್ತಫಾ ದರ್ಬಾನ್, ಸಯ್ಯದ್ ಮುಸ್ತಾಫ್ ಮಕ್ಕಾ, ರಾಮಣ್ಣ ಸಾದ್ಯಾಪುರ, ಶಿವಪುತ್ರ ಜವಳಿ, ಸಾಯಬಣ್ಣ ಪುರ್ಲೆ, ಶರಣಪ್ಪ ಹೊಸಮನಿ, ಎಸ್.ಎನ್.ಖಾದ್ರಿ, ಮೋನಪ್ಪ ಹೊಸಮನಿ ಉಪಸ್ಥಿತರಿದ್ದರು.