ಬಸವಭಕ್ತಿಸಂಸ್ಕೃತಿ

ಸಗರನಾಡಿನ ಅಧಿದೇವತೆ ಬಲಭೀಮರಾಯನ ಜಾತ್ರೆ

ಬಲಭೀಮೇಶ್ವರ-ಸಂಗಮೇಶ್ವರರ ಪಲ್ಲಕ್ಕಿ ಮೆರವಣಿಗೆ

-ರಾಘವೇಂದ್ರ ಹಾರಣಗೇರಾ

ಜಾತ್ರೆಗಳು ನಮ್ಮ ದೇಶಿಯ ಪರಂಪರೆಯಲ್ಲಿ ಅನೇಕ ಶತಮಾನಗಳಿಂದಲೂ ಆಚರಿಸಿಕೊಂಡು ಬರಲಾಗುತ್ತದೆ. ಈ ಜಾತ್ರೆಗಳು ತನ್ನದೇಯಾದ ಪೌರಾಣಿಕ, ಐತಿಹಾಸಿಕ ಹಿನ್ನಲೆಯನ್ನು ಹೊಂದಿವೆ. ಮತ್ತು ಆಧ್ಯಾತ್ಮಿಕ, ವ್ಯಾಪಾರ, ವ್ಯವಹಾರ ಸಾಮಾಜಿಕ sಸೌಹಾರ್ದತೆ, ಧಾರ್ಮಿಕ, ಸಾಂಸ್ಕ್ರತಿಕ ತಾಣವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ.

ಈ ಹಿನ್ನೆಲೆಯಲ್ಲಿ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯ ಬಲಭೀಮರಾಯನ ಜಾತ್ರೆ ಸಗರನಾಡಿನಲ್ಲಿ ಪ್ರಮುಖವಾಗಿದೆ. ಬಹು ಹಿಂದೆ ಭೀಮರಾಯನ ಗುಡಿ ‘ಅಮಲಾಪುರ’ ಎಂಬ ಹಳ್ಳಿಯಾಗಿತ್ತು ಎಂದು ಹೇಳಲಾಗುತ್ತದೆ. ಬಲಭೀಮರಾಯ ಅಥವಾ ಆಂಜನೇಯ ಈ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೇವರಾಗಿದ್ದನು.

ಅಂದಿನ ಅಮಲಾಪುರ ಎಂಬ ಹಳ್ಳಿ ಇಂದು ಭೀಮರಾಯನಗುಡಿ ಎಂದು ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ. ಈ ಬಲಭೀಮರಾಯನ ದೇವಸ್ಥಾನದ ಸ್ವರೂಪ, ಲಕ್ಷಣಗಳು ಮತ್ತು ಆ ಸ್ಥಳದಲ್ಲಿ ದೊರತಿರುವ ಐತಿಹಾಸಿಕ ಕುರುಹುಗಳು, ಶಾಸನಗಳ ಆಧಾರದ ಮೇಲೆ ಇದೊಂದು ಶೈವ ದೇವಾಲಯವಾಗಿತ್ತೆಂದು ಸಂಶೋದಕ ಡಿ.ಎನ್. ಅಕ್ಕಿಯವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಐತಿಹಾಸಿಕ ಪರಂಪರೆಯ ತಾಣವಾಗಿತ್ತೆಂದು ಮೇಡೊಸ್‍ಟೆಲರನ ಕೃತಿಗಳು ಆಧಾರ ಒದಗಿಸುತ್ತವೆ.

ಪ್ರತಿ ವರ್ಷ ಸಂಕ್ರಾಂತಿಗೆ ಈ ಬಲಭೀಮರಾಯನ ಜಾತ್ರೆ ಬಹುವಿಜೃಂಬಣೆಯಿಂದ ಜರುಗುತ್ತದೆ. ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ ಬಹಳಷ್ಟು ವಿಶಿಷ್ಟತೆಯಿಂದ ನಡೆಯುತ್ತದೆ. ಯಾದಗಿರಿ ತಾಲ್ಲೂಕಿನ ಹುರಸುಗುಂಡಗಿ ಗ್ರಾಮದ ಹತ್ತಿರ ಹರಿಯುವ ಭೀಮಾನದಿಗೆ ಪಲ್ಲಕ್ಕಿ ತೆಗೆದುಕೊಂಡು ಹೋಗಿ ಪವಿತ್ರ ನದಿ ನೀರಿನಿಂದ ಪಲ್ಲಕ್ಕಿ ಹಾಗೂ ಅದರೊಳಗಿರುವ ಬಲಭೀಮರಾಯನ ಮೂರ್ತಿಯನ್ನು ತೊಳೆದು ಪೂಜಾಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಾರೆ.

ಹುರಸುಗುಂಡಗಿ, ಬೇವಿನಹಳ್ಳಿ, ಮಡ್ನಾಳ, ಹಳೆಸಗರ ಮುಂತಾದ ಗ್ರಾಮಗಳಲ್ಲಿ ಪಲ್ಲಕಿ ಮೆರವಣಿಗೆ ಮಾಡುತ್ತಾ ರಾತ್ರಿ 9-10 ಗಂಟೆಗೆ ಶಹಾಪುರ ಪಟ್ಟಣಕ್ಕೆ ಬರುತ್ತಾರೆ. ಅದೇ ರೀತಿಯಾಗಿ ದಿಗ್ಗಿ ಸಂಗಮನಾಥನ ಪಲ್ಲಕ್ಕಿ ಕೂಡ ಅಲ್ಲಿಗೆ ಬಂದು ಸೇರುತ್ತದೆ. ಬಲಭೀಮರಾಯನ ಮತ್ತು ದಿಗ್ಗಿ ಸಂಗಮನಾಥನ ಜೋಡಿ ಪಲ್ಲಕ್ಕಿಗಳನ್ನು ಶಹಾಪುರ ಪಟ್ಟಣದಾದ್ಯಂತ ಮೆರವಣಿಗೆ ಮಾಡುತ್ತಾರೆ.

ಪಟ್ಟಣದಲ್ಲಿ ಬೆಳಗಾಗುವವರೆಗೂ ನಡೆಯುವ ಈ ಪಲ್ಲಕಿ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಭಾಗವಹಿಸುತ್ತಾರೆ. ಭಕ್ತಾದಿಗಳು ಪಲ್ಲಕಿಗೆ ನೈವೆದ್ಯ,ಕಾಯಿ, ಕರ್ಪೂರ ಅರ್ಪಿಸುತ್ತಾರೆ. ಪಲ್ಲಕಿ ಮುಂದುಗಡೆ ಸುಮಾರು 150 ರಿಂದ 200 ಜನ ಗಂಗಾಮತ ಸಮಾಜದ ಪುರುಷರು ದೀವಟಿಗೆಗಳನ್ನು ಹಿಡಿದು ದೇವರಿಗೆ ಬೆಳಕನ್ನು ನೀಡುತ್ತಾರೆ. ಈ ಪಲ್ಲಕಿ ಮೆರವಣಿಗೆಯಲ್ಲಿ ದೀವಟಿಗೆಗಳದ್ದೇ ಒಂದು ವೈಶಿಷ್ಟ್ಯ ಎಂದು ಹೇಳಬಹುದು.

ಬಹು ಹಿಂದಿನಿಂದಲೂ ಗಂಗಾಮತ ಸಮುದಾಯ ಮತ್ತು ಇತರ ಸಮುದಾಯದವರು ತಮ್ಮ ಹಿರಿಯರಿಂದ ದೀವಟಿಗೆ ಹಿಡಿಯುವ ಪೂಜಾ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪಲ್ಲಕ್ಕಿಯ ಉತ್ಸವದಲ್ಲಿ ಡೊಳ್ಳು ಕುಣಿತ, ಹಲಗೆಯ ವಾದನ, ಕರಡಿ ಮಜಲು, ಬ್ಯಾಂಡ್, ಬ್ಯಾಂಜೊ, ಭಜನೆ ಮುಂತಾದ ಕಲೆಗಳು ಪ್ರದರ್ಶನೆಗೊಳ್ಳುತ್ತವೆ.

ಬೆಳಗ್ಗೆ 5 ಅಥವಾ 6 ಗಂಟೆಗೆ ಪಲ್ಲಕ್ಕಿ ಭೀಮರಾಯನಗುಡಿ ತಲುಪುತ್ತದೆ. ದೇವಸ್ಥಾನದ ಸುತ್ತ ಪಲ್ಲಕಿಯನ್ನು ಪ್ರದಕ್ಷಿಣೆಯ ಮಾಡಿದ ನಂತರ ದೆವರ ಹೇಳಿಕೆ-ಕೇಳಿಕೆಗಳು ನಡೆಯುತ್ತವೆ. ಸುತ್ತಮುತ್ತಲಿನ ಸಹಸ್ರಾರು ಜನ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಹೋಗುತ್ತಾರೆ.

ಇಲ್ಲಿ ಯಾವುದೇ ಜಾತಿ, ಮತ, ಪಂಥದ ತಾರತಮ್ಯಗಳಿಲ್ಲ ಜೊತೆಗೆ ಕಟ್ಟುಪಾಡುಗಳಿಲ್ಲ ಎಲ್ಲರೂ ಸಾಮೂಹಿಕವಾಗಿ ಪಾಲ್ಗೋಳುತ್ತಾರೆ ಎಂದು ಹಿರಿಯರಾದ ಸಣ್ಣನಿಂಗಪ್ಪ ನಾಯ್ಕೋಡಿ ಅವರು ಅಭಿಪ್ರಾಯಪಡುತ್ತಾರೆ.
ಜಾತ್ರೆಯಲ್ಲಿ ಜನರು ತಮ್ಮ ಮನೆಗೆ ಬಂದ ಅತಿಥಿಗಳಿಗೆ ತಿಂಡಿ, ತಿನುಸುಗಳನ್ನು ಕೊಡಿಸುವುದು. ಸ್ತ್ರೀಯರಿಗೆ ಬಳಿ ಹಾಕಿಸುವುದು ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು, ಗೃಹಪಯೋಗಿ ವಸ್ತುಗಳನ್ನು ಕೊಡುಕೊಳ್ಳುವುದು.

ಕೃಷಿಕರು ತಮ್ಮ ಕೃಷಿಗೆ ಸಂಬಂದಿಸಿದ ವಸ್ತುಗಳನ್ನು ಖರಿದಿಸುವುದು ಸಾಮಾನ್ಯವಾಗಿ ಕಾಣುತ್ತೆವೆ. ಜನರು ಜಾತ್ರೆಯಲ್ಲಿ ಮನರಂಜನೆ, ಸಂತೋಷ, ಮೋಜು, ಐಕ್ಯತೆಭಾವ ಮುಂತಾದವುಗಳನ್ನು ಪಡೆಯುತ್ತಾರೆ.
ಜನರಿದ್ದರೆ ಜಾತ್ರೆ, ಜನಮರಳೋ ಜಾತ್ರೆ ಮರಳೋ, ಕುಲನೋಡಿ ಹೆಣ್ಣು ತರಬೇಕು, ಹಣನೋಡಿ ಜಾತ್ರೆ ಮಾಡಬೇಕು. ಹಬ್ಬಗಳು ಊಟಕ್ಕೆ ಜಾತ್ರೆಗಳು ನೋಟಕ್ಕೆ ಮುಂತಾದ ಜಾನಪದ, ಗಾದೆ ಮಾತುಗಳು, ನುಡಿಗಟ್ಟುಗಳು ಜಾತ್ರೆಯ ಸ್ವರೂಪವನ್ನು ತಿಳಿಸುತ್ತವೆ.

ಸಮಕಾಲೀನತೆಯ ಸಂದರ್ಭ, ಸಂಪ್ರದಾಯಬದ್ದವಾದ ಆಚರಣೆಯ ಕಾಲವಲ್ಲ. ಆಧುನಿಕತೆಯಲ್ಲಿ ಅತ್ಯಂತ ಸೂಕ್ಷ್ಮವಾದ ರೂಪಾಂರಗಳಾಗುತ್ತವೆ. ಆದರೂ ಸಾಮಾಜಿಕ, ಸಾಂಸ್ಕ್ರತಿಕ ಮತ್ತು ಧಾರ್ಮಿಕ ಅಂಶಗಳ ಮೂಲ ನೆಲೆಯಲ್ಲಿ ಕೆಲವು ಬದಲಾವಣೆಗಳಿಗೆ ಅವಕಾಶ ಮಾಡಿಕೊಂಡು ಕೆಲವು ಹೊಸನವನ್ನು ಅಪ್ಪಿಕೊಂಡು ಹೊಸ ದಿಗಂತದತ್ತ ದಾಪುಗಾಲು ಹಾಕುತ್ತಾ ಜಾತ್ರೆಗಳು ತನ್ನ ಅಖಂಡತೆ ಒಳಗೆ ಸಾಮಾಜಿಕ, ಸಾಂಸ್ಕ್ರತಿಕ ಧಾರ್ಮಿಕ ಮತ್ತು ಆರ್ಥಿಕ ಅಂಶಗಳನ್ನು ಅಡಗಿಸಿಕೊಂಡು ಎಲ್ಲಾ ಜನಪದ ವರ್ಗದವರನ್ನು ಸಮನ್ವಯತೆಯ ತೋಳ್ ತೆಕ್ಕೆಯಲ್ಲಿ ಸೇರಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಇಂತಹ ಶ್ಲಾಘನೀಯ ಪ್ರಯತ್ನಕ್ಕೆ ಭೀಮರಾಯನಗುಡಿ ಜಾತ್ರೆ ಹೊರತ್ತಾಗಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.

-ರಾಘವೇಂದ್ರ ಹಾರಣಗೇರಾ.
ಸಮಾಜಶಾಸ್ತ್ರ ಉಪನ್ಯಾಸಕರು.
ಬಾಪೂಗೌಡ ದರ್ಶನಾಪೂರ ಸ್ಮಾರಕ
ಮಹಿಳಾ ಪದವಿ ಕಾಲೇಜು ಶಹಾಪೂರ.

Related Articles

Leave a Reply

Your email address will not be published. Required fields are marked *

Back to top button