ಅಂತೂ ಇಂತು ಜಾಗಕೆ ಬಂತು ವಿಶ್ವಗುರು ಹೊತ್ತ ಅಶ್ವ..!
ಅಂತೂ ಇಂತು ಜಾಗಕೆ ಬಂತು ವಿಶ್ವಗುರು ಹೊತ್ತ ಅಶ್ವ..!
ಶಹಾಪುರ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಸವ ಪುತ್ಥಳಿ ಸ್ಥಾಪನೆ ಕೊನೆಗೂ ಸೋಮವಾರ ರಾತ್ರಿ ನೆರವೇರಿದೆ. ನಗರದ ಬಸವೇಶ್ವರ ವೃತ್ತದ ಮಾರುತಿ ರಸ್ತೆ ಪ್ರವೇಶ ಮಾರ್ಗ ಮಧ್ಯೆ ಬಸವ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಭದ್ರಬುನಾದಿಯ ಕಟ್ಟೆ ಮೇಲೆ ಬಸವೇಶ್ವರರನ್ನು ಹೊತ್ತ ಅಶ್ವ ನಿಂತಿರುವ ಆಕರ್ಷಕ ಪ್ರತಿಮೆ ಎಲ್ಲರ ಗಮನ ಸೆಳೆಯುತ್ತಿದೆ.
ಕಳೆದ ಮೂರು ವರ್ಷದ ಹಿಂದೆಯೇ ಬಸವೇಶ್ವರರ ಪ್ರತಿಮೆ ಪುರ ಪ್ರವೇಶಿಸಿತ್ತು. ಆ ಸಂದರ್ಭದಲ್ಲಿ ಅದ್ದೂರಿ ಮೆರವಣಿಗೆಯೂ ಮಾಡಲಾಗಿತ್ತು. ಆದರೆ ವೃತ್ತದಲ್ಲಿ ಅದನ್ನು ಸ್ಥಾಪಿಸಲು ಹಲವು ಅಡೆತಡೆ ಎದುರಾಗಿದ್ದವು. ಸೂಕ್ತ ಸ್ಥಳವಕಾಶದ ಕೊರತೆ ಹಿನ್ನೆಲೆಯಲ್ಲಿ ಪ್ರತಿಮೆ ಸ್ಥಾಪನೆ ವಿಳಂಬವಾಗಿತ್ತು.
ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕವು ಹಲವು ಸಭೆಗಳನ್ನು ಕರೆದರೂ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಕೊನೆಗೂ ಶಾಸಕ ಗುರು ಪಾಟೀಲ್ ಮತ್ತು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಸಹಕಾರದಿಂದ ಅಶ್ವಾರೂಢ ಬಸವ ಪ್ರತಿಮೆ ಬಸವೇಶ್ವರ ವೃತ್ತದಲ್ಲಿರುವ ತನ್ನ ಜಾಗಕ್ಕೆ ಬಂದು ಕುಳಿತಿದೆ.
ಮಂಗಳವಾರ ಬೆಳಗ್ಗೆ ಸಾಕಷ್ಟು ಜನರು ಪ್ರತಿಮೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರತಿಮೆ ಸ್ಥಾಪನೆಗೆ ಸೂಕ್ತ ಸ್ಥಳ ಮತ್ತು ಸ್ಥಾಪನೆಗೆ ಬೇಕಾದ ಭದ್ರ ಬುನಾದಿ ಕಟ್ಟೆಯನ್ನು ಪೌರಾಡಳಿತ ಇಲಾಖೆ ಅಧಿಕಾರಿಗಳು ಮತ್ತು ಭೂ-ನಿಗಮ ಅಧಿಕಾರಿ ಧನಂಜಯವರು ಸಮರ್ಪಕವಾಗಿ ನಿರ್ಮಿಸಿ ಕೊಟ್ಟಿದ್ದಾರೆ.
ಪಂಚಲೋಹದಿಂದ ತಯಾರಾದ ಅಶ್ವಾರೂಢ ಪ್ರತಿಮೆ
ಸೋಲಾಪುರದಲ್ಲಿ ಪ್ರತಿಮೆ ತಯಾರಿಸಲಾಗಿದ್ದು, ರಾಂಪೂರೆ ಮತ್ತು ಅವರ ಕಲಾತಂಡ ಪ್ರತಿಮೆಗೆ ರೂಪ ನೀಡಿದೆ. ಪಂಚಲೋಹದಿಂದ ತಯಾರಿಸಲಾದ ಈ ಪ್ರತಿಮೆ ಒಟ್ಟು 20 ಕ್ವಿಂಟಲ್‍ಗೂ ಹೆಚ್ಚು ಭಾರ ಹೊಂದಿದೆ. 17-18 ಅಡಿ ಎತ್ತರವಿದ್ದು, 6-7 ಅಡಿ ಅಗಲವಿದೆ. ಒಟ್ಟು 25-26 ಲಕ್ಷ ರೂ. ವೆಚ್ಚ ತಗುಲಿದೆ ಎಂದು ತಿಳಿದುಬಂದಿದೆ.
ಶೀಘ್ರದಲ್ಲಿಯೇ ಲೋಕಾರ್ಪಣೆ
ಪ್ರತಿಮೆ ಸ್ಥಾಪನೆ ವೇಳೆ ಕ್ರೇನ್ ಬಳಕೆ, ಮತ್ತು ಅದಕ್ಕೆ ಬೇಕಾದ ಕಟ್ಟಡ ಸಾಮಾಗ್ರಿ, ಇತರೆ ಕೆಲಸವಿರುವದರಿಂದ ಜನಸ್ತೋಮವಿರುವಾಗ ಪ್ರತಿಮೆ ಕೂಡಿಸಲು ಅಡಚಣೆಯಾಗುತ್ತದೆ. ಹೀಗಾಗಿ, ರಾತ್ರಿ ಸಮಯದಲ್ಲಿ ಟ್ರಾಫಿಕ್ ಇರುವುದಿಲ್ಲ. ಸಮಸ್ಯೆಯಾಗಲ್ಲ ಎಂಬ ಕಾರಣಕ್ಕೆ ನಿನ್ನೆ ರಾತ್ರಿ ವೇಳೆ ಪ್ರತಿಮೆ ಕೂಡಿಸಲಾಗಿದೆ. ಶೀಘ್ರದಲ್ಲಿ ಅ.ಭಾ.ವಿ.ಮ.ಸಭಾವತಿಯಿಂದ ಸಭೆ ಕರೆದು ಬಸವ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ದಿನಾಂಕ ಫಿಕ್ಸ್ ಮಾಡಲಾಗುವುದು.
–ಬಸವರಾಜೇಂದ್ರ ದೇಶಮುಖ. ಅ.ಭಾ.ವಿ.ಮ.ಸಭಾ ತಾಲೂಕು ಘಟಕ ಅಧ್ಯಕ್ಷರು. ಶಹಾಪುರ
*****
ಬಸವ ಪ್ರತಿಮೆ ಸ್ಥಾಪನೆಗೆ ಸಾಕಷ್ಟು ಹೋರಾಟ ಮಾಡಿದ್ದೆವು. ಗದ್ದುಗೆಯಲ್ಲಿ ನಿಂತ ಬಸವ ಪುತ್ಥಳಿ ಕಂಡ ತಕ್ಷಣ ಮನಸ್ಸು ಮರಗುತಿತ್ತು. ಮಾಜಿ ಮತ್ತು ಹಾಲಿ ಶಾಸಕರ ಸಮನ್ವಯ, ಸಹಕಾರದಿಂದ ಇಂದು ಬಸವ ಪ್ರತಿಮೆಗೆ ಸ್ಥಳವಕಾಶ ಸಿಕ್ಕಿದೆ. ಸರ್ವ ಜನಾಂಗ, ಬಸವ ಅಭಿಮಾನಿಗಳ ಆಗ್ರಹಕ್ಕೆ ಮಣಿದು ಅಧಿಕಾರಿಗಳ ಸಹಕಾರದ ಜತೆಗೆ ಸ್ಥಳೀಯ ಪತ್ರಕರ್ತರು ಮೇಲಿಂದ ಮೇಲೆ ಬರೆದ ಹರಿತವಾದ ಸುದ್ದಿ, ಲೇಖನದ ಫಲವೇ ಇಂದು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬಂದು ನಿಂತಿದೆ. ಪ್ರತಿಮೆ ಸ್ಥಾಪನೆ ನಮಗೆಲ್ಲಾ ಸಂತಸ ಮೂಡಿಸಿದೆ.
-ಶರಣು ಬಿ. ಗದ್ದುಗೆ. ಉ.ಕ ಕರವೇ ಅಧ್ಯಕ್ಷರು. ಶಹಾಪುರ.
*****