ಕಾವ್ಯ
ಒತ್ತಡ ಮರೆಸೀತು ಜೀವದ ಮೌಲ್ಯ ಜೋಕೆ..!
ಧೀರ್ಘ ಕಾಲದ ಅಂತರ ಆಗಿಸುವುದು ದೂರ ಅನಿವಾರ್ಯ ಪುನಶ್ಚೇತನ ಆಗಾಗ/
ಬಾಡದಂತೆ ಸದೃಢವಾಗಿ ನಿಲ್ಲಲು ನೀರು ಉಣಿಸುವ ಅಗತ್ಯ ನವಚೇತನ ಆಗಾಗ //
ಆರಂಭದಲ್ಲಿ ಕೆಲವು ಸಂಬಂಧಗಳ ಅಬ್ಬರ ಹುಟ್ಟು ಪರಸ್ಪರರಿಗಾಗಿ ಎನ್ನುವ ಸೆಳೆವು/
ದಿನ ಕಳೆದಂತೆ ಕವಿಯುವ ಮಂಕು ನಿಧಾನ ಸಂಪರ್ಕಕ್ಕೆ ಆಕ್ಸಿಜನ್ ಉತ್ತೇಜನ ಆಗಾಗ//
ಒಂದೇ ತಟ್ಟೆಯಲ್ಲಿ ತಿಂದುಂಡ ಗೆಳೆಯನ ಗತಿ ಕೇಳಿದ ವರ್ಷದ ಬಳಿಕ ನೀವ್ಯಾರು/
ಸಹಜ ಗುಣಗಳ ಅರ್ಥ ನಿರಂತರ ಬಾಂಧವ್ಯ ಅಕ್ಕರೆಯ ಆಗಮನ ಆಗಾಗ//
ಯಾಕೆ ಹೀಗೆ ಹಾಳಾಗುವ ಕಾರಣ ಇಲ್ಲವೆಂಬ ಯೋಚನೆ ವ್ಯರ್ಥ ಶೂನ್ಯ/
ಬಿಡದ ಬಂಧ ಮರೆಯಾಗುವ ಖಯಾಲಿ ಮರೆಯುವ ಮುನ್ನ ನವೀಕರಣ ಆಗಾಗ//
ಯಾಂತ್ರಿಕ ದಿನಚರಿ ಒತ್ತಡಗಳ ಸಬೂಬು ಹೇಳುವ ಅವಕಾಶ ಅನಿರೀಕ್ಷಿತ ಜಂಜಡ/
ಅಗಾಧ ವ್ಯತ್ಯಾಸಗಳ ಪರಿಣಾಮ ತಡೆಗೆ ಅನುರಾಗಗಳ ಪುನರ್ನಿರ್ಮಾಣ ಆಗಾಗ//
ಇರದ ಚಲನೆ ಅದೆಂಥ ಟೊಳ್ಳು ದಿಕ್ಕೆಟ್ಟು ಕುಸಿದ ಗಟ್ಟಿ ಬೆಸುಗೆಯ ನಿರ್ಗಮನ/
ಮೈದಡವಿದ ಒಲುಮೆಯ ಮಾತು ಸಾಕು ಜೀವದ ಮೌಲ್ಯ ಪುನರುಜ್ಜೀವನ ಆಗಾಗ//
–ಬಸವರಾಜ ಕಾಸೆ