ರಾಷ್ಟ್ರ ಸಂರಕ್ಷಣೆಯಲ್ಲಿ ಸೈನಿಕರ ಪಾತ್ರ ಸ್ಮರಣೀಯ-ನ್ಯಾ.ಹುಕ್ಕೇರಿ
ಕಾರ್ಗಿಲ್ ವಿಜಯ ದಿವಸ ಆಚರಣೆ-ವೀರ ಯೋಧರಿಗೆ ಸನ್ಮಾನ
ಯಾದಗಿರಿ,ಶಹಾಪುರಃ ನಮ್ಮ ರಾಷ್ಟ್ರದ ಸಂರಕ್ಷಣೆಗಾಗಿ ತಮ್ಮ ಬದುಕನ್ನು ಮುಡುಪಿಟ್ಟು ಹೋರಾಟ ಮಾಡುವ ಮೂಲಕ ದೇಶದ ಜೊತೆಗೆ ನಮ್ಮೆಲ್ಲರನ್ನು ಕಾಯುವ ಸೈನಿಕರ ಸೇವೆ ಅನನ್ಯವಾದದು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ, ನಿಸರ್ಗ ವಿವಿದ್ದೋದ್ದೇಶ ಸೇವಾ ಸಂಸ್ಥೆ ದೋರನಹಳ್ಳಿ ಮತ್ತು ಡಿಗ್ರಿ ಕಾಲೇಜು, ಪ್ರತೀಕ್ಷಾ ಶೀಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಳಿಸಗರ, ಛಯಾಚಿತ್ರಗಾರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ 20 ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ವೀರಯೋಧರಿಗೆ ಗೌರವ ಸಮರ್ಪಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರ ತ್ಯಾಗ ಬಲಿದಾನಗಳನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ನೆನಪಿಸಿಕೊಳ್ಳಬೇಕು.
ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ಕಾರ್ಗಿಲ್ನ ಪ್ರದೇಶದಲ್ಲಿ ನಮ್ಮ ದೇಶದ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿದ್ದ ವೈರಿಗಳೊಂದಿಗೆ ಭಯೋತ್ಪಾದಕ ಪಾತಾಕಿಗಳೊಡನೆ ಹೋರಾಟ ನಡೆಸುವ ವೀರ ವಿಜಯವನ್ನು ಒದಗಿಸಿಕೊಟ್ಟ ಧೀರ ಸೈನಿಕರನ್ನು ನಾವೆಲ್ಲ ಸ್ಮರಿಸಲೇಬೇಕು.
ತಮ್ಮ ಪ್ರಾಣವನ್ನು ಲೆಕ್ಕಿಸದೆ ಸದಾ ದೇಶದ ಗಡಿ ರಕ್ಷಣೆಯಲ್ಲಿ ಹಲು ರಾತ್ರಿ ಎನ್ನದೆ ಶ್ರಮಿಸುವ ಸೈನಿಕರು ಕಾರ್ಗೀಲ್ ವಿಜಯ ದಿವಸ ಮಾತ್ರ ನನಡೆಯುವದಲ್ಲ. ದಿನ ಪ್ರತಿ ಬೆಳಗ್ಗೆ ಎದ್ದು ದೇವರ ಮುಂದೆ ಕೈಜೋಡಿ ನಮ್ಮ ದೇಶದ ರೈತರಿಗಾಗಿ ಒಂದು ನಿಮಿಷ ಪ್ರಾರ್ಥನೆ ಸಲ್ಲಿಸುವ ರೂಢಿಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಯುವಕರು ಕಾನೂನು ಜ್ಞಾನ ಪಡೆಯುವ ಜೊತೆಗೆ ದೇಶ ಅಭಿಮಾನವನ್ನು ಬೇಳೆಸಿಕೊಳ್ಳಬೇಕು. ಮೊದಲು ದೇಶ ಸೇವೆಗೆ ಪ್ರಾಧಾಣ್ಯತೆ ನೀಡಬೇಕು. ದೇಶ ಉಳಿದಲ್ಲಿ ನಾವೆಲ್ಲ ಉಳಿಯುತ್ತೇವೆ. ಬದುಕುತ್ತೇವೆ ಎಂಬುದನ್ನು ಅರ್ಥೈಸಿಕೊಂಡು ನಡೆಯಬೇಕು ಎಂದರು.
ಯುವಕರು ದೇಶಾಭಿಮಾನವನ್ನು ಬೆಳೆಸಿಕೊಂಡು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ರಾಷ್ಟ್ರದ ಏಕತೆಗೆ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ದೇಶ ಹಲವಾರು ಜನ ವೀರ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಕೀಲ ಆರ್.ಎಮ್.ಹೊನ್ನರಡ್ಡಿ ಕಾನೂನು ಅರಿವು-ನೆರವು ಕುರಿತು ಉಪನ್ಯಾಸ ನೀಡಿದರು. ಮಲ್ಲಯ್ಯ ಪೋಲಂಪಲ್ಲಿ, ಎಸ್.ಬಿ.ನರಸನಾಯಕ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಎಮ್.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಲ್ಲಣ್ಣ ಎಸ್.ರಾಂಪೂರೆ, ಸಿ.ಪಿ.ಐ.ಹನುಮರೆಡ್ಡೆಪ್ಪ, ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ ಮತ್ತು ಅರಣ್ಯ ಇಲಾಖೆಯ ಶ್ರೀಧರ ಯಕ್ಷಂತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.