ಭೀಮಾನದಿ ಪ್ರವಾಹಃ ಹುರಸಗುಂಡಗಿ ಗ್ರಾಮಸ್ಥರಲ್ಲಿ ಆತಂಕ
ಹಳೇ ಗ್ರಾಮ ತೊರೆದು ನವಗ್ರಾಮಕ್ಕೆ ತೆರಳುವಂತೆ ಅಧಿಕಾರಿಗಳ ಸೂಚನೆ
ಸನ್ನತಿ ಬ್ರಿಜ್ ಕಂ ಬ್ಯಾರೇಜ್ ಹಿನ್ನೀರು ಗ್ರಾಮಕ್ಕೆ ನುಗ್ಗುವ ಭೀತಿ
ಯಾದಗಿರಿ, ಶಹಾಪುರಃ ತಾಲೂಕಿನ ಹುರಸಗುಂಡಗಿ ಗ್ರಾಮಕ್ಕೆ ಭೀಮಾನದಿ ಪ್ರವಾಹ ಭೀತಿ ಎದುರಾಗಿದೆ. ಸನ್ನತಿ ಬ್ರೀಜ್ ಕಂ ಬ್ಯಾರೇಜ್ ಹಿನ್ನೀರು ಹುರಸಗುಂಡಗಿ ಗ್ರಾಮ ಸಮೀಪಿಸಿದ್ದು, ಇನ್ನಷ್ಟು ನೀರು ಹರಿದು ಬರುವ ಹಿನ್ನೆಲೆ ಗ್ರಾಮಕ್ಕೆ ನುಗ್ಗುವ ಸಾಧ್ಯತೆ ಇದ್ದು, ಕೂಡಲೇ ಹುರಸಗುಂಡಗಿ ಗ್ರಾಮಸ್ಥರು ಹಳೇ ಗ್ರಾಮವನ್ನು ತೊರೆದು ನವಗ್ರಾಮಕ್ಕೆ ತೆರಳುವಂತೆ ತಹಶೀಲ್ದಾರ ಸಂಗಮೇಶ ಜಿಡಗೆ ಗ್ರಾಮಸ್ಥರಿಗೆ ಸೂಚಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿ ಸನ್ನತಿ ಬ್ರಿಜ್ ಕಂ ಬ್ಯಾರೇಜ್‍ನ ಹಿನ್ನೀರು ಗ್ರಾಮ ಸಮೀಪ ಆಗಮಿಸಿರುವ ಹಿನ್ನೆಲೆ ತಾಲೂಕಾ ಆಡಳಿತ ಮುಂಜಾಗೃತವಾಗಿ ಗ್ರಾಮಸ್ಥರಿಗೆ ಬೇರಡೆ ತೆರಳಲು, ಜಾನುವಾರುಗಳನ್ನು ಅಗತ್ಯ ಸಾಮಾಗ್ರಿಗಳೊಂದಿಗೆ ಈಗಲೇ ತೆರಳುವಂತೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆ ಭೀಮಾನದಿಗೂ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಿಡುತ್ತಿರುವ ಕಾರಣ, ಗ್ರಾಮದಲ್ಲಿ ಡಂಗೂರ ಬಾರಿಸುವ ಮೂಲಕ ಕೂಡಲೇ ಗ್ರಾಮಸ್ಥರು ಮುಂಜಾಗೃತವಾಗಿ ಗ್ರಾಮವನ್ನು ತೊರೆದು ಈ ಮೊದಲೇ ಪುನರ್ವಸತಿ ಕಲ್ಪಿಸಲಾದ ನವಗ್ರಾಮಕ್ಕೆ ತೆರಳಬೇಕೆಂದು ಅವರು ತಿಳಿಸಿದ್ದಾರೆ.