ಬ್ರಿಟಾನಿಯಾ ಬಿಸ್ಕೆಟ್ ಕಂಪನಿಗೆ ದಂಡ ವಿಧಿಸಿದ ಅಧಿಕಾರಿಗಳು; ಯಾಕೆ ಗೊತ್ತ ?
ಕೊಚ್ಚಿ: ತ್ರಿಶೂರ್‌ನಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬ್ರಿಟಾನಿಯಾ ಇಂಡಸ್ಟ್ರೀಸ್ ಹಾಗೂ ಕಡಿಮೆ ತೂಕದ ಬ್ರಿಟಾನಿಯಾ ಬಿಸ್ಕಟ್‌ಅನ್ನು ಮಾರಾಟ ಮಾಡಿದ ಬೇಕರಿಗೆ 60 ಸಾವಿರ ರೂಪಾಯಿ ದಂಡವನ್ನು ಗ್ರಾಹಕನಿಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.
ಗ್ರಾಹಕ ಖರೀದಿ ಮಾಡಿದ ಬಿಸ್ಕೆಟ್ ಪ್ಯಾಕ್‌ನ ತೂಕ 300 ಗ್ರಾಮ್ ಇರಬೇಕು. ಆದರೆ, ಗ್ರಾಹಕ ಇದನ್ನು ತೂಕ ಮಾಡಿದಾಗ 52 ಗ್ರಾಮ್ ಕಡಿಮೆ ತೂಕ ಬಂದಿದೆ. ಆ ಕಾರಣಕ್ಕಾಗಿ ಬ್ರಿಟಾನಿಯಾ ಇಂಡಸ್ಟ್ರಿಸ್ ಹಾಗೂ ಬಿಸ್ಕೆಟ್ ಮಾರಾಟ ಮಾಡಿದ ಬೇಕರಿ ಗ್ರಾಹಕರಿಗೆ 60 ಸಾವಿರ ರೂಪಾಯಿ ದಂಡ ನೀಡಬೇಕು ಎಂದು ತಿಳಿಸಿದೆ.
ಅಧ್ಯಕ್ಷ ಸಿ ಟಿ ಸಾಬು ಮತ್ತು ಸದಸ್ಯರಾದ ಶ್ರೀಜಾ ಎಸ್ ಮತ್ತು ರಾಮ್ ಮೋಹನ್ ಆರ್ ಅವರನ್ನೊಳಗೊಂಡ ಪೀಠವು ಪ್ಯಾಕೆಟ್‌ಗಳ ಮೇಲೆ ಬರೆದಿರುವ 300 ಗ್ರಾಂ ಘೋಷಿತ ಪ್ರಮಾಣಕ್ಕೆ ಹೋಲಿಸಿದರೆ ಬಿಸ್ಕತ್ತು ಪ್ಯಾಕೆಟ್‌ಗಳ ತೂಕದಲ್ಲಿ ಗಮನಾರ್ಹ ಕೊರತೆಯಿದೆ ಎಂದು ಗಮನಿಸಿದೆ. ಇನ್ನು ನೋಟಿಸ್‌ಗಳನ್ನು ನೀಡಿದ ನಂತರವೂ, ಬ್ರಿಟಾನಿಯಾ ಮತ್ತು ಬೇಕರಿ (ವಿರುದ್ಧ ಪಕ್ಷಗಳು) ಎರಡೂ ತಮ್ಮ ಲಿಖಿತ ಹೇಳಿಕೆಗಳನ್ನು ಜಿಲ್ಲಾ ಆಯೋಗದ ಮುಂದೆ ಸಲ್ಲಿಸಲು ವಿಫಲವಾಗಿವೆ ಎಂದು ಆಯೋಗವು ಗಮನಿಸಿದೆ. ಆದ್ದರಿಂದ, ಆಯೋಗವು ದೂರುದಾರರ ನಷ್ಟಕ್ಕೆ ಪರಿಹಾರವಾಗಿ 50 ಸಾವಿರ ರೂಪಾಯಿ ನೀಡಬೇಕು ಹಾಗೂ ಅವರು ಮಾಡಿದ ಕಾನೂನು ಹೋರಾಟಕ್ಕಾಗಿ 10 ಸಾವಿರ ರೂಪಾಯಿ ಪಾವತಿ ಮಾಡುವಂತೆ ತಿಳಿಸಿದೆ.