ರಸ್ತೆ ಮೇಲೆ ಧಗಧಗನೆ ಬೆಂಕಿ ಹೊತ್ತಿ ಉರಿದ ಬಸ್, 28 ಜನ ಪ್ರಾಣಪಾಯದಿಂದ ಪಾರು

ರಸ್ತೆ ಮೇಲೆ ಧಗಧಗನೆ ಬೆಂಕಿ ಹೊತ್ತಿ ಉರಿದ ಬಸ್, 28 ಜನ ಪ್ರಾಣಪಾಯದಿಂದ ಪಾರು
ಯಲ್ಲಾಪುರಃ ರಸ್ತೆ ಮೇಲೆ ಚಲಿಸುತ್ತಿದ್ದ ಖಾಸಗಿ ಬಸ್ಸೊಂದಕ್ಕೆ ಹಠಾತ್ತನೆ ಬೆಂಕಿ ಹೊತ್ತಿ ಧಗಧಗನೆ ಉರಿದು ಸುಟ್ಟು ಕರಕಲಾದ ಘಟನೆ ಇಂದು ಬೆಳಗಿನ ಜಾವ 4-30 ಕ್ಕೆ ಪಟ್ಟಣದ ಜೋಡುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ನಡೆದಿದೆ.
ಈ ಬಸ್ ಮುಂಬೈಯಿಂದ ಕೇರಳಕ್ಕೆ ಹೊರಟಿತ್ತು ಎನ್ನಲಾಗಿದೆ. ಬಸ್ಸಿನಲ್ಲಿದ್ದ 28 ಮಂದಿ ಪ್ರಯಾಣಿಕರು ಗಾಬರಿಗೊಂಡು ಪ್ರಾಣಭಯದಿಂದಲೇ ಹೊರ ಓಡಿ ಬಂದಿದ್ದಾರೆ. ಅದೃಷ್ಟಕ್ಕೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕೆಲಸ ಮಾಡಿತು.. ಪೊಲೀಸರು ಸಾಥ್ ನೀಡಿದರು. ಈ ಘಟನೆಯಿಂದಾಗಿ ಕೆಲಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.
ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ನಂತರ ಸುಟ್ಟುಕರಕಲಾದ ಬಸ್ ನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು, ನಾಗರಿಕರ ಸಹಕಾರದಿಂದ ರಸ್ತೆಯಿಂದ ಸ್ಥಳಾಂತರಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.