ಯೂತ್ ಐಕಾನ್

ಕುಂಚಿಟಿಗ ಗುರುಪೀಠದ ಶಾಂತವೀರಶ್ರೀಗೆ ಗೌರವ ಡಾಕ್ಟರೇಟ್ ಕೊಡಲು ಕಾರಣ?

ಮಠಾಧೀಶರೆಂದರೆ ಪುರಾಣ-ಪ್ರವಚನ ಹೇಳುವುದು. ಜಾತ್ರೆ-ಉತ್ಸವಗಳಲ್ಲಿ ಮೆರವಣಿಗೆ ಹೊರಡುವುದು. ಭಕ್ತರು ಕಾಲಿಗೆ ಬಿದ್ದು ನೀಡಿದ ದಕ್ಷಿಣೆಯಲ್ಲೇ ಮಠ-ಮಂದಿರಗಳನ್ನು ಮುನ್ನಡೆಸುವುದನ್ನೇ ಸಂಪ್ರದಾಯ ಅಂದುಕೊಂಡಿರುತ್ತೇವೆ. ಆದರೆ, ಕೋಟೆನಾಡಿನ ಈ ಯುವ ಕಾವಿಧಾರಿಗಳು ಮಾತ್ರ ವಿಶ್ವಗುರು ಬಸವಣ್ಣನವರ ನಿಜವಾದ ಕಾಯಕತತ್ವ ಸಾಕಾರಗೊಳಿಸಿ ಕಾಯಕಯೋಗಿ ಎಂದು ಕರೆಸಿಕೊಂಡಿದ್ದಾರೆ. ಅಂಥ ಅಪರೂಪದ ಕೃಷಿ ಋಷಿ, ಕುಂಚಿಟಿಗ ಸಂಸ್ಥಾನದ ಪೀಠಾದ್ಯಕ್ಷರಾದ ಶಾಂತವೀರ ಸ್ವಾಮೀಜಿಗೆ ಇಂದು ಗೌರವ ಡಾಕ್ಟರೇಟ್ ಪುರಸ್ಕಾರ ಲಭಿಸಿದೆ.

ಸುಮಾರು 22ವರ್ಷಗಳ ಹಿಂದೆ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಂದ ದೀಕ್ಷೆ ಪಡೆದ ಶಾಂತವೀರ ಶ್ರೀಗಳು ಕುಂಚಿಟಿಗ ಗುರುಪೀಠದ ಪೀಠಾದ್ಯಕ್ಷರಾಗಿದ್ದಾರೆ. ಭಕ್ತರ ಕಾಣಿಕೆಗೆ ಕೈಯೊಡ್ಡದೆ ಸಮಾಜಕ್ಕಾಗಿ ಸ್ವಂತ ದುಡಿಮೆಯಲ್ಲಿ ಮಠ ನಿರ್ಮಾಣದ ಕನಸು ಕಂಡ ಶ್ರೀಗಳು ಕೃಷಿ ಕಾಯಕದತ್ತ ದೃಷ್ಟಿ ನೆಟ್ಟರು. ಬರದನಾಡಿನಲ್ಲಿ ಯಾವ ಬೆಳೆ ಬೆಳೆಯಬಹುದು ಎಂದು ಗಂಭೀರ ಚಿಂತನೆಯಲ್ಲಿ ತೊಡಗಿದ ಶ್ರೀಗಳು ದಾಳಿಂಬೆ ಕೃಷಿಯನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿದ್ದಾರೆ. ವಿವಿದೆಡೆ ದಾಳಿಂಬೆ ತೋಟಗಳಿಗೆ ಭೇಟಿ ನೀಡಿ, ವಿಜ್ಞಾನಿಗಳೊಂದಿಗೆ, ದಾಳಿಂಬೆ ತಜ್ಞರೊಂದಿಗೆ ಸಮಾಲೋಚನೆ ಮಾಡಿದರು. 2008ರಲ್ಲಿ ಹೊಸದುರ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿ ಸುಮಾರು 20 ಎಕರೆ ಜಮೀನನ್ನು ಲೀಜಿಗೆ ಪಡೆದು ಕೃಷಿ ಕಾಯಕದಲ್ಲಿ ತಲ್ಲೀನರಾಗಿದ್ದಾರೆ.

ರೈತರೊಂದಿಗೆ ರೈತರಾಗಿ ಮೈಮುರಿದು ದುಡಿದ ಶಾಂತವೀರ ಶ್ರೀಗಳು ದಾಳಿಂಬೆ ಕೃಷಿಯಲ್ಲಿ ಸಫಲರಾದರು. ಸಾಲಸೋಲ ಮಾಡಿ 1ಎಕರೆಗೆ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದ ಶ್ರೀಗಳು ವೈಜ್ಞಾನಿಕ ಕೃಷಿ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಪಡೆದರು. ಅದೇ ದಾಳಿಂಬೆ ಕೃಷಿಯನ್ನು ಮತ್ತಷ್ಟು ವಿಸ್ತಾರಗೊಳಿಸಿ ಕೋಟ್ಯಾಂತರ ರೂಪಾಯಿ ಗಳಿಕೆ ಮಾಡಿದರು. ಆ ಮೂಲಕ ರೈತ ಸಮುದಾಯದ ಪಾಲಿಗೆ ಈಗ ಕೃಷಿ ಋಷಿಯಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ರೈತರು ದೂರದೂರುಗಳಿಂದ ಕೃಷಿ ಬಗ್ಗೆ ಮಾಹಿತಿ ಪಡೆಯಲು ಶಾಂತವೀರಶ್ರೀಗಳ ಬಳಿಗೆ ಬರುತ್ತಿದ್ದಾರೆ.

ಆಳಾಗಿ ಬಲ್ಲವನು ಆಳುವನು ಅರಸಾಗಿ ಎಂಬ ಸರ್ವಜ್ಞನ ವಚನ, ಕಾಯಕವೇ ಕೈಲಾಸವೆಂಬ ಬಸವೇಶ್ವರರ ನುಡಿಗಳು ಶಾಂತವೀರ ಸ್ವಾಮೀಜಿಗೆ ಸ್ಪೂರ್ತಿಯಾಗಿವೆ. ಪರಿಣಾಮ ಶಾಂತವೀರ ಸ್ವಾಮೀಜಿ ಬೇರೆ ಮಠಾಧೀಶರಂತೆ ಕೇವಲ ಭಾಷಣ ಮಾಡದೆ ಪ್ರಾಕ್ಟಿಕಲ್ಲಾಗಿ ಪಕ್ಕಾ ರೈತರಂತೆ ದುಡಿದು ಮಠ ನಿರ್ಮಾಣ ಮಾಡುವ ಮೂಲಕ ತಮ್ಮ ಕನಸನ್ನು ಕೃತಿಗಿಳಿಸಿದ್ದಾರೆ. ಬರದನಾಡಿನ ರೈತರು ಬೇಸಾಯದಿಂದ ಬೇಸತ್ತು ಕೃಷಿಯಿಂದ ವಿಮುಖರಾಗುವ ಸಂದರ್ಭದಲ್ಲಿ ಶಾಂತವೀರಶ್ರೀಗಳು ದಾಳಿಂಬೆ ಕೃಷಿಯಲ್ಲಿ ಸಫಲರಾಗುವ ಮೂಲಕ ಕೃಷಿಕರನ್ನು ಮರಳಿ ಕೃಷಿಯತ್ತ ಕರೆತಂದಿದ್ದಾರೆ.

ದಾಳಿಂಬೆ ಸ್ವಾಮೀಜಿ ಅಂತಲೇ ಫೇಮಸ್ ಆಗಿರುವ ಶಾಂತವೀರಶ್ರೀ ಹೊಸದುರ್ಗ ಪಟ್ಟಣದಲ್ಲಿ ಸ್ವಂತ ಶ್ರಮದ ಮೂಲಕ ಅದ್ಭುತವಾದ ಕುಂಚಗಿರಿಯನ್ನು ನಿರ್ಮಾಣ ಮಾಡಿದ್ದಾರೆ. ಅಂಥ ಅಪರೂಪದ ಕಾಯಕಯೋಗಿ ಶಾಂತವೀರ ಶ್ರೀಗಳಿಗೆ ಮೈಸೂರಿನ ಕಾವೇರಿ ಸಭಾಂಗಣದಲ್ಲಿಂದು indian virtual university for peace & education ವತಿಯಿಂದ ಸಮಾಜ ಸೇವೆ ಹಾಗೂ ದಾಳಿಂಬೆ ಕೃಷಿಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಡಾ.ಶಾಂತವೀರ ಸ್ವಾಮೀಜಿಗಳಿಗೆ ಅಭಿನಂದನೆಗಳು…

-ಸಂ

Related Articles

Leave a Reply

Your email address will not be published. Required fields are marked *

Back to top button