ಮಹಿಳೆಯರಿಂದಲೇ ಸಂಸ್ಕೃತಿ ಉಳಿದಿದೆ-ದರ್ಶನಾಪುರ
ಶಹಾಪುರಃ ಸಗರನಾಡು ಮಹಿಳಾ ಮಹೋತ್ಸವ
ಯಾದಗಿರಿ, ಶಹಾಪುರಃ ಪ್ರತಿ ಕುಟುಂಬ ಸುಖಮಯವಾಗಿ ಮುನ್ನಡೆಯಲು ಆ ಕುಟುಂಬದಲ್ಲಿರುವ ಮಹಿಳೆಯೇ ಮುಖ್ಯ ಕಾರಣಿಭೂತರು. ಕುಟುಂಬದ ಆಗು ಹೋಗುಗಳಿಗೆ ಸಾಥ್ ನೀಡುವವಳೇ ಮಹಿಳೆ. ಮಹಿಳೆಯರ ಸಹಕಾರವಿಲ್ಲದೆ ಯಾವುದೇ ಸಾಧನೆ ಸುಲಭವಲ್ಲ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಶ್ರೀಚರಬಸವೇಶ್ವರ ಸಾಂಸ್ಕøತಿಕ ಮಂದಿರದಲ್ಲಿ ಶ್ರೀಚರಬಸವೇಶ್ವರ ಸಂಗೀತ ಸೇವಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದ 10ನೇ ವರ್ಷದ ಸಗರನಾಡು ಮಹಿಳಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯಾದವಳು ಸಂಸ್ಕಾರದಿಂದ ತನ್ನ ಕುಟುಂಬವನ್ನು ನಿಭಾಯಿಸುತ್ತಿದ್ದು, ದೇಶದ ಸಾಂಪ್ರದಾಯಿಕ ಪದ್ಧತಿ ಅನುಸರಿಸುವ ಮೂಲಕ ಸಂಸ್ಕøತಿ ಉಳಿವಿಗೆ ಅವರ ಕೊಡುಗೆ ಅಪಾರವಿದೆ. ಹೀಗಾಗಿ ಮಹಿಳೆಯರಿಂದಲೇ ಸಂಸ್ಕøತಿ ಉಳಿದಿದೆ ಎಂದರೆ ತಪ್ಪಿಲ್ಲ.
ಉಡಿ ತುಂಬಿಸಿಕೊಳ್ಳಲು ಯಾವ ಮಹಿಳೆಯು ಹಿಂದೇಟು ಹಾಕುವದಿಲ್ಲ. ಕಾರಣ ಪ್ರತಿ ಮಹಿಳೆಯು ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲಿ. ಮುತ್ತೈದೆಯಾಗಿ ಸಾವನ್ನಪ್ಪಬೇಕು. ಎಂಬ ಬಲವಾದ ನಂಬಿಕೆ ಹೊಂದಿರುತ್ತಾರೆ. ತವರು ಮನೆಯವರು ಉಡಿ ತುಂಬಿದಾಗ, ಧಾನ್ಯಗಳನ್ನು ಹಿಡಿಯಷ್ಟು ವಾಪಸ್ ನೀಡುವ ಪದ್ಧತಿ ಇದೆ. ತವರು
ಮನೆಯವರಿಗೂ ಯಾವುದೇ ಕಮ್ಮಿ ಬೀಳದಿರಲಿ. ಗಂಡ ಮನೆಗೂ ಸಕಲ ಭಾಗ್ಯ ಕಲ್ಪಿಸಲಿ ಸ್ವತಹಃ ತಾನೂ ಸೌಭಾಗ್ಯವತಿಯಾಗ ಬಾಳಬೇಕೆಂಬ ನಂಬಿಕೆಯ ಪ್ರತಿಬಿಂಬವೇ ಉಡಿ ತುಂಬುವದಾಗಿರುತ್ತದೆ. ಹೀಗಾಗಿ ಉಡಿ ತುಂಬುವ ಕಾರ್ಯಕ್ರಮ ಎಂದರೆ ಮಹಿಳೆಯರಿಗೆ ಧನ್ಯತಾ ಭಾವ, ಸಂತಸ ಮೂಡುತ್ತದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಬಾಡಿಯಾಲ ಮೂಲಮಠದ ಚೆನ್ನವೀರ ಶಿವಾಚಾರ್ಯರು, ಎಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನಗಳು ಕೊಡಮಾಡಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎನ್ನುವುದು ವೇದಗಳಿಂದ ತಿಳಿದು ಬರುತ್ತದೆ.
ಕಾರಣ ಮಹಿಳೆಯರಿಗೆ ಗೌರವ ಕೊಡುವುದು ಸರ್ವರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ
ಡಾ.ಶರಣು ಬಿ.ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 10ವರ್ಷದಿಂದ ಸಗರನಾಡಿನಲ್ಲಿ ಶ್ರೀಚರಬಸವೇಶ್ವರ ಸಂಸ್ಥಾನದಿಂದ ಮಹಿಳಾ ಮಹೋತ್ಸವದ ಮೂಲಕ ಮಹಿಳೆಯರಿಗೆ ಉಡಿ ತುಂಬುವ ಸಂಸ್ಕøತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇದು ಸರ್ವ ಕಾಲಕ್ಕೂ ಮುಂದುವರೆಯಲಿದೆ. ಆ ಶಕ್ತಿ ಭಗವಂತ ನಡೆಸಿಕೊಡಲಿ ಎಂದರು.
ವೇದಿಕೆಯಲ್ಲಿ ಬಸವಯ್ಯ ಶರಣರು, ತಹಸೀಲ್ದಾರ ಸಂಗಮೇಶ ಜಿಡಗೆ, ಪಿಐ ನಾಗರಾಜ ಜಿ.ಅಂಬಾರಾಯ ಅಷ್ಟಗಿ, ಪಿಎಸ್‍ಐ ಬಸವರಾಜ, ಎ.ಬಿ.ಪಾಟೀಲ, ಎಚ್.ಎಸ್.ಹೊಸ್ಮನಿ, ಮಹಾಂತೇಶ ಕವಲಗಿ, ಯಾದಗಿರಿ ಸಂಖ್ಯಾಶಾಸ್ತ್ರಜ್ಞ ಸ್ವಾಮಿ ಅಮರೇಶ ಸೇರಿದಂತೆ ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ನೂರಾರು ಮಹಿಳೆಯರಿಗೆ ಸಾಮೂಹಿಕವಾಗಿ ಉಡಿ ತುಂಬುವ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಅಹಲ್ಯಾದೇವಿ ಗದ್ದುಗೆ ಇತರರು ನಡೆಸಿಕೊಟ್ಟರು. ನಂತರ ನಾನಾ ಕಲಾವಿದರಿಂದ ಕಲಾ ಪ್ರದರ್ಶನಗಳು ಜರುಗಿದವು.