ಡಾ.ಮಂಜುನಾಥ್, ಬೊಮ್ಮಾಯಿ, ಕಾರಜೋಳ, ಗದ್ದೀಗೌಡರ್‌ಗೆ ಮಿಸ್, ಸೋಮಣ್ಣ-ಶೋಭಾಗೆ ಚಾನ್ಸ್!
ನವದೆಹಲಿ: ಇನ್ನು ಕೆಲವೇ ಗಂಟೆಗಳಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿಯವರ ಮಂತ್ರಿ ಮಂಡಲದಲ್ಲಿ ಕರ್ನಾಟಕದ ಐವರು ಸಂಸದರಿಗೆ ಸಚಿವರಾಗುವ ಅದೃಷ್ಟ ಒಲಿದು ಬಂದಿದೆ. ಬಿಜೆಪಿಯಿಂದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್, ವಿ.ಸೋಮಣ್ಣ ಸೇರಿ ನಾಲ್ವರಿಗೆ ಹಾಗೂ ಎನ್ ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ವೇತ್ರದಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್‌ಗೆ ಪೆಟ್ಟು ಕೊಟ್ಟಿದ್ದ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಸಚಿವ ಸ್ಥಾನ ಮಿಸ್ ಆಗಿದೆ. ಅತ್ತ, ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಾಜ್ಯದ ಮತ್ತೋರ್ವ ಹಿರಿಯ ಬಿಜೆಪಿ ಸಂಸದ ಪಿ.ಸಿ.ಗದ್ದೀಗೌಡರ್ ಅವರಿಗೆ ಈ ಬಾರಿಯೂ ಸಚವರಾಗುವ ಯೋಗವಿಲ್ಲ. ಇನ್ನು, ನಿನ್ನೆಯವರೆಗೂ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಇವರಲ್ಲೊಬ್ಬರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುತ್ತೆ ಅನ್ನೋ ಮಾತು ಹುಸಿಯಾಗಿದೆ. ಬೆಂಗಳೂರು ಸೆಂಟ್ರಲ್ ನಲ್ಲಿ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಲಿಜ ಸಮುದಾಯಕ್ಕೆ ಸೇರಿದ ಪಿಸಿ ಮೋಹನ್ ಅವರ ಹೆಸರೂ ಕೇಳಿ ಬಂದಿತ್ತಾದರೂ ಕೊನೆಯ ಕ್ಷಣದಲ್ಲಿ ಬಿಜೆಪಿ ವರುಷ್ಠರ ಲೆಕ್ಕಾಚಾರ ಬದಲಾದ ಪರಿಣಾಮ ಪಿ.ಸಿ.ಮೋಹನ್ ಅವರಿಗೆ ಮಂತ್ರಿಯಾಗುವ ಅವಕಾಶ ದೂರವಾಯಿತು. ಸೋಮಣ್ಣಗೆ ಅದೃಷ್ಟವೋ ಅದೃಷ್ಟ! ಇದೇ ಮೊದಲ ಬಾರಿಗೆ ತುಮಕೂರು ಕ್ಷೇತ್ರದಿಂದ ಸಂಸದರಾಗಿ ಲೋಕಸಭೆ ಪ್ರವೇಶಿಸಿದ ಬೆಂಗಳೂರು ಮೂಲದ ವಿ.ಸೋಮಣ್ಣ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದ್ದು, ಅನಿರೀಕ್ಷಿತವೂ ಕೂಡ. ವಿ.ಸೋಮಣ್ಣ ಅವರ ಪಕ್ಷನಿಷ್ಠೆ ಮತ್ತು ಅವರ ಪರಿಶ್ರಮವನ್ನು ಲೆಕ್ಕಕ್ಕೆ ತೆಗೆದುಕೊಂಡ ಬಿಜೆಪಿ ವರಿಷ್ಠರು ಲಿಂಗಾಯತ ಮುಖಂಡ ಸೋಮಣ್ಣಗೆ ಮಣಿ ಹಾಕಿದರೆಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಬ್ರಾಹ್ಮಣ ಕೋಟಾದಿಂದ ಹುಬ್ಬಳ್ಳಿ-ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ, ಒಕ್ಕಲಿಗ ಸಮುದಾಯದಿಂದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಹೆಚ್.ಡಿ.ಕುಮಾರಸ್ವಾಮಿ, ಇನ್ನು ಲಿಂಗಾಯತ ಸಮುದಾಯದಿಂದ ವಿ.ಸೋಮಣ್ಣ ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಲಾಗುತ್ತೆ. ಇದರೊಂದಿಗೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ತಮಿಳುನಾಡು ಮೂಲದ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರುಗೂ ಸಚಿವ ಸ್ಥಾನ ಪಕ್ಕಾ ಆಗಿದ್ದು, ಕರ್ನಾಟಕದ ಲೆಕ್ಕದಲ್ಲೇ. ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಸಚಿವರಾಗಿ ಖಾತೆ ನಿರ್ವಹಿಸಿದ ಅನುಭವ ಉಳ್ಳವರಾಗಿದ್ದರೆ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರು ಕೇಂದ್ರದ ಮಂತ್ರಿಯಾಗುತ್ತಿರುವುದು ಇದೇ ಮೊದಲ ಬಾರಿಗೆ. ಹಾಗೆ ನೋಡಿದರೆ ಕುಮಾರಸ್ವಾಮಿ ಅವರು ಈ ಹಿಂದೆ 1996ರಲ್ಲಿ ಒಂದು ಬಾರಿ ಸಂಸದರಾಗಿದ್ದರು. ಆದರೆ, ವಿ.ಸೊಮಣ್ಣಗೆ ಇದೆಲ್ಲವೂ ಮೊದಲ ಬಾರಿಯ ಅನುಭವವೆಂದೇ ಹೇಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರ ಆದೇಶದ ಮೇರೆಗೆ ತಮ್ಮ ಸ್ವ-ಕ್ಷೇತ್ರ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟುಕೊಟ್ಟು ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಇನ್ನೇನು ವಿ.ಸೋಮಣ್ಣ ಅವರ ರಾಜಕೀಯ ಭವಿಷ್ಯವೇ ಅಂತ್ಯವಾಯಿತೇನೋ ಎನ್ನುವಾಗ ಇತ್ತೀಚಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಜನ ಸೋಮಣ್ಣನವರನ್ನು ಗೆಲ್ಲಿಸುವ ಮೂಲಕ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದರು.