ಅವ್ರು ರೈತನ ಮಕ್ಕಳು, ಮಣ್ಣಿನ ಮಕ್ಕಳಾದರೆ ನಾವು ಯಾರು? -ಸಿಎಂ ಸಿದ್ಧರಾಮಯ್ಯ
ಕೊಪ್ಪಳ: ಅವರು ರೈತನ ಮಕ್ಕಳು, ಮಣ್ಣಿನ ಮಕ್ಕಳು ಆದರೆ ನಾವು ಯಾರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರು ಪ್ರಸ್ತಾಪಿಸದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವ್ಯಂಗ್ಯವಾಡಿದರು. ನಾವು ನಿಜವಾದ ರೈತನ ಮಕ್ಕಳು. ನಾನು ವ್ಯವಸಾಯ ಮಾಡಿದವನು. ಪರಿಣಾಮ ರೈತರ ಕಷ್ಟ ನನಗೆ ಗೊತ್ತಿರುವ ಕಾರಣಕ್ಕೇನೆ ರಾಜ್ಯದಲ್ಲಿ ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ 5ಲಕ್ಷ ರೂಪಾಯಿ ಪರಿಹಾರ ನೀಡಿದೆ. ರೈತರ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ಅಲ್ಲದೆ ಪ್ರತಿ ಲೀಟರ್ ಗೆ ಐದು ರೂಪಾಯಿ ಸಬ್ಸಿಡಿ ಕೊಡುತ್ತಿದ್ದೇವೆ ಎಂದರು.
ಕೊಪ್ಪಳ ನಗರದಲ್ಲಿ ನಡೆದ ಸರ್ಕಾರದ ಫಲಾನುಭವಿಗಳ ಸಮಾವೇಶವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಿದರು. ಬಳಿಕ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಹೆಚ್.ಡಿ.ಕುಮಾರಸ್ವಾಮಿ, ಕೆ.ಎಸ್.ಈಶ್ವರಪ್ಪ ಅವರನ್ನೊಳಗೊಂಡ ನಿಯೋಗ ಕರೆದುಕೊಂಡು ಹೋಗಿ ಸಾಲಮನ್ನಾಕ್ಕೆ ಮನವಿ ಮಾಡಿದೆವು. ಆದರೆ, ಮೋದಿ ಅವರು ಕ್ಯಾರೆ ಅನ್ನಲಿಲ್ಲ. ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರು ಒಂದು ರೂಪಾಯಿಯೂ ಕೊಡಲ್ಲ ಅಂದ್ರು ಎಂದು ಆರೋಪಿಸಿದ್ರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕರ್ನಾಟಕದ 72ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು. ಆದರೆ, ಈಗಿನ ಕೇಂದ್ರ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ರೈತರು ಹಾಗೂ ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅಂಥ ಕಮಲ ಪಕ್ಷದವರ ಮೊಸಳೆ ಕಣ್ಣೀರಿಗೆ ಕರಗಬೇಡಿ. ನಮಗೆ ನಿಮ್ಮ ಆಶೀರ್ವಾದ ಬೇಕು, ನಮಗೆ ಆಶೀರ್ವಾದ ಮಾಡ್ತೀರಿ ತಾನೇ ಎಂದು ಸಮಾವೇಶದಲ್ಲಿದ್ದ ಜನರನ್ನು ಪ್ರಶ್ನಿಸಿದರು. ಆ ಮೂಲಕ ಈಗಾಗಲೇ ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದರು.