ಬಾಲ್ಯವಿವಾಹ ತಡೆಯಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯ-ನ್ಯಾ.ತಾಳಿಕೋಟಿ
ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಂದಿ ಸಂವಾದ ಕಾರ್ಯಕ್ರಮ
ಯಾದಗಿರಿಃ ಬಾಲ್ಯ ವಿವಾಹ ತಡೆಯುವಲ್ಲಿ ಕೇವಲ ಅಧಿಕಾರಿಗಳು, ಸಂಘ-ಸಂಸ್ಥೆಗಳು ಶ್ರಮಿಸಿದರಷ್ಟೇ ಸಾಲದು. ಈ ಚಳವಳಿಯಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ರಾಚಪ್ಪ ಕೆ.ತಾಳಿಕೋಟಿ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ ಒಕ್ಕೂಟ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 (ಕರ್ನಾಟಕ ತಿದ್ದುಪಡಿ ಕಾಯ್ದೆ-2016) ಮತ್ತು ನಿಯಮಾವಳಿಗಳು 2014ರ ಕುರಿತು ನ್ಯಾಯಾಧೀಶರುಗಳು ಮತ್ತು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಬಾಲ್ಯ ವಿವಾಹ ಪ್ರಾಚೀನ ಕಾಲದಿಂದ ನಡೆದುಬಂದ ಅನಿಷ್ಠ ಪದ್ಧತಿ. ನಮ್ಮ ದೇಶದಲ್ಲಿ ಹೆಚ್ಚಾಗಿದೆ. ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಬಾಲ್ಯ ವಿವಾಹ ಈಗಲೂ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ ಹೆಣ್ಣುಮಗುವನ್ನು ತೊಟ್ಟಿಲೊಳಗೆ ಹಾಕುವ ಮೊದಲೇ ಅದರ ಪತಿಯನ್ನು ನಿಶ್ಚಯಿಸಿ, 18 ವರ್ಷ ತುಂಬುವ ಮೊದಲು ಮದುವೆ ಮಾಡುತ್ತಾರೆ. ಇದರಿಂದ ಹೆಣ್ಣುಮಕ್ಕಳು ದೈಹಿಕ, ಮಾನಸಿಕವಾಗಿ ಬೆಳವಣಿಗೆ ಹೊಂದಲು ಕಷ್ಟವಾಗಿ ನೂರಾರು ಸಮಸ್ಯೆಗಳಿಗೆ ಸಿಲುಕುತ್ತಾರೆ ಎಂದು ಅವರು ತಿಳಿಸಿದರು.
ಬಾಲ್ಯ ವಿವಾಹ ಅಪರಾಧ ಎಂದು ಗೊತ್ತಿದ್ದರೂ ಬಾಲ್ಯವಿವಾಹ ಜರುಗುತ್ತಿವೆ. ಹಾಗಾಗಿ, ಬಾಲ್ಯ ವಿವಾಹ ಮಾಡಿಸಿದರೆ ನೀಡುವ ಶಿಕ್ಷೆಯ ಪ್ರಮಾಣದ ಜೊತೆಗೆ ಹೆಣ್ಣುಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಳವಾದರೆ ಸುಧಾರಣೆ ಸಾಧ್ಯ. ಮುಖ್ಯವಾಗಿ ಜನರ ಮನಸ್ಸಿನಲ್ಲಿ ಬದಲಾವಣೆ ಬಂದರೆ ಬಾಲ್ಯ ವಿವಾಹ ತಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅರ್ಜುನ ಬನಸೊಡೆ ಅವರು ಮಾತನಾಡಿ, ಬಾಲ್ಯ ವಿವಾಹ ಸಾಮಾಜಿಕ ಪಿಡುಗು ಆಗಿದೆ. ಇದರಿಂದ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಅಧಿಕಾರಿ ವರ್ಗದವರ ಜೊತೆಗೆ ಜನರು ಕೈಜೋಡಿಸಿದಾಗ ಬಾಲ್ಯ ವಿವಾಹ ತಡೆಗಟ್ಟಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಕಾಂತ ಕುಲಕರ್ಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 134 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. 100 ಮದುವೆಗಳಲ್ಲಿ 33 ಬಾಲ್ಯ ವಿವಾಹ ಇರುತ್ತವೆ.
ಆದ್ದರಿಂದ ಬಾಲ್ಯ ವಿವಾಹ ತಡೆಗಾಗಿ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪೂಜಾರಿಗಳು ಹಾಗೂ ಪಾದ್ರಿಗಳಿಗೆ ತರಬೇತಿ ನೀಡಲಾಗಿದೆ. ಈಗ ನ್ಯಾಯಾಧೀಶರುಗಳು ಮತ್ತು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯ ವಿವಾಹ ನಡೆಯುತ್ತಿದ್ದರೆ ಮಕ್ಕಳ ಸಹಾಯವಾಣಿ-1098ಗೆ ಸಾಕಷ್ಟು ಕರೆಗಳು ಬರುತ್ತಿವೆ. ಜಿಲ್ಲೆಯ 123 ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದ್ದು, 1098 ಸಂಖ್ಯೆಯು ಮಕ್ಕಳಿಗಾಗಿ ಇರುವ ಸಹಾಯವಾಣಿಯಾಗಿದೆ ಎಂದು ಎಲ್ಲೆಡೆ ಜಾಗೃತಿ ಮೂಡುತ್ತಿದೆ.
ಮುಂಬರುವ ಒಂದೆರಡು ವರ್ಷಗಳಲ್ಲಿ ಸಂಪೂರ್ಣ ಜಾಗೃತಿ ಮೂಡಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ಅವರು ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ 21 ವರ್ಷದೊಳಗಿನ ಗಂಡು ಹಾಗೂ 18 ವರ್ಷದೊಳಗಿನ ಹೆಣ್ಣಿನ ನಡುವೆ ನಡೆಯುವ ಮದುವೆಗೆ ಅಥವಾ ವಧು-ವರರಲ್ಲಿ ಒಬ್ಬರ ವಯಸ್ಸು ನಿಗಧಿತ ವಯಸ್ಸಿನೊಳಗಿದ್ದರೆ ಬಾಲ್ಯವಿವಾಹ ಎನ್ನುತ್ತಾರೆ.
ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾದರೆ ಗರ್ಭಪಾತ, ಗರ್ಭ ಚೀಲಕ್ಕೆ ಪೆಟ್ಟು ಬೀಳುವುದರಿಂದ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ. ವಿಕಲಾಂಗ ಮತ್ತು ಕಡಿಮೆ ತೂಕದ ಮಕ್ಕಳು ಜನಿಸುವ ಸಂಭವವಿರುತ್ತದೆ. ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತದೆ. ವಯಸ್ಸಿಗೆ ಮೀರಿದ ಜವಾಬ್ದಾರಿ ಬಿದ್ದು ಮಾನಸಿಕ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ.35.8ರಷ್ಟು ಬಾಲ್ಯ ವಿವಾಹ: ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ (ಎನ್‍ಎಫ್‍ಎಚ್‍ಎಸ್)-4 2015-16ರಲ್ಲಿನ ಸಮೀಕ್ಷೆ ಪ್ರಕಾರ ಯಾದಗಿರಿ ಜಿಲ್ಲೆಯ ಹೆಣ್ಣು ಮಕ್ಕಳಲ್ಲಿ ಶೇ.35.8ರಷ್ಟು ಬಾಲ್ಯ ವಿವಾಹ ನಡೆದರೆ, ಕೊಪ್ಪಳದಲ್ಲಿ ಶೇ.35.9ರಷ್ಟು ಜರುಗಿ ಪ್ರಥಮ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಯ ಗಂಡುಮಕ್ಕಳಲ್ಲಿ ಶೇ.33.5ರಷ್ಟು ಬಾಲ್ಯ ವಿವಾಹ ಆಗಿದ್ದು, ಪ್ರಥಮ ಸ್ಥಾನದಲ್ಲಿದೆ.
ಚಿತ್ರದುರ್ಗದಲ್ಲಿ ಶೇ.20.6ರಷ್ಟು ಜರುಗಿ ಎರಡನೇ ಸ್ಥಾನದಲ್ಲಿದೆ. ಈ ಸಮೀಕ್ಷೆಗಾಗಿ 20-24 ವರ್ಷದ ಮಹಿಳೆಯರು ಮತ್ತು 25-29 ವರ್ಷದ ಪುರುಷರನ್ನು ಸರ್ವೆ ಮಾಡಲಾಗಿತ್ತು. ಎನ್‍ಎಫ್‍ಎಚ್‍ಎಸ್ 2005-06ರಲ್ಲಿನ ಸಮೀಕ್ಷೆ ಪ್ರಕಾರ ರಾಜ್ಯದ ಮಹಿಳೆಯರಲ್ಲಿ ಶೇ.41.2ರಷ್ಟು ಮತ್ತು 2015-16ರಲ್ಲಿ ಶೇ.23.2ರಷ್ಟು ಬಾಲ್ಯ ವಿವಾಹ ನಡೆದಿವೆ. ಪುರುಷರಲ್ಲಿ 2005-06ರಲ್ಲಿ ಶೇ.14.9ರಷ್ಟು ಮತ್ತು 2015-16ರಲ್ಲಿ ಶೇ.10.9ರಷ್ಟು ಬಾಲ್ಯ ವಿವಾಹ ಜರುಗಿವೆ ಎಂದು ಅವರು ವಿವರಿಸಿದರು.
ಹಳ್ಳಿಗಳಲ್ಲಿ ಹೆಣ್ಣುಮಕ್ಕಳನ್ನು 18 ವರ್ಷದೊಳಗೆ ಮದುವೆ ಮಾಡಬಾರದು ಎಂದು ತಿಳಿಹೇಳಿದರೆ, ನಮ್ಮ ಹುಡುಗಿ ಯಾರ ಜೊತೆಯಾದರೂ ಓಡಿ ಹೋದರೆ ನೀವು ಜವಾಬ್ದಾರಿ ತಗೋತೀರಾ? ಎಂದು ಕೆಲ ಪಾಲಕರು ಪ್ರಶ್ನಿಸುತ್ತಾರೆ. ಹಿರಿಯರ ಒತ್ತಾಸೆಗಾಗಿ, ರಕ್ತ ಸಂಬಂಧ ಉಳಿಸಿಕೊಳ್ಳಲು ಬಾಲ್ಯ ವಿವಾಹ ಮಾಡುತ್ತಿರುವುದಾಗಿ ಸಬೂಬು ಹೇಳುತ್ತಾರೆ.
ಆಗ ನಾವು, ನಿಮ್ಮ ಆಕಳಕರುಗಳನ್ನು ಒಕ್ಕಲುತನಕ್ಕೆ ಏಕೆ ಬಳಸುವುದಿಲ್ಲ? ಜೋಳ ಅಥವಾ ಇನ್ನಿತರ ಬೆಳೆಗಳನ್ನು ಕಟಾವಿಗೆ ಬರುವ ಮೊದಲು ಕಟಾವು ಮಾಡಿದರೆ ಏನಾಗುತ್ತದೆ? ಎಂದು ಪ್ರಶ್ನಿಸುತ್ತಾ, ಅವರಿಂದಲೇ ಉತ್ತರ ಹೇಳಿಸಿ ತಿಳುವಳಿಕೆ ಮೂಡಿಸುತ್ತೇವೆ ಎಂದು ಅವರು ಅನುಭವಗಳನ್ನು ಹಂಚಿಕೊಂಡರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಕಲಬುರಗಿ ಬಾಲ ನ್ಯಾಯ ಮಂಡಳಿ ಸದಸ್ಯರಾದ ಗೀತಾ ಸಜ್ಜನಶೆಟ್ಟಿ ಅವರು ಪೊಕ್ಸೊ 2012 ಕಾಯ್ದೆ ಮತ್ತು ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಕುರಿತು ಮಾಹಿತಿ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳು, ಸರ್ಕಾರಿ ಅಭಿಯೋಜಕರು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ ಪಾಟೀಲ್ ಸ್ವಾಗತಿಸಿದರು. ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ರಾಜೇಂದ್ರಕುಮಾರ ನಿರೂಪಿಸಿದರು.