ಚಿತಾಪುರಃ ಆಕ್ಸಿಜನ್ ಘಟಕ ಸ್ಥಾಪನೆಗೆ ಎಸಿಸಿ ಕಂಪನಿ ನಿರ್ಧಾರ- ಖರ್ಗೆ ಶ್ಲಾಘನೆ
ಆಕ್ಸಿಜನ್ ಘಟಕ ಸ್ಥಾಪನೆಗೆ ಮುಂದಾದ ಎಸಿಸಿ ಕಂಪನಿಃ ಮುಕ್ತಕಂಠದಿಂದ ಶ್ಲಾಘಿಸಿದ ಶಾಸಕ ಪ್ರಿಯಾಂಕ್ ಖರ್ಗೆ
ಚಿತ್ತಾಪುರಃ ಪಟ್ಟಣದಲ್ಲಿ ಆಕ್ಷಿಜನ್ ಘಟಕ ಸ್ಥಾಪನೆ ಮಾಡಲು ಮುಂದೆ ಬಂದಿರುವ ಎಸಿಸಿ ಕಂಪನಿಗೆ ಧನ್ಯವಾದ ಹೇಳಿರುವ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು, ತಮ್ಮ ಮನವಿಗೆ ಓಗೊಟ್ಟು ಆಕ್ಷಿಜನ್ ಘಟಕ ಸ್ಥಾಪಿಸಲು ನಿರ್ಧರಿಸಿರುವ ಕಂಪನಿಯ ನಿರ್ಧಾರವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸೋಂಕು ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದ್ದು ಆತಂಕ ಮೂಡಿಸಿದೆ. ಆಸ್ಪತ್ರೆಗಳಲ್ಲಿ ಆಕ್ಷಿಜನ್ ಕೊರತೆಯಿಂದಾಗಿ ಅಫಜಲ್ ಪುರ, ಚಾಮರಾಜನಗರ, ಕೋಲಾರ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಮುಂತಾದ ಕಡೆ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ.
” ನನ್ನ ಮತಕ್ಷೇತ್ರವಾದ ಚಿತ್ತಾಪುರದಲ್ಲಿಯೂ ಕೂಡಾ ಇಂತಹ ಪರಿಸ್ಥಿತಿ ಬಂದೊದಗದಿರಲಿ ಎಂದು ಮುಂದಾಲೋಚಿಸಿ ರಾಜ್ಯ ಸರ್ಕಾರ ಹಾಗೂ ಎಸಿಸಿ ಕಂಪನಿಗೆ ಚಿತ್ತಾಪುರ ಪಟ್ಟಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ವಾಡಿಯ ಎಸಿಸಿ ಕಂಪೆನಿಗೆ ಮನವಿ ಮಾಡಿಕೊಂಡಿದ್ದೆ.
ರಾಜ್ಯ ಸರ್ಕಾರದಿಂದ ಈ ಕುರಿತು ಇದೂವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಆದರೆ, ನನ್ನ ಮನವಿಗೆ ಸ್ಪಂದಿಸಿ ಚಿತ್ತಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಎಸಿಸಿ ಕಂಪೆನಿಯು ಮುಂದೆ ಬಂದಿರುವುದಕ್ಕೆ ಅವರಿಗೆ ಅನಂತಾನಂತ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಶ್ರೀ ಪ್ರಿಯಾಂಕ್ ಖರ್ಗೆ ಕಂಪನಿಯ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಬಹುಶಃ ಇನ್ನು 20 ದಿನಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಯಾಗುವ ನೀರಿಕ್ಷೆಯಿದ್ದು, ಈ ಘಟಕದಿಂದ ಪ್ರತಿ ನಿಮಿಷಕ್ಕೆ 160 ಲೀ. ಆಮ್ಲಜನಕ ಉತ್ಪಾದನೆಯಾಗಲಿದೆ. ಇದರಿಂದ ಪಟ್ಟಣದ ಆಸ್ಪತ್ರೆಗೆ ಮಾತ್ರವಲ್ಲದೇ, ಗ್ರಾಮೀಣ ಆಸ್ಪತ್ರೆಗಳಿಗೂ ಆಮ್ಲಜನಕವನ್ನು ಪೂರೈಕೆ ಮಾಡಬಹುದಾಗಿದೆ.
ಈಗಾಗಲೇ, ಚಿತ್ತಾಪುರದಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 24 ಐಸಿಯು ಬೆಡ್‌ಗಳಿದ್ದು, ಈ ಆಕ್ಸಿಜನ್ ಘಟಕ ಸ್ಥಾಪನೆಯಿಂದ ಆಕ್ಸಿಜನ್ ಸಹಿತ ಐಸಿಯು ಬೆಡ್‌ಗಳ ಸಂಖ್ಯೆಯನ್ನು 120 ಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗುವುದು.
ಚಿತ್ತಾಪುರದ ನಾಗಾವಿ ಕ್ಯಾಂಪಸ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿದ್ದು, ಇದರೊಟ್ಟಿಗೆ ಐಸಿಯು ಬೆಡ್‌ಗಳ ಸಂಖ್ಯೆಯೂ ಜಾಸ್ತಿಯಾದರೆ, ತಾಲೂಕಿನ ಜನರು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ತೆರಳುವ ಅವಶ್ಯಕತೆ ಇರುವುದಿಲ್ಲ.
ಒಟ್ಟಿನಲ್ಲಿ, ಚಿತ್ತಾಪುರ ತಾಲೂಕು ಕೊರೋನಾ ವಿರುದ್ಧ ಹೋರಾಡಲು ಸರ್ವಸನ್ನದ್ಧವಾಗಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿ ಚಿತ್ತಾಪುರ ಮಾದರಿಯನ್ನು ರಾಜ್ಯದೆಲ್ಲೆಡೆ ಅನುಸರಿಸುವ ಮೂಲಕ, ಬೆಡ್ ಹಾಗೂ ಆಕ್ಸಿಜನ್ ಕೊರತೆ ನೀಗಿಸಿ, ರಾಜ್ಯದ ಜನರ ಜೀವ ಉಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.