ನಗರಕ್ಕೆ ಕುಮಾರಸ್ವಾಮಿ ಕೊಡುಗೆ-ದರ್ಶನಾಪುರ ಅಭಿನಂದನೆ
ಯುಜಿಡಿ, ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಿಎಂ ಅಸ್ತು
ಯಾದಗಿರಿ, ಶಹಾಪುರಃ ಶಹಾಪುರ ನಗರಕ್ಕೆ ಒಳ ಚರಂಡಿ ಯೋಜನೆ ನಿರ್ಮಾಣ ಸೇರಿದಂತೆ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸುದ್ದಿಗಾರರಿಗೆ ತಿಳಿಸಿದರು.
ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಶುಕ್ರವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಿಎಂ ಕುಮಾರಸ್ವಾಮಿ ಅವರು, ತಮ್ಮ ಭಾಷಣದಲ್ಲಿ ಶಹಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ಯುಜಿಡಿ ಲೈನ್ ನಿರ್ಮಾಣ ಕುರಿತು ತಿಳಿಸಿದರು.
ನಾವು ಸಲ್ಲಸಿದ ಬೇಡಿಕೆಯಂತೆ ಶಹಾಪುರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಿದ್ಧಪಡಿಸಿದ್ದ ಅಂದಾಜು ಪತ್ರಿಕೆ ಅನ್ವಯ 184 ಕೋಟಿಗೂ ಅಧಿಕ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ.
ಅಲ್ಲದೆ ನಗರದಲ್ಲಿ ಒಳ ಚರಂಡಿ ಯೋಜನೆಗೂ ಅನುಮತಿ ನೀಡಿದ್ದು, ಕೂಡಲೇ ಪಟ್ಟಣದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಕಾರಣ ನಗರಕ್ಕೆ ಕೊಡುಗೆ ನೀಡಿದ ಸಿಎಂ ಕುಮಾರಸ್ವಾಮಿ ಅವರಿಗೆ ಶಹಾಪುರ ಜನತೆ ಪರವಾಗಿ ಮತ್ತು ವಯಕ್ತಿಕವಾಗಿ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದು ದರ್ಶನಾಪುರ ತಿಳಿಸಿದ್ದಾರೆ.