ಕಥೆ

ಆಗರ್ಭ ಶ್ರೀಮಂತಿಕೆ ಇದೆ ಆದರೆ ನಗು ಕೃತಕ

ದಿನಕ್ಕೊಂದು ಕಥೆ

ಸಂತೋಷದ ನಿಗೂಢ ಸ್ವರೂಪ

ಮೊನ್ನೆ ಆಕೆ ಮನೆಗೆ ಬಂದಿದ್ದಳು. ಆಕೆ ಸುಮಾರು ಮೂವತ್ತು ವರ್ಷ­ಗಳ ಹಿಂದೆ ನನ್ನ ವಿದ್ಯಾರ್ಥಿನಿಯಾಗಿದ್ದವಳು. ಅತ್ಯಂತ ಬೆಲೆ­ಬಾಳುವ ಕಾರಿನಲ್ಲಿ, ತುಂಬ ಬೆಲೆಬಾಳುವ ಬಟ್ಟೆಗಳನ್ನು ಧರಿಸಿ, ಬಹಳ ಬೆಲೆಯ ಸುಗಂಧ ಸಿಂಪಡಿ­ಸಿಕೊಂಡು ಬಂದಿದ್ದಳು. ಮುಖದ ತುಂಬೆಲ್ಲ ಪ್ಲಾಸ್ಟಿಕ್ ನಗೆ ಅಂಟಿಸಿ­­­ಕೊಂಡಿದ್ದಳು. ಮಾತನಾಡುತ್ತ ಕುಳಿತಾಗ, ‘ಈಗ ಹೇಗಿದ್ದೀ?’ ಎಂದು ಕೇಳಿದೆ.

ಅದೇಕೋ ಕ್ಷಣದಲ್ಲಿಯೇ ಪ್ಲಾಸ್ಟಿಕ್ ನಗೆ ಕರಗಿ ಹೋಯಿತು.
ಕೈಯ್ಯ­ಲ್ಲಿದ್ದ ವಸ್ತ್ರವನ್ನು ಕಣ್ಣಿಗೊತ್ತಿ­ಕೊಂಡು ಬಿಕ್ಕಿದಳು. ತನ್ನ ಕಥೆ ಹೇಳಿದಳು. ಅದು ಚಿನ್ನದ ಪಂಜರದಲ್ಲಿಯೇ ಉಳಿದ ಸುಂದರ ಹಕ್ಕಿಯ ಕಥೆ. ಮುಂದಿನ ಬೆಂಚಿ­ನಲ್ಲಿಯೇ ಕುಳಿತು, ಸುಂದರ ಮುಖದ, ಕಣ್ಣರಳಿಸಿ ಪಾಠ ಕೇಳುತ್ತಿದ್ದ ಈ ಹುಡು­ಗಿಯ ಅಂದಿನ ಚಹರೆ ತಕ್ಷಣ ನನ್ನ ಕಣ್ಣ ಮುಂದೆ ಬಂತು.

ಮಧ್ಯಮ ವರ್ಗದ ಮನೆ­­ಯಲ್ಲಿ ಎಷ್ಟು ಸಂತೋಷವಾ­ಗಿದ್ದಳಲ್ಲ ಆಕೆ!
ಇಂತಹ ಬಹಳಷ್ಟು ಮಂದಿ­ಯನ್ನು ನಾನು ಕಂಡಿದ್ದೇನೆ. ಪ್ರಪಂಚದ ಹೊಳೆಹೊಳೆ­ಯುವ ವಸ್ತುಗಳಲ್ಲಿ, ಹಣ­ದಲ್ಲಿ ಬಂಗಲೆಗಳಲ್ಲಿ, ಕಾರುಗಳಲ್ಲಿ ಸಂತೋಷ­ವಿ­ದೆಯೆಂದು ನಂಬಿ ಬದುಕನ್ನು ಒತ್ತೆ ಹಾಕಿ, ಏಕಾಂತದಲ್ಲಿ ಬಿಕ್ಕುವ ಜೀವ­ಗಳನ್ನು ಕಂಡಾಗ ಹೃದಯ ಮರು­ಗು­ತ್ತದೆ. ಹೀಗೆ ಅನಿಸಿದ ಒಂದು ಸಂದರ್ಭದಲ್ಲೇ ವಿಜಯಾ ದಬ್ಬೆಯವರ ಒಂದು ಕವನ ಓದಿದೆ. ರೇಷ್ಮೆ ವಸ್ತ್ರ, ಬಂಗಾರದ, ಮುತ್ತಿನ ಹಾರವನ್ನು ಕೊಟ್ಟ ಹುಡುಗ ನಿಜ­­ವಾಗಿಯೂ ತನ್ನನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆ ಹುಡುಗಿಗೆ. ಆದರೆ ಕೆಲ ಸಮ­­ಯದ ನಂತರ ಈ ತೋರಿಕೆಯ ಪ್ರೇಮದ ಹಿಂದೆ ಅದೆಂಥ ಹಿಂಸೆ ಇದೆ ಎಂಬ ಅರಿವು ಆಕೆಗೆ ಆಗುತ್ತದೆ.
ಈಗ,
ಈ ರೇಶಿಮೆಯ ವಸ್ತ್ರ ನೋಡಿ,
ಮತ್ತು ಚಿನ್ನದ ಬೆನ್ನು ನೋಡಿ
ನಡಗುತ್ತಿದೆ ಜೀವ.
ಈ ಮೋಹದ ವಸ್ತುಗಳೆಲ್ಲ
ಹಿಂಸೆಯಿಟ್ಟ ಮೊಟ್ಟೆಗಳೆಂದು
ನನಗೇಕೆ ತಿಳಿದಿರಲಿಲ್ಲ?
ಈಗ ಕಾಣುತ್ತಿದೆ;
ಬೇಯುವ ಕೋಶದಲ್ಲಿ
ವಿಲಗುಡುವ ಹುಳ
ಕೋಶದೊಳಗೇ ಮೈತರಚಿ
ಬಿಕ್ಕುವ ಮೃದ್ವಂಗಿ
ಈಗ ಆಕೆಗೆ ಹೊಳೆಯುವ ರೇಷ್ಮೆಯಾಗುವ ಮೊದಲು ಕುದಿದು, ಬೆಂದು, ಸತ್ತ, ಹುಳದ ನೋವು, ಮುತ್ತಾಗುವ ಮುನ್ನ ಚಿಪ್ಪಿನೊಳಗೇ ಸಂಕಟಪಟ್ಟ. ಮೈತರ­ಚಿ­ಕೊಂಡ ಮೃದ್ವಂಗಿಯ ನರಳಿಕೆ, ತಿಳಿದಿದೆ. ಹಿಂಸೆಯಿಲ್ಲದೇ ಪ್ರೀತಿ ಸಾಧ್ಯವಿಲ್ಲವೇ ಎಂಬ ಹುಡುಕಾಟ ನಡೆಸುತ್ತಾಳೆ.
ಇರಬಹುದೆ
ಕೃತಕ ರೇಷ್ಮೆ, ರೋಲ್ಡಗೋಲ್ಡಿನಲ್ಲಿ
ಪ್ಲಾಸ್ಟಿಕ್ಕಿನ ಮುತ್ತುಗಳಲ್ಲಿ
ಹಿಂಸೆಯಿಲ್ಲದ ಪ್ರೀತಿ?
ಎಲ್ಲಿದ್ದರೂ ಸರಿ
ಅದ ಹುಡುಕಬೇಕು
ಹೀಗೆ ಹಿಂಸೆಯಿಲ್ಲದ ಪ್ರೀತಿ, ವ್ಯವಹಾ­ರವಾಗದ ಸಂಬಂಧ ನಮ್ಮ ಹುಡು­ಕಾಟದ ಮುಖ್ಯ ವಸ್ತುವಾಗ­ಬೇಕು. ಸಂತೋಷ ಹೊರಗಿನ ವಸ್ತುಗಳ­ಲ್ಲಿಲ್ಲ. ಅದು ನಮ್ಮ ಆಂತರ್ಯದಲ್ಲಿದೆ ಎನ್ನುತ್ತದೆ ಭಾರತೀಯ ದರ್ಶನ. ತಾಯಿಯ ತೊಡೆಯ ಮೇಲೆ ಮಲಗಿ ನಿದ್ರಿಸುವ ಮುಗ್ಧ ಮಗು ಛಲ್ಲನೇ ಚಿಮ್ಮಿಸುವ ನಗೆಯ ಹಿಂದಿನ ಸಂತೋಷಕ್ಕೆ ಯಾವ ಕಾರಣ? ಪ್ರಮೋಷನ್, ಹಣ, ಕಾರು, ಬಂಗಲೆ, ಜನಮನ್ನಣೆ? ಯಾವುದರ ಚಿಂತೆ ಇಲ್ಲದೇ ನಗುವ ಮಗುವಿನ ಸಂತೋಷ ನಮ್ಮ ಒಳಗೇ ಇದ್ದದ್ದು. ಅದನ್ನು ಹೊರಗಡೆಗೆ ಹುಡುಕುವ ಪ್ರಯತ್ನ ದೀಪದ ಹುಳು ಬೆಂಕಿಯಲ್ಲಿ ಶಾಂತಿ­ಯನ್ನು ಪಡೆಯಲು ಪ್ರಯತ್ನಿಸಿದಂತೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

One Comment

  1. ಸಮಾಜದ ವಾಸ್ತವಿಕ ಬದುಕಿಗೆ ಮುಖಾಮುಖಿಯಾಗುವ ಬರಹ ಸರ್

Leave a Reply

Your email address will not be published. Required fields are marked *

Back to top button